ಮಂಗನ ಕಾಯಿಲೆ ನಿಯಂತ್ರಣಕ್ಕೆ ಸರ್ಕಾರ ವಿಫಲ, ವಿಧಾನಸಭೆಯಲ್ಲಿ ಹರತಾಳ ಹಾಲಪ್ಪ ಧರಣಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.16- ಮಂಗನ ಕಾಯಿಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಆಡಳಿತ ಪಕ್ಷದ ಶಾಸಕ ಹರತಾಳ ಹಾಲಪ್ಪ ಧರಣಿಗೆ ಮುಂದಾದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು. ಪಶ್ನೋತ್ತರ ಅವಧಿ ಬಳಿಕ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಹರತಾಳ ಹಾಲಪ್ಪ ಅವರು, ಈ ವರ್ಷ ಮಂಗನ ಕಾಯಿಲೆಯಿಂದ 4 ಮಂದಿ ಸಾವನ್ನಪ್ಪಿದ್ದಾರೆ.

ಕರೊನಾ ಬಗ್ಗೆ ವಹಿಸುತ್ತಿರುವ ಎಚ್ಚರಿಕೆ ಮಂಗನ ಕಾಯಿಲೆ ಬಗ್ಗೆ ವಹಿಸುತ್ತಿಲ್ಲ. ಕಳೆದ ವರ್ಷ 23 ಜನ ಸಾವನ್ನಪ್ಪಿದ್ದಾರೆ. ಸಾಕಷ್ಟು ಮಂದಿ ಸಂತ್ರಸ್ತರಾಗಿದ್ದಾರೆ. ಈ ಕಾಯಿಲೆಗೆ ಔಷಧಿ ಕಂಡು ಹಿಡಿಯಲಾಗಿದೆಯೇ? ಈ ಹಿಂದೆ ಪ್ರಯೋಗಾಲಯ ಸ್ಥಾಪನೆಗೆ ನೀಡಲಾದ 5 ಕೋಟಿ ರೂ. ಏನಾಗಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿ ಅರಗ ಜ್ಞಾನೇಂದ್ರ, ಮಂಗನ ಕಾಯಿಲೆ ಬಗ್ಗೆ ಸರ್ಕಾರದ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ನಿರ್ದಿಷ್ಟ ಔಷಧಿ ಇಲ್ಲ. ನೀಡುತ್ತಿರುವ ಇಂಜಕ್ಷನ್‍ಗೆ ವೈರಾಣು ಜಗ್ಗುತ್ತಿಲ್ಲ. ಪ್ರಯೋಗಾಲಯ ಸಂಶೋಧನೆಗೆ ಹೆಚ್ಚು ಅನುದಾನ ನೀಡಬೇಕು. ಕರೊನಾದಿಂದ ಸಾವನ್ನಪ್ಪಿದವರಿಗೆ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಮಂಗನ ಕಾಯಿಲೆಯಿಂದ ಸತ್ತವರಿಗೂ ಪರಿಹಾರ ನೀಡಬೇಕು ಎಂದು ಹೇಳಿದರು.

ಆಗ ಆರೋಗ್ಯ ಸಚಿವ ಶ್ರೀರಾಮುಲು ಹಾಜರಿರಲಿಲ್ಲ. ಉತ್ತರ ಯಾರೂ ಹೇಳಬೇಕೆಂಬುದೇ ಗೊಂದಲವಾಗಿತ್ತು. ತೀವ್ರ ಸಿಟ್ಟಾದ ಹಾಲಪ್ಪ, ಹೀಗಾದರೆ ಜನರಿಗೆ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ನಾನು ಧರಣಿ ನಡೆಸಬೇಕಾಗುತ್ತದೆ ಎಂದು ತಮ್ಮ ಕೈಯಲ್ಲಿದ್ದ ಕಾಗದ ಎಸೆದು ಪ್ರತಿಭಟನೆಗೆ ಮುಂದಾದರು. ಇದಕ್ಕೆ ಜೆಡಿಎಸ್‍ನ ಅನ್ನದಾನಿ, ಕಾಂಗ್ರೆಸ್‍ನ ಕೃಷ್ಣಭೈರೇಗೌಡ ಬೆಂಬಲ ವ್ಯಕ್ತಪಡಿಸಿದರು.

ಕೃಷ್ಣಭೈರೇಗೌಡರು ಮಾತನಾಡಿ, ಒಂದೂವರೆ ವರ್ಷದಿಂದ ಹಾಲಪ್ಪ ಅವರು ಈ ಕುರಿತಂತೆ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ, ಅಲ್ಲಿನ ಮಂಗನ ಕಾಯಿಲೆ ಗಂಭೀರವಾಗಿದೆ. ಸರ್ಕಾರ ಹೆಚ್ಚು ಆಸಕ್ತಿ ವಹಿಸಬೇಕಿದೆ ಎಂದರು. ಈ ವೇಳೆ ತಮ್ಮ ಕ್ಷೇತ್ರದಲ್ಲೂ ಮಂಗನ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ಔಷಧಿ ಪ್ರಯೋಜನಕಾರಿಯಾಗಿಲ್ಲ. ಮಂಗಗಳು ಸಾಯುತ್ತಿವೆ ಎಂದು ಸಭಾಧ್ಯಕ್ಷ ಕಾಗೇರಿ ಆತಂಕ ವ್ಯಕ್ತಪಡಿಸಿದರು. ಎಂ.ಪಿ ಕುಮಾರಸ್ವಾಮಿ ಕೂಡ ಇದನ್ನು ಅನುಮೋದಿಸಿದರು.

ಈ ವೇಳೆ ಸದನಕ್ಕೆ ಬಂದ ಸಚಿವ ಶ್ರೀರಾಮುಲು ಸಾಗರ ಹಳ್ಳಿಗೋನಲ್ಲಿ ಈ ವರ್ಷ 170 ಮಂದಿಗೆ , ರಾಜ್ಯದ 445 ಮಂದಿ ಸೋಂಕು ತಗುಲಿದೆ. ಕಳೆದ ವರ್ಷ 15 ಜನ ಸತ್ತಿದ್ದಾರೆ. ಈ ವರ್ಷ ಮೂರ್ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದಾಗ, ಮತ್ತೆ ಹಾಲಪ್ಪ ಸಿಟ್ಟಾದರು. ದ , ಏನೆಂದು ಹೇಳುತ್ತೀರಿ, 23 ಮಂದಿ ಸತ್ತಿದ್ದಾರೆ, 15 ಜನ ಎಂದು ಲೆಕ್ಕ ಕೊಡುತ್ತೀರಿ. ಉಳಿದವರು ಎಲ್ಲಿ ಹೋಗಬೇಕು ಎಂದು ಆಕ್ರೋಶದಿಂದ ನುಡಿದರು.

ಇದರಿಂದ ತಬ್ಬಿಬ್ಬಾದ ಶ್ರೀರಾಮುಲು ಅಣ್ಣಾ…. ನೀನು ಹಿಂಗೆ ಮಾತನಾಡಿದರೆ, ನಾನು ಏನು ಮಾತನಾಡಲಿ ಎಂದು ಹೇಳುತ್ತಾ ಅಸಹಾಯಕರಂತೆ ಕುಳಿತರು. ಆ ವೇಳೆ ಅರಗ ಜ್ಞಾನೇಂದ್ರ ಮಾತನಾಡಿ, ಸಾಮಾನ್ಯ ಜನರು ನಾಯಿ, ನರಿಗಳಂತೆ ಸಾಯುತ್ತಿದ್ದಾರೆ. ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಅಧಿಕಾರಿಗಳಿಗೆ ಮತ್ತು ಅವರ ಮಕ್ಕಳಿಗೆ ಮಂಗನ ಕಾಯಿಲೆ ಬರಬೇಕೆಂದು ಆಕ್ರೋಶ ಹೊರಹಾಕಿದರು.
ಮತ್ತೆ ಶ್ರೀರಾಮುಲು ಉತ್ತರ ನೀಡಲು ಎದ್ದು ನಿಂತಾಗ ಶಾಸಕರ ಆಕ್ರೋಶ ತೀವ್ರಗೊಂಡಿತು. ನಂತರ ಶ್ರೀರಾಮುಲು ಮೌನವಾಗಿ ಕುಳಿದರು.

Facebook Comments