ಹಾಸನ ಜಿಲ್ಲೆಯಲ್ಲಿ ಗಾಂಜಾ ದಂಧೆಯನ್ನು ಬುಡ ಸಮೇತ ಕಿತ್ತೊಗೆಯುತ್ತೇವೆ ; ಎಸ್ಪಿ ಶ್ರೀನಿವಾಸಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ : ಜಿಲ್ಲೆಯಲ್ಲಿ ಗಾಂಜಾ ಬೆಳೆಯುವುದು ಹಾಗೂ ಮಾರಾಟ ಮಾಡುವುದನ್ನು ಬುಡ ಸಮೇತ ಕಿತ್ತೊಗೆಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸಗೌಡ ತಿಳಿಸಿದರು .

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಜಿಲ್ಲೆಯ ಅರಸೀಕೆರೆ- ಬೇಲೂರು ಹಾಗೂ ಇತರೆ ತಾಲೂಕಿನಲ್ಲಿ ಶುಂಠಿ ಹಾಗೂ ಇತರೆ ಬೆಳೆಗಳ ಮಧ್ಯೆ ಗಾಂಜಾವನ್ನು ಬೆಳೆಯಲಾಗುತ್ತಿದೆ.

ಇಲ್ಲಿನ ರೈತರಿಗೆ ಗಾಂಜಾ ಬೆಳೆಯಲು ಸಹಕರಿಸುತ್ತಿರುವವರು ನೆರೆರಾಜ್ಯಗಳಾದ ಕೇರಳ ಹಾಗೂ ತಮಿಳುನಾಡು ಮೂಲದವರಾಗಿದ್ದಾರೆ ಅಲ್ಲದೆ ಜಿಲ್ಲೆಯಲ್ಲಿ ಗಾಂಜಾ ಹಾವಳಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪೊಲೀಸರು ಪಣ ತೊಟ್ಟಿದ್ದಾರೆ ಎಂದು ಹೇಳಿದರು.

ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ 19 ಗಾಂಜಾ ಮಾರಾಟ ಹಾಗೂ ಬೆಳೆದಿರುವ ಪ್ರಕರಣಗಳಲ್ಲಿ 30 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಕಳೆದ 20 ದಿನದಲ್ಲಿ 11 ಪ್ರಕರಣಗಳನ್ನು ದಾಖಲಿಸಿ 18 ಕಿಲೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

# ಹೋಂಸ್ಟೇ- ರೆಸಾರ್ಟ್ ಗಳಿಗೆ ಖಡಕ್ ಸೂಚನೆ ;
ಗಾಂಜಾ ಮಾರಾಟ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಲೆನಾಡು ಭಾಗ ಹಾಗೂ ಜಿಲ್ಲೆಯ ಇತರೆಡೆ ಇರುವ ರೆಸಾರ್ಟ್ ಹಾಗೂ ಹೋಂಸ್ಟೇಗಳ ಮಾಲೀಕರಿಗೆ ಸಭೆ ಕರೆದು ಗಾಂಜಾ ಹಾಗೂ ಇತರೆ ಮಾದಕ ವಸ್ತು ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು ಹಾಗೂ ರೇವ್ ಪಾರ್ಟಿ ಸೇರಿದಂತೆ ಇತರೆ ಯಾವುದೇ ಮನೊರಂಜನೆ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದೆಂದು ಖಡಕ್ ಸೂಚನೆ ನೀಡಿರುವುದಾಗಿ ತಿಳಿಸಿದರು.

# ಪೋಷಕರಿಗೆ ಇರಲಿ ಮಕ್ಕಳ ಮೇಲೆ ನಿಗಾ ;
ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುವಾಗಿ ನಶೆ ಏರಿಸುವ ಪಾಸ್ಟ್ ಗಮ್ ಮತ್ತು ಮೆಡಿಕಲ್ ಶಾಪ್ ನಲ್ಲಿ ಸಿಗುವ ಸಿರಪ್ ಇತರೆ ಔಷಧಗಳನ್ನು ಯುವಕರು ಬಳಸುತ್ತಿರುವುದು ಕಂಡುಬಂದಿದೆ .

ಇದರ ಬಳಕೆಯ ಬಗ್ಗೆ ಮನೆಯಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕು; ಈ ರೀತಿ ವಸ್ತುಗಳನ್ನು ಬಳಸುತ್ತಿದ್ದರೆ ಅವರಿಗೆ ತಿಳುವಳಿಕೆ ಹೇಳಿ ವ್ಯಸನದಿಂದ ಮುಕ್ತಗೊಳಿಸಬೇಕು ಎಂದು ಸಲಹೆ ನೀಡಿದರು. ಮೆಡಿಕಲ್ ಗಳಲ್ಲೂ ಸಹ‌ ಇಂತಹ ಔಷಧ ಮಾರಾಟವನ್ನು ವೈದ್ಯರ ಚೀಟಿ ಇಲ್ಲದೆ ಯಾರಿಗೂ ನೀಡಬಾರದೆಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

# ಹೆಚ್ಚು ನಾಕಾಬಂದಿ;
ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಹೋಂಸ್ಟೇ ಹಾಗೂ ರೆಸಾರ್ಟ್ ಗಳಿಗೆ ಜಿಲ್ಲೆ ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ‌ ಮತ್ತು ವೀಕೆಂಡ್ ಸಂದರ್ಭದಲ್ಲಿ ಹೆಚ್ಚು ನಾಕಬಂದಿಯನ್ನು ಹಾಕಲಾಗುವುದು .

ಇಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಆಗಮಿಸುವ ಪ್ರತಿಯೊಂದು ವಾಹನಗಳನ್ನು ಪೂರ್ಣಪ್ರಮಾಣದಲ್ಲಿ ತಪಾಸಣೆ ಮಾಡಿ ಬಿಡಲಾಗುವುದು ಎಂದು ಶ್ರೀನಿವಾಸ ಗೌಡ ತಿಳಿಸಿದ್ದಾರೆ.

Facebook Comments

Sri Raghav

Admin