ಇಂದಿನಿಂದ ಅ.29ರವರೆಗೆ ಹಾಸನಾಂಬೆಯ ದರ್ಶನ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಅ.17- ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ನಗರದ ಅಧಿದೇವತೆ ಹಾಸನಾಂಬೆಯ ದರ್ಶನಕ್ಕೆ ಇಂದು ವಿಧ್ಯುಕ್ತವಾಗಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಬಾಗಿಲು ತೆರೆಯಲಾಯಿತು. ಆಶ್ವಯುಜ ಮಾಸದ ಹುಣ್ಣಿಮೆ ನಂತರದ ಮೊದಲ ಗುರುವಾರದಿಂದ ವಿಧಿ ವಿಧಾನದಂತೆ ಪೂಜೆ ಸಲ್ಲಿಸಿದ ಬಳಿಕ ಇಂದು ಮಧ್ಯಾಹ್ನ 12.30ಕ್ಕೆ ಸರಿಯಾಗಿ ಆಡಳಿತಾಧಿಕಾರಿ ನಾಗರಾಜ್ ಸೇರಿದಂತೆ ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ಗರ್ಭ ಗುಡಿ ಬಾಗಿಲ ಬೀಗ ಮುದ್ರೆಯನ್ನು ತೆರೆಯಲಾಗಿದೆ.

ಇಂದಿನಿಂದ ಅ.29ರವರೆಗೆ ದೇವಾಲಯದ ಬಾಗಿಲು ತೆರೆಯಲಿದ್ದು , ಈ ಬಾರಿ 12 ದಿನಗಳ ಕಾಲ ದೇವಿಯ ದರ್ಶನ ಭಕ್ತರಿಗೆ ಲಭಿಸಲಿದೆ.ಮೊದಲ ಹಾಗೂ ಕೊನೆಯ ದಿನ ಸಾರ್ವಜನಿಕರಿಗೆ ದೇವಿಯ ದರ್ಶನ ಇರುವುದಿಲ್ಲ. ಉಳಿದಂತೆ ಎಲ್ಲಾ ದಿನಗಳು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇಂದು ಬೆಳಗ್ಗೆಯಿಂದಲೇ ದೇಗುಲದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಪ್ರದಾಯದಂತೆ ತಳವಾರ ವಂಶದ ನಟರಾಜ ಅರಸು ಅವರು ಬಾಳೇಕಂದು ಕಡಿಯುವ ಮೂಲಕ ಬಾಗಿಲು ತೆರೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಹಾಸನಾಂಬ , ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿದೆ.

ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು , ದೇವಾಲಯದ ಸುತ್ತಮುತ್ತ ಸಿಸಿ ಟಿವಿಗಳನ್ನು ಅಳವಡಿಸಲಾಗಿದ್ದು , ಸುಗಮ ದರ್ಶನಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಒದಗಿಸಲಾಗಿದೆ. ದೇವಿಯ ದರ್ಶನಕ್ಕಾಗಿ ತುಮಕೂರು, ಬೆಂಗಳೂರು, ಮೈಸೂರು, ಮಂಡ್ಯ, ಕೋಲಾರ ಸೇರಿದಂತೆ ರಾಜ್ಯ, ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಲಿದ್ದು , ಈಗಾಗಲೇ ದೇವಿಯ ದರ್ಶನಕ್ಕಾಗಿ ಭಕ್ತರು ನಗರಕ್ಕೆ ಆಗಮಿಸುತ್ತಿದ್ದಾರೆ.

Facebook Comments