ಗ್ರಾಮಕ್ಕೆ ಲಗ್ಗೆ ಇಟ್ಟ ಕಾಡಾನೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ನ.8- ಆನೆ ನಡೆದದ್ದೇ ದಾರಿ ಎಂಬ ಮಾತಿಗೆ ಪುಷ್ಟಿ ನೀಡುವಂತಹ ಜಿಲ್ಲಾಯ ಮಲೆನಾಡು ಭಾಗವಾದ ಸಕಲೇಶಪುರ, ಆಲೂರು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿದೆ. ಪ್ರತಿ ನಿತ್ಯ ಆನೆಗಳ ಹಿಂಡು ಗ್ರಾಮಗಳಿಗೆ ಲಗ್ಗೆ ಇಡುತ್ತಿದ್ದು , ಗ್ರಾಮಸ್ಥರು ನಿದ್ದೆಗೆಡುವಂತಾಗಿದೆ. ಸಕಲೇಶಪುರ ತಾಲೂಕಿನ ಹೊಸಗದ್ದಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಂಭಾಗ ಒಂಟಿ ಸಲಗ ಕಾಣಿಸಿಕೊಂಡಿರುವುದು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರನ್ನು ಭಯಭೀತಗೊಳಿಸಿದೆ.

ಶಾಲಾ ಮುಂಭಾಗವೇ ಹಾದು ಹೋದ ಒಂಟಿ ಸಲಗ ರಾಜರೋಷವಾಗಿ ತನ್ನ ಗಂಭೀರ ನಡಿಗೆಯಲ್ಲಿ ಹೆಜ್ಜೆ ಹಾಕಿ ನಡೆಯುತ್ತಿದ್ದರೆ ಗ್ರಾಮದ ಜನರ ಎದೆಯಲ್ಲಿ ನಡುಕ ಶುರುವಾಗಿದೆ ದಿನ ಬೆಳಗಾದರೆ ಇದನ್ನು ನೋಡುತ್ತ ಸುಮ್ಮನಿರಬೇಕಾದ ಪರಿಸ್ಥಿತಿ ಇಷ್ಟು ದಿನ ಕಾಫಿ ತೋಟ ಗದ್ದಾಯಲ್ಲಿ ಬೆಳೆಗಳನ್ನು ತುಳಿದು ಹಾಳು ಮಾಡುತ್ತಿದ್ದ ಕಾಡಾನೆಗಳು ಇದೀಗ ಗ್ರಾಮಗಳಿಗೆ ಲಗ್ಗೆಯಿಡಲು ಆರಂಭಿಸಿವೆ.

ಶಾಲೆ ಬಿಟ್ಟು ಹತ್ತು ನಿಮಿಷದ ನಂತರ ಈ ಒಂಟಿ ಸಲಗ ಶಾಲೆಯ ಮುಂಭಾಗ ಸಂಚರಿಸಿದ್ದು ಒಂದು ವೇಳೆ ಶಾಲೆ ಬಿಡುವ ಸಮಯದಲ್ಲಿ ಏನಾದರೂ ಸಲಗ ಆಗಮಿಸಿದ್ದರೆ ಭಾರೀ ಪ್ರಮಾದ ನಡೆಯುವ ಸಾಧ್ಯತೆ ಇತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಈ ಗ್ರಾಮದ ಸುತ್ತಮುತ್ತ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಗ್ರಾಮಸ್ಥರ ನಿದ್ದಾಗೆಡಿಸಿದೆ.

ಭತ್ತ ಬೆಳೆ ಕುಯ್ಲಿಗೆ ಬಂದಿರುವ ಸಮಯದಲ್ಲಿ ಕಾಡಾನೆಗಳು ಗದ್ದಾಯಲ್ಲಿ ಓಡಾಡಿ ನೂರಾರು ಎಕರೆಯಲ್ಲಿ ಬೆಳೆದಿರುವ ಬೆಳೆ ಸಂಪೂರ್ಣ ನಾಶವಾಗುತ್ತಿದೆ ಎಂದು ಗ್ರಾಮಸ್ಥರಾದ ಶಶಿಧರ್, ರಾಜು, ಮಂಜು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಾಡಾನೆ ಗ್ರಾಮಕ್ಕೆ ಲಗ್ಗೆ ಇಟ್ಟಿರುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments