ಇಂದಿನಿಂದ ಇತಿಹಾಸ ಪ್ರಸಿದ್ಧ ಹಾಸನಾಂಬೆಯ ಆನ್‍ಲೈನ್ ದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ನ.5- ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗಿದೆ. ಆದರೂ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬ ದೇವಿ ದೇವಾಲಯದ ಬಾಗಿಲು ತೆರೆದಿದ್ದರೂ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾರ್ವಜನಿಕರ ದೇಗುಲ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಪ್ರತಿ ವರ್ಷಕ್ಕೊಮ್ಮೆ ಮಾತ್ರ ಆಶ್ವಯುಜ ಮಾಸದ ಗುರುವಾರದಂದು ಬಾಗಿಲು ತೆರೆಯುವ ಹಾಸನಾಂಬ ದೇವಾಲಯದ ಬಾಗಿಲು ತೆರೆದಾಗ ಹಿಂದಿನ ವರ್ಷ ಹಚ್ಚಿದ ದೀಪ ಆರಿರುವುದಿಲ್ಲ. ಮಾತ್ರವಲ್ಲ ದೇವಿಗೆ ಸಮರ್ಪಿಸಿದ ಹೂ ಬಾಡಿರುವುದಿಲ್ಲ, ನೈವೇದ್ಯಕ್ಕೆ ಇಟ್ಟ ಅನ್ನ ಹಳಸಿರುವುದಿಲ್ಲ. ಇದೇ ಹಾಸನಾಂಬೆಯ ಮಹಾತ್ಮೆ. ಇಂತಹ ಇತಿಹಾಸ ಪ್ರಸಿದ್ಧ ಹಾಸನಾಂಬೆಯ ದರ್ಶನ ಪಡೆಯಲು ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

ದುರದೃಷ್ಟವಶಾತ್ ಈ ಬಾರಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಭಕ್ತರಿಗೆ ದೇವಿಯ ದರ್ಶನ ಭಾಗ್ಯವಿಲ್ಲ. ಆದರೆ ದೇವಾಲಯದ ಮುಂಭಾಗ ಅಳವಡಿಸಿರುವ ಎಲ್‍ಇಡಿ ಪರದೆಗಳಲ್ಲಿ ದೇವಿಯ ದರ್ಶನ ಪಡೆದು ಪುನೀತರಾಗಲು ಅವಕಾಶ ಕಲ್ಪಿಸಲಾಗಿದೆ. ದೇವಾಲಯದ ಬಾಗಿಲು ತೆರೆದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು.

ಇಂದಿನಿಂದ ನ.16ರವರೆಗೂ ದೇವಾಲಯದ ಬಾಗಿಲು ತೆರೆಯಲಾಗುವುದು. ದೀಪಾವಳಿ ಹಬ್ಬದಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಧ್ಯಾಹ್ನ 12 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ದೇವಾಲಯದ ಬಾಗಿಲು ತೆರೆಯುವ ಇಂದು ಮತ್ತು ಕೊನೆಯ ದಿನ ಆಹ್ವಾನಿತರಿಗೆ , ಸ್ಥಳೀಯ ಜನಪ್ರತಿನಿಧಿಗಳಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರ ದೇವಿ ದರ್ಶನಕ್ಕೆ ಅನುಕೂಲವಾಗುವಂತೆ ನಗರದ 10 ಕಡೆ ಎಲïಇಡಿ ಪರದೆ ಅಳವಡಿಕೆ ಮಾಡಲಾಗಿದೆ.  ಹಾಸನ ನಗರದ ಪ್ರಮುಖ ವೃತ್ತಗಳಲ್ಲಿ hasanambalive 2020 ಆನ್‍ಲೈನ್ ಮೂಲಕ ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾರಿ ಪ್ರಸಾದದ ಅನ್ನ ದಾಸೋಹ ವ್ಯವಸ್ಥೆ ಕೂಡ ಇಲ್ಲ. ಕಳೆದ ವರ್ಷ ಪ್ರತಿ ದಿನ 50 ಸಾವಿರ ಭಕ್ತರು ದರ್ಶನ ಪಡೆಯುವ ಮೂಲಕ ಸುಮಾರು 5 ಲಕ್ಷ ಜನ ನೇರವಾಗಿ ಹಾಸನಾಂಬೆ ದರ್ಶನ ಪಡೆದಿದ್ದರು.

ಈ ಬಾರಿಯೂ ಲಕ್ಷಾಂತರ ಮಂದಿ ಹಾಸನಾಂಬೆ ದರ್ಶನಕ್ಕೆ ಆಗಮಿಸಿದರೆ ಕೊರೊನಾ ಸೋಂಕಿನ ಸಂದರ್ಭದಲ್ಲಿ ಭಕ್ತರ ನಿಯಂತ್ರಣ ಅಸಾಧ್ಯ ಎಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧ ವಿಧಿಸಿದೆ.

Facebook Comments