ಜ.25ರಂದು ಸಿಎಂ ಕಚೇರಿ ಮುಂದೆ ಹಾಸನ ಜೆಡಿಎಸ್ ಜನಪ್ರತಿನಿಧಿಗಳ ಧರಣಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.23- ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಅನುಮೋದನೆಯಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಡೆ ಹಿಡಿದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಹಾಸನ ಜಿಲ್ಲೆಯ ಶಾಸಕರು, ಸಂಸದರು ಮುಖ್ಯಮಂತ್ರಿಗಳ ಗೃಹ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ.

ಜನವರಿ 25ರಂದು ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಶಾಸಕರು, ಸಂಸದರು ಪ್ರತಿಭಟನೆ ನಡೆಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳು ಮತ್ತು ಕಾರ್ಯ ಕ್ರಮಗಳನ್ನು ರೂಪಿಸಿ ಅನುದಾನ ಒದಗಿಸಿ ಆಯ ವ್ಯಯದಲ್ಲಿ ಘೋಷಣೆ ಮಾಡಿ ಅನುಮೋದನೆ ಪಡೆಯಲಾಗಿದ್ದರೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಡೆ ಹಿಡಿಯಲಾಗಿದೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.

ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಟೆಂಡರ್ ಪ್ರಕ್ರಿಯೆಗಳು ನಡೆದು ಹಲವು ಕಾಮಗಾರಿಗಳಿಗೆ ಏಜೆನ್ಸಿಯನ್ನು ಗೊತ್ತುಪಡಿಸಿ ವಿವಿಧ ಹಂತಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಇಂತಹ ಕಾಮಗಾರಿಗಳಿಗೆ ತಡೆ ಒಡ್ಡಿದರೆ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುತ್ತದೆ ಮತ್ತು ಕಾಮಗಾರಿ ವೆಚ್ಚ ಹೆಚ್ಚಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಹಾಸನ ನಗರದಲ್ಲಿ ಗ್ರೀನ್‍ಫೀಲ್ಡ್ ಏರ್ ಪೆÇೀರ್ಟ್ ಸ್ಥಾಪಿಸುವ ಕಾಮಗಾರಿ ಹಾಸನ ನಗರದ ಚನ್ನಪಟ್ಟಣ ಕೆರೆಯಂಗಳದಲ್ಲಿ ವಿಹಾರಧಾಮ, ಉದ್ಯಾನವನ, ಮಳೆನೀರು ಮತ್ತು ಕೊಳಚೆ ನೀರು ಹೊರಹಾಕುವ ಯೋಜನೆ ಮುಂತಾದ ಕಾಮಗಾರಿಗಳಿಗೆ ಇಂಟಿಗ್ರೇಟೆಡ್ ಮಾಸ್ಟರ್ ಪ್ಲಾನ್‍ನಡಿ 144 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಈ ಯೋಜನೆ ತಡೆಹಿಡಿದು ಯೋಜನೆಯ ಅನುದಾನವನ್ನು ನಗರಸಭೆ ವ್ಯಾಪ್ತಿಯ ಅಭಿವೃದ್ಧಿ ಮತ್ತು ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಚಿಕ್ಕಮಗಳೂರು-ಬೇಲೂರು, ಬೇಲೂರು-ಆಲೂರು-ಹಾಸನ ಹೊಸ ರೈಲು ಮಾರ್ಗದ ಯೋಜನೆ ವಿಳಂಬವಾಗುತ್ತಿದೆ. ಹೇಮಾವತಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಕೃಷಿ ಭೂಮಿಗೆ ನೀರುಣಿಸುವ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲು ಅನುಮೋದನೆಯಾಗಿತ್ತು. ಯಗಚಿ ಜಲಾಶಯ ಯೋಜನೆಯ ನಾಲಾ ಸಂತ್ರಸ್ತರಿಗೆ ಪರಿಹಾರವೂ ಬಾಕಿ ಇದೆ. ತೋಟಗಾರಿಕೆ ಮಹಾವಿದ್ಯಾಲಯವನ್ನು ತುರ್ತಾಗಿ ಪ್ರಾರಂಭಿಸಬೇಕಿದೆ.

500 ಸಂಖ್ಯಾಬಲದ ಬಾಲಕಿಯರ ವಸತಿ ನಿಲಯ ಸ್ಥಾಪಿಸುವ ಕಾಮಗಾರಿ, ಕೆಎಸ್‍ಆರ್‍ಟಿಸಿ ಪ್ರಾದೇಶಿಕ ಕಾರ್ಯಾಗಾರ ಮೇಲ್ದರ್ಜೆಗೇರಿಸುವುದು, ಜಿಲ್ಲೆಯ
ವಿಧಾನಸಭಾ ಕ್ಷೇತ್ರಗಳಿಗೆ ಮಳೆ ಹಾನಿ ಯೋಜನೆಯಡಿ ಅನುದಾನ ಬಿಡುಗಡೆಗೊಳಿಸದಿರುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ಮಾಡುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆ ಕೈ ಬಿಡಲು ಸಿಎಂ ಮನವಿ: ಎಚ್.ಕೆ.ಕುಮಾರಸ್ವಾಮಿ ಅವರ ಪತ್ರಕ್ಕೆ ಪ್ರತಿಯಾಗಿ ಪತ್ರ ಬರೆದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ್ದಾರೆ.

ಕೋವಿಡ್‍ನಿಂದಾಗಿ ಆರ್ಥಿಕತೆ ಮೇಲೆ ಪರಿಣಾಮ ಉಂಟಾಗಿದೆ. ಆದರೂ ಆರ್ಥಿಕ ಸಂಕಷ್ಟದ ನಡುವೆಯೂ ಯಾವುದೇ ಸರ್ಕಾರಿ ಯೋಜನೆಗಳನ್ನು ತಡೆ ಹಿಡಿಯದೆ ಅನುಷ್ಠಾನ ಮಾಡಲಾಗುತ್ತಿದೆ. ಸಾರಿಗೆ ಸಂಸ್ಥೆ ಮತ್ತು ಸರ್ಕಾರಿ ನೌಕರರ ವೇತನವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ ಹಂತದಲ್ಲಿದ್ದು, ಪತ್ರದಲ್ಲಿ ಪ್ರಸ್ತಾಪಿಸಿರುವ ಕಾಮಗಾರಿಗೆ ಸಂಬಂಧಿಸಿದಂತೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ರಮ ವಹಿಸುವುದಾಗಿ ಪತ್ರದಲ್ಲಿ ಸಿಎಂ ಭರವಸೆ ನೀಡಿದ್ದಾರೆ.

Facebook Comments