ಹಾಸನದಿಂದ ವಿಮಾನ ಹಾರಾಟಕ್ಕೆ ಕಾಲ ಸನ್ನಿಹಿತ

ಈ ಸುದ್ದಿಯನ್ನು ಶೇರ್ ಮಾಡಿ

ರಾಜ್ಯದ ಗುಲ್ಬರ್ಗಾ, ಮಂಗಳೂರು, ಮೈಸೂರು ಬಳಿಕ ಇದೀಗ ಹಾಸನದಲ್ಲೂ ವಿಮಾನ ನಿಲ್ದಾಣ ಕಾಣುವ ಕಾಲ ಸನ್ನಿಹಿತವಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ತವರು ಕ್ಷೇತ್ರಕ್ಕೆ ವಿಮಾನಯಾನದ ಕೊಡುಗೆ ನೀಡಲು ಇಚ್ಚಿಸಿದ್ದರು. ಅವರ ದಶಕಗಳ ಕನಸು ಕೆಲ ತಿಂಗಳುಗಳಲ್ಲಿ ಸಾಕಾರಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಹೌದು, ದೇವೇಗೌಡರು ತಮ್ಮ ತವರು ಜಿಲ್ಲಾಗೆ ಹಲವು ಜನಪರ ಯೋಜನೆಯನ್ನು ನೀಡಿದ್ದಾರೆ. ರೈಲ್ವೆ , ನೀರಾವರಿ, ರೈತರು, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಸಾಲಿಗೆ ಈ ವಿಮಾನಯಾನದ ಕನಸು ಕೂಡ ಸೇರಿದೆ.

2007ರಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಹಾಗೂ ಎಚ್.ಡಿ.ದೇವೇಗೌಡರು ಭುವನಹಳ್ಳಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಹಾಕಿದ್ದರು. ಯೋಜನೆಗೆ ಬೇಕಾದ ಒಟ್ಟು ಜಮೀನಿನ ಪೈಕಿ 536 ಎಕರೆಯ ಭೂ ಸ್ವಾಧೀನ ಪ್ರಕ್ರಿಯೆ ಬಹುತೇಕ ಮುಗಿಯುವ ಹಂತ ತಲುಪಿದ್ದು, ಭೂಮಿ ನೀಡಿದ ರೈತರಿಗೆ ಎಕರೆಗೆ 40 ಲಕ್ಷ ರೂ. ಬೆಂಬಲ ಬೆಲೆ ಸಹ ನೀಡಲು ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಬಹುತೇಕ ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ.

ಹಾಸನದ ಭುವನಹಳ್ಳಿ, ಸಂಕೇನಹಳ್ಳಿ, ಲಕ್ಷ್ಮಿಸಾಗರ, ತೆಂಡಹಳ್ಳಿ, ಮೈನಹಳ್ಳಿ, ದ್ಯಾವಲಾಪುರ ಮತ್ತು ಚಟ್ನಹಳ್ಳಿಯ ರೈತರು ಭೂಮಿ ನೀಡಿದ್ದಾರೆ. ಇದರಿಂದ ವಿಮಾನ ನಿಲ್ದಾಣ ನಿರ್ಮಾಣದ ಕನಸು ಮತ್ತೆ ಚಿಗುರಿದೆ.

ಈ ವಿಮಾನ ನಿಲ್ದಾಣ ಆರಂಭವಾದಲ್ಲಿ ಸಾರ್ವಜನಿಕ ಪ್ರಯಾಣಕ್ಕಿಂತಲೂ ವಾಣಿಜ್ಯ ವಹಿವಾಟಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ವಿಚಾರವನ್ನು ಹಲವು ಬಾರಿ ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು ಜಿಲ್ಲಾಯನ್ನು ವಿಮಾನಯಾನ ಕ್ಷೇತ್ರದಲ್ಲೂ ಮುಂದೆ ತರುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಕಾಮಗಾರಿಗೆ ಮೊದಲಿಂದಲೂ ವಿಶೇಷ ಆಸಕ್ತಿ ಹೊಂದಿರುವ ರೇವಣ್ಣ ಇತ್ತೀಚೆಗೆ ನಿಲ್ದಾಣಕ್ಕೆ ಭೂಮಿ ನೀಡುವ ರೈತರ ಸಭೆ ನಡೆಸಿ ಅವರಿಂದ ಒಪ್ಪಿಗೆ ಪಡೆದಿದ್ದು, ಭೂಮಿಗೆ ಸೂಕ್ತ ಬೆಂಬಲ ಬೆಲೆ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ.

ರೈತರಿಗೆ ಎಕರೆಗೆ 40 ಲಕ್ಷ ಬೆಂಬಲ ಬೆಲೆ: ನಗರದ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣಕ್ಕೆ ಈ ಹಿಂದೆ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗಿರುವ ಜಮೀನುಗಳಿಗೆ ಹೊಸ ದರ ನಿಗದಿಪಡಿಸುವ ಕುರಿತಂತೆ ಉಸ್ತುವಾರಿ ಸಚಿವ ರೇವಣ್ಣ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೂ ಮಾಲೀಕರೊಂದಿಗೆ ಸಭೆ ನಡೆದಿದೆ.

ಕೆಂಚಟ್ಟಹಳ್ಳಿ, ಭುವನಹಳ್ಳಿ, ಸಮುದ್ರವಳ್ಳಿ, ಗೇಕರವಳ್ಳಿ ಗ್ರಾಮಗಳ ಭೂಮಾಲೀಕರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಅಭಿಪ್ರಾಯ ಆಲಿಸಿದ್ದಾರೆ. ಎಲ್ಲಾ ರೈತರು ಹಾಸನದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗುತ್ತಿರುವುದು ಸಂತೋಷದ ವಿಚಾರ. ಆದಷ್ಟು ಬೇಗ ಈ ಕಾರ್ಯ ಆಗಬೇಕು.

ಆದರೆ, ತಮ್ಮ ಜಮೀನಿಗೆ ಹೆಚ್ಚಿನ ಪರಿಹಾರ ಒದಗಿಸಿಕೊಡಬೇಕು ಮತ್ತು ಎಲ್ಲಾ ಗ್ರಾಮಗಳಿಗೂ ಏಕರೂಪದ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದರು. ಇದನ್ನೆಲ್ಲ ಆಲಿಸಿದ ಜಿಲ್ಲಾಡಳಿತ 2007ರ ಹಿಂದೆಯೇ ನಡೆದಿರುವ ಭೂಸ್ವಾಧೀನ ಪ್ರಕ್ರಿಯೆ ಇದಾಗಿದೆ.

ಕೆಂಚೆಟ್ಟಹಳ್ಳಿ ಮತ್ತು ಭುವನಹಳ್ಳಿಗಳಿಗೆ ಎಕರೆಗೆ 11 ಲಕ್ಷ ಮತ್ತು ಸಮುದ್ರವಳ್ಳಿ ಹಾಗೂ ಗೇಕರವಳ್ಳಿ ಜಮೀನುಗಳಿಗೆ ಎಕರೆಗೆ 9 ಲಕ್ಷ ರೂ. ನಿಗದಿಪಡಿಸಲಾಗಿತ್ತು. ಈಗ ಅದನ್ನು ರೈತರ ಮನವಿ ಮೇರೆಗೆ ಸಚಿವ ಹೆಚ್.ಡಿ.ರೇವಣ್ಣ ಅವರು ವಿಶೇಷ ಆಸಕ್ತಿ ತೋರಿಸಿ ಪರಿಷ್ಕøತಗೊಳಿಸಿ ಪರಿಹಾರ ದರ ನಿಗದಿಪಡಿಸಲು ಅವಕಾಶ ಕಲ್ಪಿಸಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಚರ್ಚೆ, ನಿರಂತರ ಬೇಡಿಕೆಗಳನ್ನು ಆಲಿಸಿ ಸ್ಥಳೀಯ ಭಾವನೆಗಳಿಗೆ ಗೌರವ ನೀಡಿ ಅವರ ಮನವಿ ಪುರಸ್ಕರಿಸಿದ ಜಿಲ್ಲಾಧಿಕಾರಿಯವರು ಎಕರೆಗೆ 40 ಲಕ್ಷ ರೂ. ಪರಿಹಾರ ನಿಗದಿಪಡಿಸುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಗುಲ್ಬರ್ಗಾ ಮಾದರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಹಣ ಬಿಡುಗಡೆಯಾಗಿದೆ. ವಿಮಾನ ನಿಲ್ದಾಣಕ್ಕೆ ರಸ್ತೆಗಳ ಅಭಿವೃದ್ದಿಯಾದರೆ ಈ ಗ್ರಾಮಗಳಲ್ಲಿ ಜಮೀನಿನ ಬೆಲೆಯೂ ಹೆಚ್ಚಲಿದೆ. ಮೂಲಭೂತ ಸೌಕರ್ಯ ಅಭಿವೃದ್ಧಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಒಟ್ಟಾರೆ, ಹಾಸನದಲ್ಲಿ ವಿಮಾನ ಹಾರಾಟಕ್ಕೆ ಇರುವ ಕೆಲವು ತಾಂತ್ರಿಕ ಅಡೆತಡೆ ನಿವಾರಣೆಯಾಗಲಿವೆ. ಭೂಮಿ ನೀಡಿದ ರೈತರಿಗೆ ಬೆಂಬಲ ಬೆಲೆ ನೀಡಲು ರಾಜ್ಯ ಸರ್ಕಾರದಿಂದ ಬಹುತೇಕ ಒಪ್ಪಿಗೆ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ. ರಾಜ್ಯ ಹಾಗೂ ಕೆಂದ್ರ ಸೂಕ್ತ ರೀತಿಯಲ್ಲಿ ಸ್ಪಂದಿಸಿದಲ್ಲಿ ವಿಮಾನಯಾನ ಕನಸು ಬಹುತೇಕ ನನಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಂತೋಷ್ ಸಿ.ಬಿ., ಹಾಸನ

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ