ಸರ್ವೇ ಮಾಡದೆ ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ಥಳಿತ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜ.31- ಸರ್ವೆ ಇಲಾಖೆಯಲ್ಲಿ ಕೆಲಸಗಳನ್ನು ಸರಿಯಾಗಿ ಮಾಡಿಕೊಡದೆ ವರ್ಷಾನುಗಟ್ಟಲೆ ಕಚೇರಿಗೆ ಅಲೆದಾಡಿಸುತ್ತಿದ್ದ ಇಬ್ಬರು ಅಧಿಕಾರಿಗಳಿಗೆ ಸಾರ್ವಜನಿಕರೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ನಡೆದಿದೆ.  ಸರ್ವೆ ಇಲಾಖೆಯ ಭೂಮಾಪಕ ಬ್ರಿಜೇಶ್ ಮತ್ತು ಹಾಸನದ ಭೂದಾಖಲೆಗಳ ಸಹಾಯಕ ನಿರ್ದೇಶಕ ಸಂಶುದ್ದೀನ್ ಎಂಬ ಇಬ್ಬರು ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕಚೇರಿಗೆ ಆಗಮಿಸಿದ ಸಾರ್ವಜನಿಕರು ತಮ್ಮ ಕೆಲಸಗಳನ್ನು ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ.

ಆಗ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿದ್ದು, ಮಾತಿನಚಕಮಕಿ ನಡೆದು ತಳ್ಳಾಟದ ವಿಕೋಪಕ್ಕೆ ಹೋಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಿಳಿದ ಸಂಶುದ್ದೀನ್ ಮುಂದಿನ ವಾರ ಬಂದು ಕೆಲಸ ಮಾಡಿಕೊಡುತ್ತೇನೆ ಎಂದು ತೆರಳಲು ಮುಂದಾದಾಗ ಸಾರ್ವಜನಿಕರನ್ನು ಅವರ ಕಾರನ್ನು ಅಡ್ಡಗಟ್ಟಿ ಕೂಡಲೆ ಕಡತಗಳನ್ನು ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ.

ಸರ್ವೆ ಇಲಾಖೆಯ ಭೂಮಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಬ್ರಿಜೇಶ್ ತನ್ನ ವ್ಯಾಪ್ತಿಯ ಸಾಕಷ್ಟು ರೈತಾಪಿ ವರ್ಗದವರಿಗೆ ಸರಿಯಾದ ರೀತಿಯಲ್ಲಿ ಸರ್ಕಾರಿ ಕೆಲಸ ಮಾಡಿಕೊಡದೆ ಪ್ರತೀ ಸಾರಿ ಕಚೇರಿಗೆ ಅಲೆಸುತ್ತಿದ್ದರು. ದುಡ್ಡು ಕೊಟ್ಟರು ಸುಳ್ಳು ಭರವಸೆ ನೀಡಿ ಮೂರು ವರ್ಷಗಳಿಂದ ಸತಾಯಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಬಿ.ಜಿ.ಕುಮಾರ್ ಮತ್ತು ಸಿಬ್ಬಂದಿಯವರು ಆಗಮಿಸಿ ಪರಿಸ್ಥಿರಿ ತಿಳಿಗೊಳಿಸಿದ್ದಾರೆ.

Facebook Comments