ಈ ಬಾರಿಯೂ ಹರ್ಷ ಮೂಡಿಸಲಿದೆಯೇ ಮುಂಗಾರಿನ ವರ್ಷಧಾರೆ…?

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜೂ.13- ತುಂತುರು ಮಳೆ ….ಚಳಿ ಗಾಳಿ …. ಮುಂಗಾರಿನ ಮುನ್ಸೂಚನೆ ಜಿಲ್ಲಾಯಲ್ಲಿ ಕಳೆದ ಮೂರು ದಿನದಿಂದ ಕಂಡು ಬಂದಿದ್ದು ರೈತರ ಮೂಗದಲ್ಲಿ ಸಂತಸ ತಂದಿದೆ. ಜಿಲ್ಲೆಯ ಸಕಲೇಶಪುರ, ಆಲೂರು ಭಾಗದಲ್ಲಿ ಬಿರುಸಿನ ಮಳೆಯಾಗುತ್ತಿದ್ದು , ಹಾಸನ ನಗರ , ಚನ್ನರಾಯಪಟ್ಟಣ, ಅರಸೀಕೆರೆ, ಬೇಲೂರು , ಅರಕಲಗೂಡು , ಹೊಳೆನರಸೀಪುರ ತಾಲ್ಲೂಕಿನಲ್ಲಿ ಸೂನೆ ಮಳೆಯಾಗುತ್ತಿದೆ.

ಇದರಿಂದ ಕೃಷಿ ಚಟುವಟಿಕೆ ಸ್ವಲ್ಪ ಚುರುಕು ಕಂಡಿದೆ. ಅಲ್ಲದೆ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ತೊಂದರೆ ಸ್ವಲ್ಪ ಮಟ್ಟಿಗೆ ನೀಗಿದಂತಾಗಲಿದೆ.  ಜಿಲ್ಲಾಯ ಪ್ರಮುಖ ವಾಣಿಜ್ಯ ತರಕಾರಿ ಬೆಳೆಯಾದ ಆಲೂಗಡ್ಡೆ ಬಿತ್ತನೆಗೆ ಸಕಾಲವಾಗಿದ್ದು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟವೂ ಜೂರಾಗಿ ನಡೆದಿದೆ.

ಜಿಲ್ಲಾ ಕೇಂದ್ರ ಸೇರಿದಂತೆ ತಾಲ್ಲೂಕಿನ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತು ರೈತರು ವಿವಿಧ ಬಿತ್ತನೆ ಬೀಜ ಖರೀದಿಯಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿದೆ. ಬೇಲೂರು ತಾಲ್ಲೂಕಿನಲ್ಲಿ ತರಕಾರಿ ಬೆಳೆಗೆ ಪ್ರಸಿದ್ಧವಾಗಿದೆ. ಇಲ್ಲಿ ತರಕಾರಿ ಬೆಳೆ ಬಿತ್ತನೆಯ ಕಾರ್ಯ ಜೋರಾಗಿದೆ.

ಪ್ರಸಕ್ತ ವರ್ಷ ರಾಜ್ಯ ಸರ್ಕಾರವು ಪ್ರಮುಖ ಆಹಾರ ಬೆಳೆಗಳಾದ ಭತ್ತ, ಜೋಳ, ರಾಗಿ, ಮೆಕ್ಕೆ ಜೋಳ, ಸಜ್ಜೆ, ತೊಗರಿ, ಉದ್ದು, ಹೆಸರು, ಸೋಯಾ, ಸೂರ್ಯಕಾಂತಿ, ಕಡಲೆ,ಅವರೆ ಸೇರಿದಂತೆ 13 ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಮಾಡಿದ್ದು ರೈತರಲ್ಲಿ ಬಿತ್ತನೆಗೆ ಇನ್ನಷ್ಟು ಉತ್ಸಾಹ ಮೂಡಿಸಿದೆ.

ಅರಕಲಗೂಡು ತಾಲ್ಲೂಕಿನಲ್ಲಿ ಹೊಗೆಸೊಪ್ಪು ಬಿತ್ತನೆಗೆ ಸೂಕ್ತ ವಾತಾವರಣ ನಿರ್ಮಾಣವಾಗಿದ್ದು ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಸಕಲೇಶಪುರ ಆಲೂರು ತಾಲ್ಲೂಕಿನ ಕಾಫಿ ಬೆಳೆಗಾರರಿಗೆ ಮಳೆಯ ಆಗಮನ ಸಂತಸ ತಂದಿದೆ. ಆದರೂ ಈ ಬಾರಿ ಮುಂಗಾರು ವಿಳಂಬವಾಗಿದ್ದು , ಕಾಫಿ ಇಳುವರಿಗೆ ಪೆಟ್ಟು ಬೀಳಲಿದೆ ಎಂದು ಸಹ ಅಂದಾಜಿಸಲಾಗಿದೆ.

ಮಳೆಯ ಕೊರತೆ ಕಾರಣ ಕಾಫಿ ಕಾಯಿ ಕಟ್ಟುವ ಸಂದರ್ಭದಲ್ಲಿ ಮಳೆ ಬಿದ್ದಿಲ್ಲ. ಹಾಗೂ ತಮ್ಮ ಕಾಫಿ ತೋಟದ ಕೃಷಿ ಹೊಂಡ ಹಾಗೂ ಕೆರೆಗಳಲ್ಲಿ ಇದ್ದ ಅಲ್ಪ ಸ್ವಲ್ಪ ನೀರಿನ್ನು ಬಳಸಿ ತೋಟಗಳಿಗೆ ನೀರು ಸಿಂಪಡಣೆ ಮಾಡಿದ್ದಾರೆ. ಇದರಿಂದ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಆದರೆ ಕಡಿಮೆ ಭೂಮಿ ಹೊಂದಿರುವ ಹಲವು ಚಿಕ್ಕ ಬೆಳೆಗಾರರಿಗೆ ಮಳೆಯ ಕೊರತೆ ಬೆಳೆ ಇಳುವರಿಗೆ ಹಾನಿಯುಂಟು ಮಾಡಿದೆ ಎಂದು ತಿಳಿದು ಬಂದಿದೆ.

ಮಳೆನಾಡು ಭಾಗವಾದ ಸಕಲೇಶಪುರ, ಆಲೂರಿನ ಸ್ವಲ್ಪ ಪ್ರದೇಶದಲ್ಲಿ ಹಸಿ ಮೆಣಸಿನ ಕಾಯಿ, ಶುಂಠಿ ಬಿತ್ತನೆ ಮಾಡಲಾಗಿದೆ ಹಸಿ ಮೆಣಸಿನ ಕಾಯಿಗೆ ಈ ಬಾರಿ ಉತ್ತಮ ಫಸಲು ರೈತರ ಕೈ ಹಿಡಿದಿದ್ದು ಒಂದು ಕಿಲೋ ಗೆ 25 ರಿಂದ 30 ರೂ ಸಿಕ್ಕಿದೆ.

ಇದರಿಂದ ಎಕರೆಗೆ ಸಾವಿರಾರು ರೂ ಲಾಭ ಗಳಿಸಿದಂತಾಗಿದೆ. ಮಳೆ ಹೆಚ್ಚು ಬಾರದೆ ಇದ್ದಲ್ಲಿ ಇನ್ನಷ್ಟು ದಿನ ಹಸಿ ಮೆಣಸಿನ ಕಾಯಿ ಬೆಳೆಗೆ ಹೆಚ್ಚು ಹಾನಿಯಾಗದು. ಹೆಚ್ಚು ಶೀತ ಪ್ರದೇಶದಲ್ಲಿ ಈ ಬೆಳೆ ಇಳುವರಿ ಹಾಗೂ ಬೆಳವಣಿಗೆಗೆ ಹೆಚ್ಚಿನ ಮಳೆ ಮಾರಕ ಎಂದು ರೈತರು ಹೇಳುತ್ತಾರೆ.

ಇನ್ನೂ ಈ ತಾಲ್ಲೂಕಿನಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಶುಂಠಿ ಬಿತ್ತನೆ ಕಡಿಮೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ ಆದರೆ ಉತ್ತಮ ಬೆಲೆ ಸಿಗುತ್ತಿದ್ದು ಈ ಬಾರಿ ಶುಂಠಿ ಬೆಳೆಗಾರರು ನಿರೀಕ್ಷೆ ಗೂ ಮೀರಿ ಆದಾಯ ಗಳಿಸಿದ್ದಾರೆ.

ಇದನ್ನು ಕಂಡ ಹಲವು ಬೆಳೆಗಾರರು ಮುಂದಿನ ಬೆಳೆಯಾಗಿ ಶುಂಠಿ ಬಿತ್ತನೆಗೆ ಸೂಕ್ತ ಭೂಮಿ ಬಾಡಿಗೆಗೆ ಹಾಗೂ ಗುತ್ತಿಗೆ ಪಡೆಯುವ ಕಾರ್ಯದಲ್ಲಿ ನಿರತರಾಗಿದ್ದು ಹಲವು ಭೂ ಮಾಲೀಕರು ಶುಂಠಿ ಬಿತ್ತನೆ ಮಾಡಲು ತಮ್ಮ ಭೂಮಿ ಬಾಡಿಗೆಗೆ ನೀಡುವುದಾಗಿ ಪತ್ರಿಕೆ ಪ್ರಕಟಣೆಯನ್ನು ಸಹ ನೀಡುತ್ತಿದ್ದಾರೆ.

ಹೇಮಾವತಿ ಜಲಾಶಯ ಸ್ಥಿತಿಗತಿ: ಜಿಲ್ಲಾಯ ಜೀವನಾಡಿ ಹೇಮಾವತಿ ಜಲಾಶಯ ಕಳೆದ ಬಾರಿ ಜು.15 ಕ್ಕೆ ಭರ್ತಿಯಾಗಿತ್ತು. ಆದರೆ ಈ ಬಾರಿ ಮುಂಗಾರು ವಿಳಂಬವಾಗಿದ್ದು ಜಲಾಶಯಕ್ಕೆ ಒಳ ಹರಿವು ಕಡಿಮೆಯಾಗಿದೆ. ಜಲಾಶಯ ಭರ್ತಿಯಾದರೆ ಜಿಲ್ಲಾಯ ಜನರು ವರ್ಷಗಟ್ಟಲೆ ನೀರಿನ ಕೊರತೆ ಎದುರಿಸಬೇಕಿಲ್ಲ ಎನ್ನಬಹುದು.

ಜಲಾಶಯದ ಗರಿಷ್ಠ ಮಟ್ಟ 2992 ಅಡಿ ಆಗಿದ್ದು ಇಂದು 2865.90 ಅಡಿ ತುಂಬಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2871.41 ಅಡಿಗಳಷ್ಟು ಜಲಾಶಯ ತುಂಬಿತ್ತು. ಪ್ರಸಕ್ತ ಕೇವಲ 219 ಕ್ಯೂಸೆಕ್ಸ್ ಮಾತ್ರ ಒಳಹರಿವು ಇದ್ದರೆ ಕಳೆದ ಬಾರಿ 3493 ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದು ಬರುತಿತು.
ಒಟ್ಟಾರೆ ಈ ಬಾರಿ ಉತ್ತಮ ಮುಂಗಾರು ಮಳೆಯಾದರೆ ಜೀವ ಜಲಕ್ಕೆ ರೈತರಿಗೆ ಅನುಕೂಲವಾಗಲಿದೆ ಹಾಗೂ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ.

– ಸಂತೋಷ್ ಸಿ.ಬಿ. ಹಾಸನ

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ