ಬಾಂಬ್ ತಯಾರಿಕೆಯಲ್ಲಿ ಎಕ್ಸ್‌ಪರ್ಟ್‌ ಆಗಿದ್ದ ಆದಿತ್ಯ : ಪೊಲೀಸ್ ಆಯುಕ್ತ ಹರ್ಷ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು,ಜ.23- ವಿಮಾನನಿಲ್ದಾಣದಲ್ಲಿ ಕೆಲಸ ಕೊಡದ ಕಾರಣಕ್ಕಾಗಿ ಬೇಸರಗೊಂಡಿದ್ದ ಆದಿತ್ಯರಾವ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದಾನೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಸುದೀರ್ಘ ವಿವರಣೆ ನೀಡಿದ ಅವರು, ಆದಿತ್ಯರಾವ್ ಈ ಮೊದಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 25 ಸಾವಿರ ರೂ. ವೇತನದ ಭದ್ರತಾ ಸಿಬ್ಬಂದಿ ಕೆಲಸ ಖಾಲಿ ಇದೆ ಎಂದು ತಿಳಿದು ಅದಕ್ಕಾಗಿ ಮನವಿ ಸಲ್ಲಿಸಿದ್ದ.

ಆದರೆ ಈತನ ವಿದ್ಯಾರ್ಹತೆ ಹೆಚ್ಚಿದ್ದ ಕಾರಣಕ್ಕಾಗಿ ಕೆಲಸ ನಿರಾಕರಿಸಲಾಯಿತು. ಇದರಿಂದ ಅಸಮಾಧಾನಗೊಂಡ ಆತ ವಿಮಾನ ನಿಲ್ದಾಣದಲ್ಲಿ ಇರುವವರಿಗೆ ತೊಂದರೆ
ಕೊಡಬೇಕೆಂಬ ನಿರ್ಧಾರ ಮಾಡಿಕೊಂಡಿದ್ದ. ಆನಂತರ ವಿಮಾನ ನಿಲ್ದಾಣದ ಕೆಲಸಗಳ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿದ. ಯಾರು ಯಾವ ರೀತಿಯ ಕೆಲಸ ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದ.

2018ರಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಂದೇ ದಿನ ಎರಡು ಬಾರಿ ಹುಸಿ ಬಾಂಬ್ ಕರೆ ಮಾಡಿದ್ದ. ಒಂದು ಕರೆಯನ್ನು ಏರ್ ಏಷ್ಯಾವಿಮಾನಯಾನ ಕಂಪನಿಗೆ, ಮತ್ತೊಂದು ಕರೆಯನ್ನು ಏರ್ ಟರ್ಮಿನಲ್ ಮ್ಯಾನೇಜರ್‍ಗೆ ಮಾಡಿದ್ದ. ಆ ದಿನ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿತ್ತು. ಈ ಬಗ್ಗೆ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ 77/2018, 79/2018 ಸಂಖ್ಯೆಯ ಪ್ರಕರಣ ದಾಖಲಾಗಿತ್ತು.

ಬೆಂಗಳೂರುನಗರ ರೈಲ್ವೆ ನಿಲ್ದಾಣಕ್ಕೂ ಹುಸಿ ಬಾಂಬ್ ಕರೆ ಮಾಡಿ ಬೆದರಿಕೆ ಹಾಕಿದ್ದರಿಂದ 173/2018 ಕ್ರಮಸಂಖ್ಯೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದಿತ್ಯರಾವ್‍ನನ್ನು ದಸ್ತಗಿರಿ ಮಾಡಿ ಆರೋಪಪಟ್ಟಿ ಸಲ್ಲಿಸಿದ್ದರಿಂದಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಈ ಮೂರು ಪ್ರಕರಗಳಗಲ್ಲಿ ಸಜೆಯಾಗಿತ್ತು. ಸುಮಾರು 11 ತಿಂಗಳ ಕಾಲ ಚಿಕ್ಕಬಳ್ಳಾಪುರ ಜೈಲಿನಲ್ಲಿದ್ದ.

ಆ ಅವಧಿಯಲ್ಲಿ ಆತ ಅಂತರ್ಮುಖಿಯಾಗಿದ್ದ. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಜೈಲಿನಿಂದ ಹೊರಬಂದಾಗ ಸ್ವಲ್ಪದಿನ ಓಡಾಡಿಕೊಂಡಿದ್ದ. ಕೇವಲ ಬೆದರಿಕೆ ಕರೆಗಳಿಗಷ್ಟೇ ಸೀಮಿತವಾಗದೇ ದೊಡ್ಡದಾಗಿ ಇನ್ನೇನ್ನೋ ಮಾಡಬೇಕೆಂಬ ಯೋಚನೆ ಮಾಡಿ ಇಂಟರ್‍ನೆಟ್ ಹಾಗೂ ಬೇರೆ ಬೇರೆ ಮೂಲಗಳಲ್ಲಿ ದೊರೆಯುವ ಬಾಂಬ್ ತಯಾರಿಕೆಯ ಮಾಹಿತಿ ಆಧರಿಸಿ ಸ್ಪೋಟಕ ತಯಾರಿಸುವುದನ್ನು ಕಲಿಯಲಾರಂಭಿಸಿದ.

ಈವರೆಗಿನ ತನಿಖೆ ಮಾಹಿತಿ ಪ್ರಕಾರ ಆದಿತ್ಯರಾವ್‍ಗೆ ಹಲವಾರು ರೀತಿಯ ಸ್ಪೋಟಕಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಮತ್ತು ಬಾಂಬ್ ತಯಾರಿಕೆಯಲ್ಲಿ ಪರಿಣಿತಿ ಹೊಂದಿದ್ದಾನೆ.
ಬಾಂಬ್ ತಯಾರಿಕೆಗೆ ಕಚ್ಚಾ ವಸ್ತುಗಳು ಎಲ್ಲೆಲ್ಲಿ ಸಿಗುತ್ತವೆ ಎಂಬ ಬಗ್ಗೆಯೂ ಹುಡುಕಾಡಿದ್ದಾನೆ. ಮುಕ್ತ ಮಾರುಕಟ್ಟೆಯಲ್ಲಿ ಖರೀದಿಗೆ ಹೋದರೆ ಸಿಕ್ಕಿ ಬೀಳಬಹುದೆಂಬ ಕಾರಣಕ್ಕಾಗಿ ಮತ್ತೆ ಇಂಟರ್‍ನೆಟ್ ಮೂಲವನ್ನೇ ಅವಲಂಬಿಸಿದ್ದಾನೆ.

ಸುಧಾರಿತ ಸ್ಫೋಟಕ ತಯಾರಿಕೆ ಬಗ್ಗೆ ಸಂಪೂರ್ಣ ಕಲಿತುಕೊಂಡು ನಂತರ ಅದಕ್ಕೆ ಅಗತ್ಯವಾದ ಸಾಮಾಗ್ರಿಗಳನ್ನು ಆನ್‍ಲೈನ್‍ನಲ್ಲಿ ಖರೀದಿಸಿ ಅಪೂರ್ಣವಾದ ಬಾಂಬ್‍ವೊಂದನ್ನು ಸಿದ್ದಪಡಿಸಿದ್ದ. ಅದನ್ನು ಪ್ರಯೋಗಿಸುವ ಮೊದಲು ಸಾಕಷ್ಟು ಪರೀಕ್ಷೆಗಳನ್ನು ನಡೆಸಿದ್ದ. ತನ್ನ ಯೋಜನೆಯ ಕಾರ್ಯಗತಕ್ಕಾಗಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳಿ ಡಿಸೆಂಬರ್ ಮೊದಲ ವಾರದಲ್ಲಿ ಅಲ್ಲಿನ ಕೂಡ್ಲ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಕೆಲಸಕ್ಕೆ ಸೇರಿಕೊಂಡ. ಅಲ್ಲಿಗೆ ತಾನು ಬಾಂಬ್ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಸ್ಥಳಾಂತರಿಸಿದ್ದ.

ಆತನ ಸಹೋದ್ಯೋಗಿಗಳು ಅನುಮಾನಗೊಂಡು ಪ್ರಶ್ನಿಸಿದಾಗ ಬೇರೆ ಬೇರೆ ಉತ್ತರಗಳನ್ನು ಹೇಳಿದ್ದ. ತಿಂಗಳಲ್ಲಿ ದೊರೆಯುವ 4 ವಾರದ ರಜೆಯಲ್ಲಿ ಸಂಪೂರ್ಣವಾಗಿ ಬಾಂಬ್ ತಯಾರಿಕೆಯ ಬಗ್ಗೆಯೇ ತರಬೇತಿ ಪಡೆದಿದ್ದ. ಹೆಚ್ಚು ದಿನ ಇದೇ ಸ್ಥಳದಲ್ಲಿ ಇದ್ದರೆ ಅನುಮಾನ ಬಂದು ಸಿಕ್ಕಿಬೀಳಬಹುದು ಎಂಬ ಕಾರಣಕ್ಕಾಗಿ ಕೆಲಸ ಬಿಟ್ಟು ಕಾರ್ಕಳದ ಹೋಟೆಲ್‍ಗೆ ಕೆಲಸಕ್ಕೆ ಸೇರಿಕೊಂಡ.

ಜ.20ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಡಬೇಕೆಂದು ನಿರ್ಧರಿಸಿ ಮುಂಚಿತವಾಗಿ ಜ.19ರಂದುಮೂರ್ನಾಲ್ಕು ಬಾರಿ ಸುತ್ತಾಡಿ ಪರಿಶೀಲನೆ ನಡೆಸಿದ್ದಾನೆ. ನಿಗದಿತ ದಿನದಂದು ಕಾರ್ಕಳದಿಂದ ಬಸ್‍ನಲ್ಲಿ ಬಂದು ಸ್ಟೇಟ್‍ಬ್ಯಾಂಕ್ ಸರ್ಕಲ್‍ನಲ್ಲಿ ಇಳಿದು ರಾಜ್‍ಕುಮಾರ್ ಬಸ್ ಹತ್ತಿ ವಿಮಾನ ನಿಲ್ದಾಣದ ಬಳಿ ಬಂದು ಅಲ್ಲಿಂದ ಆಟೋದಲ್ಲಿ ಪ್ರಯಾಣಿಸುವ ಮಾರ್ಗ ಮಧ್ಯೆ ಸಿಗುವ ಸೆಲೂನ್‍ವೊಂದರ ಬಳಿ ಬ್ಯಾಗ್ ಇಟ್ಟು ಮತ್ತೊಂದು ಬ್ಯಾಗ್‍ನಲ್ಲಿದ್ದ ಬಾಂಬ್‍ನ್ನು ವಿಮಾನ ನಿಲ್ದಾಣದಲ್ಲಿಟ್ಟು ಬೇರೆ ಆಟೋದಲ್ಲಿ ಹೋಗಿದ್ದಾನೆ. ಈ ಸಂದರ್ಭದಲ್ಲಿ ಗುರುತು ಮರೆಮಾಚಲು ಟೋಪಿ ಧರಿಸಿದ್ದಾನೆ.

ನಂತರ ಬೆಂಗಳೂರಿಗೆ ಹೋಗಿ ಪೊಲೀಸ್ ಮಹಾನಿರ್ದೇಶಕರ ಎದುರು ಶರಣಾಗಿದ್ದಾನೆ. ಸುದೀರ್ಘ ವಿಚಾರಣೆ ಬಳಿಕ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟವನು ಆದಿತ್ಯರಾವ್ ಎಂದು ಸ್ಪಷ್ಟವಾಗಿದೆ. ಆತನ ವಿರುದ್ಧ ಎರಡು ಗಂಭೀರ ಸ್ವರೂಪದ ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.

ಆರೋಪಿಯ ಹಿನ್ನೆಲೆ: 37 ವರ್ಷದ ಆದಿತ್ಯರಾವ್ ಮೂಲತಃ ಮಣಿಪಾಲದವನು. ಮೈಸೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಇ ಮೆಕಾನಿಕಲ್ ಪದವಿ, ಮತ್ತೊಂದು ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿದ್ದಾನೆ. ಹಲವಾರು ಖಾಸಗಿ ಬ್ಯಾಂಕಿಂಗ್ ಮತ್ತು ವಿಮಾಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾನೆ. ಎಲ್ಲಿಯೂ ದೀರ್ಘಾವಧಿವರೆಗೂ ಕೆಲಸ ಮಾಡಿಲ್ಲ. ಸಂಕ್ಷಿಪ್ತ ಅವಧಿಯಲ್ಲೇ ಕೆಲಸ ಬಿಟ್ಟು ಹೋಗಿದ್ದಾನೆ.

ಕೊನೆಗೆ ಒಳಾಂಗಣದ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡು ತನ್ನ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಮೆಕಾನಿಕಲ್ ಎಂಜಿನಿಯರಿಂಗ್ ಹುದ್ದೆಯಲ್ಲಿ ಮುಂದುವರೆಯಲು ನಿರ್ಧರಿಸಿ ಪೀಣ್ಯಾದ ಆಟೋಮೊಬೈಲ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಅಲ್ಲಿಗೆ ದಾಖಲೆಗಳನ್ನು ಸಲ್ಲಿಸುವಾಗ ಅನುಭವ ಪ್ರಮಾಣಪತ್ರಗಳನ್ನು ತಿದ್ದಿದ್ದ. ಪರಿಶೀಲನೆ ನಡೆದರೆ ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂದು ಎರಡು ತಿಂಗಳಲ್ಲೇ ಕೆಲಸ ಬಿಟ್ಟಿದ್ದ.

ತನ್ನ ಬುದ್ದಿವಂತಿಕೆಗೆ ತಕ್ಕಂತ ಕೆಲಸ ಸಿಕ್ಕಿಲ್ಲ ಎಂಬ ಅಸಮಾಧಾನದಿಂದ ವೈಟ್ ಕಾಲರ್ ಜಾಬ್ ಬೇಡ, ಬ್ಲೂ ಕಾಲರ್ ಜಾಬ್ ಮಾಡಬೇಕೆಂದು ನಿರ್ಧರಿಸಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿಕೊಂಡ. ಹಲವೆಡೆ ಸೆಕ್ಯೂರಿಟಿ ಕೆಲಸ ಮತ್ತು ವಿವಿಧ ಹೋಟೆಲ್‍ಗಳಲ್ಲಿ ಕೆಲಸ ಮಾಡಿದ್ದಾನೆ. ಒಂದು ಹಂತದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಕೆಲಸ ಕೇಳಿಕೊಂಡು ಹೋಗಿ ಅದು ಸಿಗದೆ ಇದ್ದಾಗ ವಿಮಾನ ನಿಲ್ದಾಣದ ಸಿಬ್ಬಂದಿಗಳಿಗೆ ತೊಂದರೆ ಮಾಡಬೇಕೆಂದು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿಸಿದರು.

Facebook Comments