ರಾಜ್ಯಸಭೆ ಉಪ ಸಭಾಪತಿ ಪ್ರಾಯಶಿತ್ತ ಉಪವಾಸ ಅಂತ್ಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.23-ಕೃಷಿ ಮಸೂದೆಗಳ ಅನುಮೋದನೆ ವೇಳೆ ವಿರೋಧ ಪಕ್ಷಗಳ ಸದಸ್ಯರು ಸದನದಲ್ಲಿ ತಮ್ಮ ವಿರುದ್ಧ ತೋರಿದ ಅನುಚಿತ ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ 24 ತಾಸುಗಳ ಪ್ರಾಯಶ್ಚಿತ್ತ ಉಪವಾಸ ವ್ರತ ಆಚರಿಸಿದ್ದ ರಾಜ್ಯಸಭೆ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್ ಇಂದು ಬೆಳಗ್ಗೆ ನಿರಶನ ಅಂತ್ಯಗೊಳಿಸಿದ್ದಾರೆ.

ನಮ್ಮ ನಿರಶನದಿಂದ ಅವರ (ಪ್ರತಿಪಕ್ಷಗಳ ನಾಯಕರ) ಸ್ವಯಂ ಆತ್ಮಶುದ್ಧಿಗೆ ಮತ್ತು ಪರಿವರ್ತಿನೆಗೆ ಸ್ಫೂರ್ತಿಯಾಗಿರಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿನ್ನೆ ಬೆಳಗ್ಗೆಯಿಂದ 24 ತಾಸುಗಳ ಕಾಲ ಉಪವಾಸ ವ್ರತ ಮಾಡಿದ್ದ ಹರಿವಂಶ್ ಅವರು ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರ ಜನ್ಮದಿನವಾದ ಬೆಳಗ್ಗೆ ನಿರಶನ ಕೊನೆಗೊಳಿಸಿದ್ಧಾರೆ.

ಉಪ ರಾಷ್ಟ್ರಪತಿಯೂ ಆಗಿರುವ ಮೇಲ್ಮನೆ ಸಭಾಪತಿ ಡಾ. ಎಂ. ವೆಂಕಯ್ಯ ನಾಯ್ಡು ಅವರಿಗೆ ನಿನ್ನೆ ಪತ್ರ ಬರೆದಿದ್ದ ಉಪ ಸಭಾಪತಿ, ಭಾನುವಾರ ಸದನದಲ್ಲಿ ನಡೆದ ಗದ್ದಲ, ಕೋಲಾಹಲ, ಸಭಾಪತಿ ಪೀಠಕ್ಕೆ ವಿರೋಧಪಕ್ಷಗಳ ಸದಸ್ಯರ ಮುತ್ತಿಗೆ ಮತ್ತು ತಮ್ಮೊಂದಿಗೆ ಅಮಾನವೀಯ ರೀತಿಯಲ್ಲಿ ನಡೆದುಕೊಂಡ ವರ್ತನೆಗಳ ಬಗ್ಗೆ ಉಲ್ಲೇಖಿಸಿದ್ದರು.

ವಿಪಕ್ಷ ಸದಸ್ಯರು ಪ್ರಜಾಪ್ರಭುತ್ವದ ಹೆಸರಿನಲ್ಲಿ ಹಿಂಸಾ ಮಾರ್ಗ ಅನುಸರಿಸಿದ್ದಾರೆ. ಸಭಾಪತಿ ಸ್ಥಾನಕ್ಕೆ ಲಗ್ಗೆ ಹಾಕಿ ಪೀಠಾಸೀನ ವ್ಯಕ್ತಿಗೆ ಬೆದರಿಕೆ ಹಾಕಿ ಸದನದ ಘನತೆ ಮತ್ತು ಗೌರವವನ್ನು ಗಾಳಿಗೆ ತೂರಿದ್ದಾರೆ ಎಂದು ಹರಿವಂಶ ನಾರಾಯಣ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಸೆ.20ರಂದು ನನ್ನ ಕಣ್ಣಮುಂದೆ ನಡೆದ ಘಟನೆಯಿಂದ ಮನಸ್ಸಿಗೆ ಅತೀವ ನೋವಾಗಿದೆ. ಸಂಸತ್ತಿನ ಘನತೆಗೆ ವಿರೋಧ ಪಕ್ಷಗಳು ಘಾಸಿಗೊಳಿಸಿವೆ ಎಂದು ಅವರು ನೊಂದು ನುಡಿದಿದ್ದಾರೆ.

Facebook Comments