ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಮೂವರ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಸೆ.11- ಬೆಳ್ಳಂಬೆಳಗ್ಗೆ ಸಂಭವಿಸಿದ ವಿದ್ಯುತ್ ಸ್ಪರ್ಶಕ್ಕೆ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಗಸರಹಳ್ಳಿ ಗ್ರಾಮದ ಭಾಗ್ಯಮ್ಮ (55), ಮಗಳು ದಾಕ್ಷಾಯಿಣಿ (35) ಮತ್ತು ಮಗ ದಯಾನಂದ್ (31) ಮೃತಪಟ್ಟ ದುರ್ದೈವಿಗಳಾಗಿದ್ದು, ಘಟನೆಯಲ್ಲಿ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.

ಮನೆ ಸಮೀಪವಿರುವ ವಿದ್ಯುತ್ ಕಂಬಕ್ಕೆ ಬಟ್ಟೆ ಒಣಹಾಕಲು ತಂತಿಯನ್ನು ಕಟ್ಟಲಾಗಿತ್ತು. ಇಂದು ಬೆಳಗ್ಗೆ ಒಗೆದಿದ್ದ ಬಟ್ಟೆಯನ್ನು ಭಾಗ್ಯಮ್ಮ ಈ ತಂತಿ ಮೇಲೆಹಾಕುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಜೋರಾಗಿ ಚೀರಿಕೊಂಡಿದ್ದಾರೆ.

ತಕ್ಷಣ ಮಗಳು ದಾಕ್ಷಾಯಿಣಿ ಮತ್ತು ಮಗ ದಯಾನಂದ ಹಾಗೂ ಮತ್ತೊಬ್ಬ ರಕ್ಷಣೆಗೆ ದಾವಿಸಿ ಭಾಗ್ಯಮ್ಮ ಅವರನ್ನು ಕಾಪಾಡಲು ಯತ್ನಿಸಿದರಾದರೂ ಇವರಿಗೂ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ತಾಯಿ, ಮಗ, ಮಗಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ವಿದ್ಯುತ್ ಅವಘಡದಿಂದ ಒಂದೇ ಮನೆಯಲ್ಲಿ ಮೂವರು ಮೃತಪಟ್ಟಿರುವ ಘಟನೆ ಕಾಡ್ಗಿಚ್ಚಿನಂತೆ ಹರಡಿ ಸುತ್ತಮುತ್ತಲ ಗ್ರಾಮಸ್ಥರು ಗುಂಪು ಗುಂಪಾಗಿ ಇವರ ಮನೆ ಮುಂದೆ ಜಮಾಯಿಸಿದ್ದರು. ಬಂದು-ಬಳಗದವರ ಆಕ್ರಂದನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments