ಹಾಸನಾಂಬೆ ದರ್ಶನಕ್ಕೆ ಹರಿದುಬಂದ ಭಕ್ತಸಾಗರ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಅ.27- ಹಾಸನಾಂಬೆ ದರ್ಶನದ ಕೊನೆಯ ಮೂರು ದಿನಗಳಿರುವಂತೆ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಇಂದಿನಿಂದ ಸತತ ರಜೆ ದಿನಗಳು ಇರುವ ಕಾರಣ ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆ ಕಂಡಿದೆ.

ಶನಿವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಹಾಸನಕ್ಕೆ ಆಗಮಿಸಿ ಹಾಸನಾಂಬೆ ದರ್ಶನ ಪಡೆದರೆ ರಾಜ್ಯದ ನಾನಾ ಮೂಲೆಗಳಿಂದ ಹಲವಾರು ನ್ಯಾಯಾಧೀಶರು, ಚುನಾಯಿತ ಪ್ರತಿನಿಧಿಗಳು, ರಾಜಕಾರಣಿಗಳು, ಹಿರಿಯ ಅಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ.

ಅಲ್ಲದೆ ಚಿತ್ರರಂಗದ ಹಿರಿಯ ಕಲಾವಿದ ದೊಡ್ಡಣ್ಣ , ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ದೇವಿಯ ದರ್ಶನ ಪಡೆದರು. ಶುಕ್ರವಾರ ಹಾಗೂ ಶನಿವಾರ ಸರಿ ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು ಇಂದು ಅಂದಾಜಿನ ಪ್ರಕಾರ ಈವರೆಗೆ 2.8 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಈ  ನಡುವೆ, 300 ರೂ ಹಾಗೂ 1000 ರೂ ಹಾಗೂ ಲಾಡು ಮಾರಾಟಗಳಿಂದ ಸಂಗ್ರಹವಾಗಿರುವ ಹಣ ಕೋಟಿಗಳ ಗಡಿ ದಾಟಿದ್ದು, ಅ.29ರವರೆಗೆ ನಡೆಯುವ ಹಾಸನಾಂಬೆ ಉತ್ಸವದಲ್ಲಿ ಈ ಭಾರಿ 2 ಕೋಟಿ ರೂ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಹಾಸನಾಂಬೆ ಉತ್ಸವದ ಆರಂಭಗೊಂಡ ದಿನಗಳಲ್ಲಿ ಭಕ್ತರ ಸಂಖ್ಯೆಯಲ್ಲಿ ಇಳಿಮುಖ ಕಂಡಿತ್ತಾದರೂ ಈಗ ರಜೆಗಳು ಪ್ರಾರಂಭವಾದ ನಂತರ ದೇವಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

Facebook Comments