ಸಿನಿಮಾ ಸ್ಟೈಲಲ್ಲಿ ಅಪಹರಣಕಾರರಿಂದ ಯುವಕನನ್ನ ರಕ್ಷಿಸಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜು.29- ಹಣ ಕಾಸಿನ ವಿಷಯಕ್ಕೆ ಯುವಕನನ್ನು ಕಿಡಿಗೇಡಿಗಳ ತಂಡ ಅಪಹರಿಸಿಕೊಂಡು ಹೋಗುತ್ತಿದ್ದಾಗ ಹಾಸನ ಪೊಲೀಸರು ಪ್ರಾಣದ ಹಂಗು ತೊರೆದು ಸಿನಿಮೀಯ ರೀತಿ ಚಲಿಸುತ್ತಿದ್ದ ಕಾರಿನಿಂದ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಪೊಲೀಸರು ಯುವಕನನ್ನು ರಕ್ಷಣೆ ಮಾಡುತ್ತಿರುವ ವಿಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸಿನೆಮಾ ಸಾಹಸ ದೃಶ್ಯವನ್ನೂ ಮೀರಿಸುವಂತಿತ್ತು.

ಹಣಕಾಸಿನ ವಿಷಯ ಸಂಬಂಧ ಕಾಸರಗೋಡಿನ 33 ವರ್ಷದ ಅನ್ವರ್ ಎಂಬ ಯುವಕನನ್ನ ಕಿಡಿಗೇಡಿಗಳ ತಂಡವೊಂದು ಅಪಹ ರಿಸಿಕೊಂಡು ಹಾಸನಕ್ಕೆ ಬಂದಿತ್ತು. ಈ ವೇಳೆ ಕಾರು ಗೊರೂರಿನ ಮೂಲಕ ಹೋಗುತ್ತಿರುವುದು ತಿಳಿದ ಪೊಲೀಸರು, ಅವರನ್ನು ಹಿಡಿಯುವ ಸಲುವಾಗಿಯೇ ಯಾರಿಗೂ ಅನುಮಾನ ಬಾರದಂತೆ ರಸ್ತೆಗೆ ಅಡ್ಡಲಾಗಿ ಲಾರಿ, ಜೆಸಿಬಿ ನಿಲ್ಲಿಸಿಕೊಂಡು ಕಾಯುತ್ತಿದ್ದರು.

ಲಾರಿ ಅಡ್ಡ ಇರುವುದನ್ನು ನೋಡಿ ಕಾರಿನ ವೇಗ ನಿಧಾನವಾದ ತಕ್ಷಣ, ಕಾರಿನ ಬಳಿ ಶರವೇಗದಿಂದ ಓಡಿ ಬಂದ ಗೊರೂರಿನ ಪೊಲೀಸರು, ಕಾರು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡೊಡನೇ ಕಾರನ್ನು ಯೂಟರ್ನ್ ಮಾಡಿ ಪರಾರಿಯಾಗಲು ಕಿಡ್ನಾಪರ್ಸ್ ತಂಡ ಯತ್ನಿಸಿದೆ. ಆ ಸಂದರ್ಭದಲ್ಲಿ ಪೊಲೀಸರು ತಮ್ಮ ಪ್ರಾಣದ ಹಂಗನ್ನ ತೊರೆದು, ಚಲಿಸುತ್ತಿದ್ದ ಕಾರಿನ ಹಿಂಬದಿ ಬಾಗಿಲು ತೆರೆದು ಯುವಕನನ್ನು ರಕ್ಷಿಸಿದ್ದಾರೆ. ಈ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸಿನಿಮಾಗಳ ಸಾಹಸ ದೃಶ್ಯಗಳನ್ನು ಮೀರಿಸುವಂತಿದೆ.

ಕಾರಿನಿಂದ ಅನ್ವರ್‍ನನ್ನು ರಕ್ಷಿಸಿ ದರೂ ಕೂಡ ಅಪಹರಣ ಕಾರರು ಕಾರನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ಕಾರಿನ ಹಿಂದೆಯೇ ಓಡುತ್ತ ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆ ಪಕ್ಕದ ಕಾಂಪೌಂಡ್‍ಗೆ ಗುದ್ದಿದೆ. ತಕ್ಷಣ ಕಾರಿನಿಂದ ಇಳಿದ ಕಿಡ್ನಾಪರ್ಸ್ ತಪ್ಪಿಸಿಕೊಂಡಿದ್ದಾರೆ. ಆದರೆ ಪ್ರಾಣದ ಹಂಗು ತೊರೆದು ಕಿಡ್ನಾಪ್ ಆದ ಯುವಕನನ್ನು ರಕ್ಷಿಸಿದ ಪೊಲೀಸರ ತಂಡಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಾಸನ ಪೊಲೀಸರು ಅನ್ವರ್‍ನನ್ನು ಕಾಸರಗೋಡು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಒಟ್ಟಾರೆ ಕಿಡ್ನಾಪ್ ಆಗಿದ್ದ ಯುವಕ ನನ್ನು ರಕ್ಷಿಸಿದ ಹಾಸನ ಪೊಲೀಸರ ಸಾಹಸ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು ಎಲ್ಲರೂ ಹ್ಯಾಟ್ಸಾಪ್ ಅಂತಿದ್ದಾರೆ ಸ್ಥಳೀಯರು.

Facebook Comments