ಶುಂಠಿ ಬೆಳೆ ಮಧ್ಯೆ ಬೆಳೆದಿದ್ದ 70 ಕೆ.ಜಿ ಗಾಂಜಾ ವಶ, ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಸೆ.10- ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಡ್ರಗ್ಸ್ ಜಾಲ ಬೆಳಕಿಗೆ ಬಂದ ನಂತರ ಅಕ್ರಮವಾಗಿ ಗಾಂಜಾ ಬೆಳೆಯುತ್ತಿರುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ಕೆಜಿಎಫ್‍ನ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 1 ಕೋಟಿರೂ.ಗಳಿಗೂ ಹೆಚ್ಚು ಮೌಲ್ಯದ ಗಾಂಜಾ ವಶಪಡಿಸಿಕೊಂಡ ಬೆನ್ನಲ್ಲೇ ಜಿಲ್ಲೆಯ ಸುಮಾರು ಐದು ಎಕರೆ ಜಮೀನಿನಲ್ಲಿ ಬೆಳೆಗಳ ಮಧ್ಯೆ ಬೆಳೆಯಲಾಗಿದ್ದ 15 ಲಕ್ಷ ಮೌಲ್ಯದ 70 ಕೆಜಿ ಅಕ್ರಮ ಗಾಂಜಾ ಬೆಳೆಯನ್ನು ನಾಶಪಡಿಸಲಾಗಿದೆ.

ಅಬಕಾರಿ ಡಿಸಿ ಗೋಪಾಕೃಷ್ಣಗೌಡ ನೇತೃತ್ವದ ತಂಡ ಅರಕಲಗೂಡು ತಾಲ್ಲೂಕಿನ ಹೊಡೆನೂರು ಗ್ರಾಮದ ಮೂವರು ರೈತರು ತಮ್ಮ ಜಮೀನಿನ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಬೆಳೆ ವಶಪಡಿಸಿಕೊಂಡಿದ್ದಾರೆ.

ಶುಂಠಿ ಬೆಳೆಯಲು ಕರ್ನಾಟಕಕ್ಕೆ ಬಂದ ಕೆಲವು ಕೇರಳ ಮೂಲದ ಮಂದಿಯೇ ರೈತರಿಗೆ ಗಾಂಜಾ ಬೀಜ ನೀಡಿ ಅವರ ಜಮೀನಿನಲ್ಲಿ ಗಾಂಜಾ ಬೆಳೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಅಷ್ಟೇ ಅಲ್ಲದೆ ತಾವೇ ಬೀಜ ನೀಡಿ ಬೆಳೆಸಿದ ಗಾಂಜಾ ಖರೀದಿಸಿ ಕಳ್ಳ ಸಾಗಣೆ ಮಾಡುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸೋಮೇಶ್, ದೇವರಾಜ್ ಹಾಗೂ ಪ್ರಕಾಶ್ ಎಂಬುವರನ್ನು ಬಂಧಿಸಲಾಗಿದೆ.

ಇವರು ತಮ್ಮ ಜಮೀನಿನಲ್ಲಿ ಶುಂಠಿ, ಕೋಸು ಹಾಗೂ ಜೋಳದ ಬೆಳೆಗಳ ಮಧ್ಯೆ ಅಲ್ಲಲ್ಲಿ ಗಾಂಜಾ ಗಿಡವನ್ನು ಹುಲುಸಾಗಿ ಬೆಳೆಸಿದ್ದರು. ಇದೇ ರೀತಿ ಕೆಲವು ದಿನಗಳ ಹಿಂದೆ ಆಲೂರು ತಾಲೂಕಿನಲ್ಲೂ ಕೂಡ ವ್ಯಕ್ತಿಯೊಬ್ಬ ಜಮೀನಿನಲ್ಲಿ ಗಾಂಜಾ ಬೆಳೆದು ಪೊಲೀಸರ ಅತಿಥಿಯಾಗಿದ್ದ.

ಇತ್ತೀಚಿನ ಕೆಲ ಪ್ರಕರಣ ಗಮನಿಸಿದರೆ ರೈತರಿಗೆ ಕೆಲವರು ಹಣದಾಸೆ ತೋರಿಸಿ ಅವರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುವಂತೆ ಪ್ರೋತ್ಸಾಹಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.

Facebook Comments