ಹಾಸನಾಂಭೆ ದರ್ಶನಕ್ಕೆ ನಾಳೆ ತೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ : ಹಾಸನದ ಅದಿದೇವತೆ ಹಾಸನಾಂಬೆಯ ಪ್ರಸಕ್ತ ವರ್ಷದ ಸಾರ್ವಜನಿಕ ದರ್ಶನ ನಾಳೆ‌ ಬೆಳಗ್ಗೆ (6.00) ಕ್ಕೆ‌ ಅಂತ್ಯವಾಗಲಿದೆ. ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುತ್ತಿದೆ.

ಶನಿವಾರದಿಂದ ಸತತ ರಜೆ ಇರುವ ಕಾರಣ ದೇವಾಲಯಕ್ಕೆ ಭಕ್ತ‌ಸಾಗರವೇ ಹರಿದು ಬಂತು. ನಗರದ ಸಂತೆ ಪೇಟೆ ವರೆಗೂ ಸರತಿ‌ ಸಾಲು ನಿಂತ ಭಕ್ತರ ಸಾಲು ತಡ ರಾತ್ರಿವರೆಗೆ ದರ್ಶನ ಪಡೆದಿರುವುದು ವಿಶೇಷ. ರಾಜ್ಯದ ನಾನಾ ಮೂಲೆಗಳಿಂದ ಹಲವಾರು ನ್ಯಾಯಾಧೀಶರು, ಚುನಾಯಿತ ಪ್ರತಿನಿಧಿಗಳು, ರಾಜಕಾರಣಿಗಳು, ಹಿರಿಯ ಅಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ದೇವಿಯ ದರ್ಶನಕ್ಕೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.

# ದರ್ಶನ ಪಡೆದ ಪ್ರಮುಖರು;
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬ ವರ್ಗ, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಉಸ್ತುವಾರಿ ಸಚಿವ ಮಾಧುಸ್ವಾಮಿ, ವಿಧಾನ ಪರಿಷತ್ ಮಾಜಿ‌ ಸದಸ್ಯೆ ತಾರ,ಹಿರಿಯ ಚಿತ್ರ ನಟಿ ಗೀತಾ, ಹಿರಿಯ ಚಿತ್ರನಟ ದೊಡ್ಡಣ್ಣ, ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಾಲು ಮರದ ತಿಮ್ಮಕ್ಕ, ಡಿಕೆಶಿ ಪತ್ನಿ ಉಷಾ, ಎಂ ಎಲ್ ಸಿ ,ಎಂ.ಎ.ಗೋಪಾಲ್ ಸ್ವಾಮಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಸೇರಿದಂತೆ ಹಲವರು ಹಾಸನಾಂಭ ದರ್ಶನ ಪಡೆದಿದ್ದಾರೆ.

# ವರ್ಷಕ್ಕೊಮ್ಮೆ ದರ್ಶನ ;
ರಾಜ್ಯದಲ್ಲಷ್ಟೇ ಅಲ್ಲ, ಅನ್ಯ ರಾಜ್ಯದಲ್ಲೂ ಅಪಾರ ಭಕ್ತ ಸಾಗರವನ್ನು ಹೊಂದಿರುವ ಹಾಸನಾಂಬೆ ದೇಗುಲದ ವಿಶೇಷತೆ ಎಂದರೆ ಈಕೆಯ ದರ್ಶನ ವರ್ಷದಲ್ಲಿ ಒಂದು ಸಾರಿ. ಅಂದರೆ ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು, ತಾಯಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡುವುದು. ಅಶ್ವಯುಜ ಮಾಸದ ಕೃಷ್ಣಪಕ್ಷ ಪೂರ್ಣಿಮೆ ನಂತರ ಬರುವ ಗುರುವಾರ ಬಾಗಿಲು ತೆಗೆದರೆ, ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚುತ್ತದೆ. ನಂತರ ಒಂದು ವರ್ಷ ದೇವಿಯ ದರ್ಶನ ಇರುವುದಿಲ್ಲ. ಬಾಗಿಲು ಮುಚ್ಚುವ ದಿನ ಹಚ್ಚಿದ ದೀಪವು ಮುಂದಿನ ವರ್ಷ ಬಾಗಿಲು ತೆರೆಯುವ ತನಕ ದೇವಿಯ ಗರ್ಭಗುಡಿಯಲ್ಲಿ ಉರಿಯುತ್ತದೆ ಎಂಬುದು ದೇವಿಯ ಮಹಿಮೆ.

# 13 ದಿನ ದರ್ಶನ;
ಈ ಬಾರಿ 13 ದಿನ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿತ್ತು, ಅದರಲ್ಲಿ 11 ದಿನ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇಂದು 12ನೇ ದಿನವಾಗಿದ್ದು ಜನರು ಸರತಿ ಸಾಲನಲ್ಲಿ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ.  ಪ್ರತಿನಿತ್ಯ 15ರಿಂದ 20 ಸಾವಿರ ಭಕ್ತರು ದರ್ಶನ ಪಡೆಯುತ್ತಿದ್ದರೆ, ಶುಕ್ರವಾರ ಹಾಗೂ ಶನಿವಾರ 30ರಿಂದ 40 ಸಾವಿರ ಭಕ್ತರು ದರ್ಶನ ಪಡೆದಿದ್ದರು.ಇಂದು ಆ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

# 8 ದಿನ ದರ್ಶನ ಪಡೆದ ಎಚ್ ಡಿ ರೇವಣ್ಣ ;
ಇಂದು ಮುಂಜಾನೆ ದೇವಸ್ಥಾನಕ್ಕೆ ಆಗಮಿಸಿದ ಜೆಡಿಎಸ್ ನಾಯಕ, ಮಾಜಿ ಸಚಿವ ಎಚ್. ಡಿ ರೇವಣ್ಣ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು. ಪ್ರತಿ ವರ್ಷ ಕೂಡ ರೇವಣ್ಣ ಅವರು ಅತಿ ಹೆಚ್ಚು ಬಾರಿ ತಾಯಿಯ ದರ್ಶನ ಪಡೆದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಈ ಬಾರಿ ಕೂಡ 12ದಿನದಲ್ಲಿ ಅವರು 8 ಬಾರಿ ಹಾಸನಾಂಬೆ ದಿವ್ಯ ದರ್ಶನ ಪಡೆದಿದ್ದಾರೆ.

# 2 ಕೋಟಿ ಗಡಿ ದಾಟೋ ನಿರೀಕ್ಷೆ;
ಕಾಣಿಕೆ, ಪ್ರಸಾದ ಮಾರಾಟ ಸೇರಿದಂತೆ ಕಳೆದ 12 ದಿನದಲ್ಲಿ ದೇವಸ್ಥಾನಕ್ಕೆ ಒಂದುವರೆ ಕೋಟಿಗೆ ಹೆಚ್ಚಿನ ಆದಾಯ ಸಂಗ್ರಹವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮೂಲಗಳು ತಿಳಿಸಿದೆ. ಕಳೆದ ಬಾರಿ 2.65 ಕೋಟಿ ಸಂಗ್ರಹ ವಾಗಿತ್ತು‌.

# ಅಚ್ಚುಕಟ್ಟಾದ ವ್ಯವಸ್ಥೆ;
ಇನ್ನು ಹಾಸನಾಂಭ ದರ್ಶನ ಕ್ಕೆ ಆಗಮಿಸುವ ಸಹಸ್ರ ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ದೇವಸ್ಥಾನ ಆಡಳಿತ ಮಂಡಳಿಯು ಉತ್ತಮ ವ್ಯವಸ್ಥೆ ಕಲ್ಪಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಸಾಲುಗಟ್ಟಿ ನಿಲ್ಲುವ ಭಕ್ತಿರಿಗೆ ಕುರ್ಚಿ ಹಾಗೂ ವಾಟರ್ ಪ್ರೂಫ್ ಶೆಡ್ ನಿರ್ಮಾಣ ಮಾಡಲಾಗಿತ್ತು‌ , ನಿಗಧಿತ ಸ್ಥಳದಲ್ಲಿ ಶೌಚಾಲಯ ಹಾಗೂ ಇತರೆ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಿದ ಕಾರಣ ಯಾವುದೇ ಗೊಂದಲವಿಲ್ಲದೆ ಹಾಸನಾಂಭ ಜಾತ್ರೆ ಸುಸೂತ್ರವಾಗಿ ನಡೆದಿದೆ ಎನ್ನಬಹುದು ಅಲ್ಲದೆ ಪೊಲೀಸರು ಬಿಗಿ ಬಂದೋ ಬಸ್ತ್ ಕಲ್ಪಿಸಿದ್ದು ಭಕ್ತರಿಗಾಗಿ ಮಾಡಿರುವ ವ್ಯವಸ್ಥೆಗಳ ಬಗ್ಗೆ ಪೂರಕವಾದ ಮಾತು ಕೇಳಿ ಬರುತ್ತಿದೆ.

Facebook Comments

Sri Raghav

Admin