ಹಾಸನಾಂಬ ದರ್ಶನಕ್ಕೆ ಸಮಯ ನಿಗದಿ, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಸೆ.20- ನಗರದ ಶ್ರೀ ಹಾಸನಾಂಬ ದೇವಿಯ ದರ್ಶನ ಮಹೋತ್ಸವ ಅ. 17 ರಿಂದ 29 ರವರೆಗೆ ಒಟ್ಟು 13 ದಿನಗಳ ಕಾಲ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಅ.17 ರಂದು ಮಧ್ಯಾಹ್ನ 12.30ಕ್ಕೆ ಬಾಗಿಲು ತೆರೆಯಲಿದ್ದು, ಅ.29 ರಂದು ಮಧ್ಯಾಹ್ನ 12 ಗಂಟೆ ನಂತರ ಬಾಗಿಲು ಮುಚ್ಚಲಾಗುವುದು.

ಅ.17 ಮತ್ತು 29 ರಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದ್ದಾರೆ.ನಗರದಲ್ಲಿರುವ ಶ್ರೀ ಹಾಸನಾಂಬ ದೇವಿ ದೇವಸ್ಥಾನವು ಜಿಲ್ಲೆಯ ಪ್ರಸಿದ್ದ ದೇವಾಲಯಗಳಲ್ಲೊಂದಾಗಿದೆ.

ಈ ದೇವಾಲಯವು ವರ್ಷಕ್ಕೊಂದು ಬಾರಿ ಮಾತ್ರ ಅಶ್ವಯುಜ ಮಾಸದ ಹುಣ್ಣಿಮೆಯ ನಂತರದಲ್ಲಿ ಬರುವ ಮೊದಲ ಗುರುವಾರದಂದು ಬಾಗಿಲು ತೆರೆದು ಬಲಿಪಾಡ್ಯಮಿ ಹಬ್ಬದ ಮಾರನೇ ದಿನ ದೇವಾಲಯದ ಬಾಗಿಲು ಮುಚ್ಚಲಾಗುವುದು.

ಅ. 18 ರಿಂದ ಪ್ರತಿದಿನ ದೇವಿಗೆ ನೈವೇದ್ಯ ಪೂಜಾ ಸಮಯ ಅಪರಾಹ್ನ 1 ರಿಂದ 3 ಗಂಟೆಯವರೆಗೆ ಭಕ್ತಾದಿಗಳಗೆ ದರ್ಶನ ಇರುವುದಿಲ್ಲ. ಉಳಿದ ಅವಧಿಯಲ್ಲಿ ರಾತ್ರಿ 11 ಗಂಟೆಯವರೆಗೆ ದರ್ಶನವಿರುತ್ತದೆ.ಅ.23, 25 ಮತ್ತು ಅ.27 ರ ದಿನಾಂಕಗಳಂದು ರಾತ್ರಿ 11 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ದೇವಿಗೆ ವಿಶೇಷ ನೈವೇದ್ಯ ಮತ್ತು ಪೂಜೆಗಳು ನೆರವೇರಲಿವೆ.

ಈಗಾಗಲೇ ಶ್ರೀ ಹಾಸನಾಂಬ ದೇವಿ ದರ್ಶನದ 2 ಪೂರ್ವಭಾವಿ ಸಭೆ ನಡೆಸಿ ಪೂರ್ವಸಿದ್ದತೆಗಳಾದ ದೇವಾಲಯದ ಸಂಪರ್ಕ ರಸ್ತೆ ರಿಪೇರಿ, ಪೊಲೀಸ್ ಬಂದೋಬಸ್ತ್, ಬ್ಯಾರಿಕೇಡಿಂಗ್ ಅಳವಡಿಕೆ, ಆರೋಗ್ಯ ಸ್ವಚ್ಛತೆ ನೈರ್ಮಲ್ಯ ಶೌಚಾಲಯ ಇತರೆ ವ್ಯವಸ್ಥೆಗಳ ಬಗ್ಗೆ ತಯಾರಿ ಮಾಡಿಕೊಳ್ಳಲಾಗಿದೆ.

ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವುದರಿಂದ ಧರ್ಮದರ್ಶನ, ಶೀಘ್ರವಾಗಿ ಹಾಗೂ ಸುಗಮ ದರ್ಶನಕ್ಕಾಗಿ ರೂ.300ರ ವಿಶೇಷ ದರ್ಶನ ಟಿಕೆಟ್ ಪಡೆದವರಿಗೆ 2 ಲಾಡು ಮತ್ತು ರೂ.1000ಗಳ ನೇರದರ್ಶನ ವಿಶೇಷ ದರ್ಶನ ಟಿಕೆಟ್ ಪಡೆದವರಿಗೆ 4 ಲಾಡು ಪ್ರಸಾದವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನ/ಇಲಾಖೆ ವತಿಯಿಂದ ಭಕ್ತಾದಿಗಳಿಗೆ ದರ್ಶನದ ನಂತರ ಪ್ರಸಾದ ವಿತರಣಾ ವ್ಯವಸ್ಥೆಯನ್ನು ಚನ್ನಕೇಶವ ದೇವಾಲಯದ ಸಮುದಾಯಭವನದಲ್ಲಿ ಮಾಡಲಾಗುತ್ತದೆ.ಭಕ್ತಾದಿಗಳ ವಾಹನ ನಿಲುಗಡೆಗಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಹಾಸನ ನಗರಸಭೆ ಆವರಣ ಹಿಂಭಾಗದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.

ದೇವಾಲಯದ ಮುಚ್ಚುವ 29ರಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿಯವರೆಗೆ ವಿವಿಧ ಪ್ರಕಾರದ ಕಲಾವಿದರಿಂದ ಹಾಸನಾಂಭ ಕಲಾಭವನದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದೆ.ಶ್ರೀ ಹಾಸನಾಂಬ ದೇವಿ ದರ್ಶನದ ಅವಧಿಯಲ್ಲಿ ಎಲ್ಲಾ ಇಲಾಖಾಧಿಕಾರಿಗಳ ಮತ್ತು ಭಕ್ತಾಧಿಗಳ ಸಹಕಾರದೊಂದಿಗೆ ಯಶಸ್ವಿಗೊಳಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಮಾಹಿತಿ ನೀಡಿದರು.

ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಪ್ರಭಾರಿ ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲï. ನಾಗರಾಜ್, ತಹಸೀಲ್ದಾರ್ ಶಾರದಾಂಬ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin