ವರ್ಷಕ್ಕೊಮ್ಮೆ ದರ್ಶನ ನೀರುವ ಹಾಸನಾಂಬೆ ಮಹಿಮೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Hassanamba Deviನವೆಂಬರ್ 9ರ ವರೆಗೆ ಹಾಸನದ ಪ್ರಸಿದ್ದ ಹಾಸನಾಂಬ ದೇವಿಯ ಬಾಗಿಲು ತೆರೆದು ದರ್ಶನ ಭಾಗ್ಯ ಕಲ್ಪಿಸಲಾಗುತ್ತಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ದೊರಕುವ ಈ ಜಾತ್ರೆ ಇಂದು ನಾಡಿನಾದ್ಯಂತ ಭಕ್ತರ ಮನಸೆಳೆಯುತ್ತಿರುವ ಪ್ರಸಿದ್ದ ದೇಗುಲವಾಗಿದೆ. ಈ ಸಂದರ್ಭ ಹಾಸನ ನಗರ ಪರಿಚಯಿಸುವ ಲೇಖನ.
ಅಭಿವೃದ್ಧಿಯ ಪಥದಲ್ಲಿ ಸಾಗಿರುವ ಹಾಸನ ಬಡವರ ಊಟಿಯೆಂದು ಹೆಸರು ಪಡೆದಿದೆ. ಹಾಸನವನ್ನು ಒಂದು ಸುತ್ತು ತಿರುಗಿದರೆ ಅರೇ! ಇಲ್ಲಿ ಎಷ್ಟೊಂದು ದೇವಾಲಯಗಳು! ಭಕ್ತಿ ಭಾವುಕತೆಯ ಶಕ್ತಿ ದೇವತೆಗಳು. ಒಂದೊಂದು ಜನಾಂಗಕ್ಕೂ ಒಂದೊಂದು ದೇವರು. ಒಂದೊಂದು ಜನಾಂಗಕ್ಕೂ ಒಂದೊಂದು ಬೀದಿ. ಒಟ್ಟಾರೆ ದೇವಾಲಯಗಳ ಆಗರ ಹಾಸನ ನಗರ.ನೀರಿನಿಂದಾವೃತ್ತವಾದ ಗುಡ್ಡ ಪ್ರದೇಶವೇ ಸಿಂಹಾಸನಪುರಿ ಅರ್ಥಾತ್ ಹಾಸನ. ಬೀರನಹಳ್ಳಿ ಕೆರೆ, ಚನ್ನಪಟ್ಟಣ ಕೆರೆ, ಹುಣಸಿನಕೆರೆ, ಸತ್ಯಮಂಗಲ ಕೆರೆ, ಮಾಕನಕೆರೆ ಹೀಗೆ ಹಾಸನ ಸುತ್ತಲೂ ಕೆರೆಗಳಿತ್ತು. ಖರೆ. ಹಾಸನ ಗೆಜೆಟಿಯರ್‍ನಂತೆ ಮಹಾಭಾರತದ ಕಾಲದಲ್ಲಿ ಅರ್ಜುನನ ಮೊಮ್ಮಗ ಜನಮೇಜಯ ಶಾಪಗ್ರಸ್ಥನಾಗಿದ್ದ ಕಾಲದಲ್ಲಿ ಇಲ್ಲಿ ನೆಲೆಸಿದ್ದ. ಆಗ ಈ ಸ್ಥಳಕ್ಕೆ ಸಿಂಹಾಸನಪುರಿಯೆಂದು ಹೆಸರಿತ್ತು.

ಐತಿಹಾಸಿಕವಾಗಿ ಚೋಳ ಅರಸರ ಅಧಿಪತಿಯಾದ ಬುಕ್ಕನಾಯಕ ಮತ್ತು ಅವನ ವಂಶಸ್ಥರು ಕ್ರಿ.ಶ. ಸುಮಾರು 11ನೇ ಶತಮಾನದಿಂದ ಒಂದು ಶತಮಾನಕ್ಕೂ ಹೆಚ್ಚು ಕಾಲ ಆಳಿದವರು ಎಂದು ತಿಳಿದುಬರುತ್ತದೆ. ಹೊಯ್ಸಳರಿಗೂ ಪೂರ್ವದಲ್ಲಿ ಇದು ಗಂಗರ ಆಡಳಿತಕ್ಕೆ ಒಳಪಟ್ಟಿತು. ಬುಕ್ಕನಾಯಕ ತನ್ನ ವಿಜಯೋತ್ಸವ ನೆನಪಿಗಾಗಿ ಒಂದು ಕೋಟೆ ಕಟ್ಟಿ ಆ ಸ್ಥಳಕ್ಕೆ ಚನ್ನಪಟ್ಟಣ ಎಂದು ಹೆಸರಿಟ್ಟು ಪಕ್ಕದಲ್ಲಿಯೇ ಒಂದು ಕೆರೆಯನ್ನು ಕಟ್ಟಿಸಿದನು. ಬುಕ್ಕನಾಯಕನ ನಂತರ 12ನೇ ಶತಮಾನದಲ್ಲಿ ಹೊಯ್ಸಳರ ಕಡೆಯ ಸಂಜೀವ ಕೃಷ್ಣಪ್ಪನಾಯಕ ಎಂಬ ಪಾಳೆಯಗಾರನಿಗೆ ಈ ಪ್ರದೇಶ ಸೇರಿತ್ತು. ಈ ನಾಯಕ ಆಳುತ್ತಿದ್ದ ಸಂದರ್ಭದಲ್ಲಿ ಒಮ್ಮೆ ಪ್ರಯಾಣ ಹೊರಟಾಗ ಒಂದು ಮೊಲ ಅಡ್ಡಬಂದು ಪಟ್ಟಣವನ್ನು ಪ್ರವೇಶಿಸಿತು. ಆಗ ಖಿನ್ನ ಮನಸ್ಕನಾದ ಕೃಷ್ಣಪ್ಪನಾಯಕನ ಕನಸಿನಲ್ಲಿ ದೇವಿ ಕಾಣಿಸಿಕೊಂಡು ಈ ಸ್ಥಳದಲ್ಲಿ ಕೋಟೆಯನ್ನು ಕಟ್ಟಿಸೆಂದು ಹೇಳಲಾಗಿ ಅಂತೆಯೇ ಕೋಟೆ ಕಟ್ಟಿ ಅದಕ್ಕೆ ಹಾಸನಾಂಬೆ ಎಂದು ಹೆಸರಿಟ್ಟನೆಂದು ಹಾಸನ ತಾಲ್ಲೂಕಿನ ಕುದುರುಗುಂಡಿ ಗ್ರಾಮದಲ್ಲಿರುವ ಕ್ರಿ.ಶ.1140ರ ವೀರಗಲ್ಲಿನ ಶಾಸನದಿಂದ ತಿಳಿದುಬರುತ್ತದೆ.

ಈ ಹಾಸನಾಂಬ ದೇವಿಯ ದರ್ಶನ ಸರ್ವಕಾಲದಲ್ಲೂ ಭಕ್ತರಿಗೆ ಸಿಗುವುದಿಲ್ಲ. ವರ್ಷಕ್ಕೊಮ್ಮೆ ಅಶ್ವೀಜ ಮಾಸ ಪೂರ್ಣಿಮೆಯ ನಂತರ ಬರುವ ಗುರುವಾರದಂದು ಬಾಗಿಲು ತೆರೆದರೆ ಬಲಿಪಾಡ್ಯಮಿಯ ಮಾರನೇದಿನ ಬಾಗಿಲನ್ನು ಮುಚ್ಚಲಾಗುವುದು. ದೇವಸ್ಥಾನದ ಬಾಗಿಲನ್ನು ಮುಚ್ಚುವಾಗ ಹಚ್ಚಿದ್ದ ದೀಪ ಮತ್ತೆ ಮುಂದಿನ ವರ್ಷ ಬಾಗಿಲು ತೆಗೆಯುವವರೆಗೆ ಗರ್ಭಗುಡಿಯಲ್ಲಿ ಆರದೇ ಹಾಗೇ ಉರಿಯುತ್ತಿ ರುತ್ತದೆ ಎಂಬ ನಂಬಿಕೆಯಿಂದ ದೇವಾಲಯ ಬಹು ಜನಪ್ರಿಯವಾಗಿದೆ. ಬಾಗಿಲನ್ನು ತೆರೆಯುವ ದಿವಸ ಎಲ್ಲಾ ತಳವಾರ ಮನೆತನದವರು ಹಾಜರಿದ್ದು ದೇವಿಯ ಗರ್ಭಗುಡಿಯ ಮುಂದೆ ಬಾಳೆಕಂದನ್ನು ನೆಟ್ಟು ದೇವಿಯನ್ನು ಭಜಿಸುತ್ತ ಅರಸು ಮನೆತನದವರಿಂದ ಬಾಳೆಕಂದನ್ನು ಕತ್ತರಿಸಿದ ನಂತರವೇ ದೇವಾಲಯದ ಬಾಗಿಲನ್ನು ತೆರೆಯ ಲಾಗುವುದು. ಮೊದಲನೆ ದಿನ ಅಮ್ಮನವರಿಗೆ ಯಾವುದೇ ರೀತಿಯ ಆಭರಣ ವಸ್ತ್ರ ತೊಡಿಸಿರುವುದಿಲ್ಲ. ಎರಡನೆ ದಿನದಿಂದ ದೇವಿಯ ಆಭರಣ ವಸ್ತ್ರಗಳನ್ನು ಜಿಲ್ಲಾ ಖಜಾನೆಯಿಂದ ಪಲ್ಲಕ್ಕಿ ಯೊಂದಿಗೆ ತಂದು ಅಲಂಕರಿಸಿ ಪೂಜೆ ಮಾಡಿ ನೈವೇದ್ಯ ಅರ್ಪಿಸಲಾಗುವುದು. ಹಾಸನಾಂಬೆಯನ್ನು ಕುಂಭಗಳ ರೂಪದಲ್ಲಿ ಪ್ರತಿಷ್ಠಾಪಿಸಿ ಈ ಕುಂಭಗಳಿಗೆ ಹೆಣ್ಣು ದೇವತೆಯಂತೆ ಮುಖವಾಡ ಮಾಡಿ ಅಲಂಕರಿಸಲಾಗುತ್ತದೆ.

ಒಂದು ಕತೆಯಂತೆ ಪ್ರತಿನಿತ್ಯ ಸೊಸೆಗೆ ಕಿರುಕುಳ ಕೊಡುತ್ತಿದ್ದ ಅತ್ತೆ ಒಂದು ದಿನ ಸೊಸೆಯನ್ನು ಹಿಂಬಾಲಿಸಿ ಬಂದಾಗ ದೇವಿಯ ಧ್ಯಾನದಲ್ಲಿ ಮಗ್ನಳಾಗಿದ್ದನ್ನು ಕಂಡು ಸಿಟ್ಟಿನಿಂದ ಮನೆಯ ಕೆಲಸಕ್ಕಿಂತ ದೇವಿಯ ದರ್ಶನ ನಿನಗೆ ಹೆಚ್ಚಾಯಿತೇ ಎಂದು ಪಕ್ಕದಲ್ಲಿದ್ದ ಚಂದ್ರಬಟ್ಟಲನ್ನು ತಲೆಗೆ ಕುಕ್ಕಿದ್ದರಿಂದ ನೋವನ್ನು ತಾಳಲಾರದೇ ಸೊಸೆ ಅಮ್ಮ ಹಾಸನಾಂಬೆ ಎಂದು ಭಕ್ತಿಯಿಂದ ಕೂಗಿದಾಗ ಭಕ್ತಳ ಕಷ್ಟ ನೋಡಲಾರದೆ ದೇವಿ, ಭಕ್ತೆಗೆ ಮೆಚ್ಚಿ ಸನ್ನಿಧಾನದಲ್ಲಿ ಕಾವಲಿನಂತಿರುತ್ತೇನೆ ಎಂದು ಕಲ್ಲಾಗಿ ನೆಲೆಸಿದಳೆಂದೂ, ಪ್ರತೀ ವರ್ಷವೂ ಭತ್ತದ ಕಾಳಿನ ತುದಿಯಷ್ಟು ದೇವಿಯ ಕಡೆಗೆ ಚಲಿಸುವಳೆಂದೂ, ದೇವಿಯ ಪಾದ ತಲುಪಿದ ಕ್ಷಣದಲ್ಲೇ ಕಲಿಯುಗ ಅಂತ್ಯವಾಗುತ್ತದೆ ಎಂದು ಗ್ರಾಮದೇವತೆಗೊಂದು ಕಥೆಯಿದೆ. ಹಾಸನಾಂಬ ದೇವಾಲಯದ ಆವರಣದಲ್ಲಿ ಸಿದ್ದೇಶ್ವರ ದೇವಾಲಯವಿದೆ. ಸಿದ್ದೇಶ್ವರಸ್ವಾಮಿಯ ಮೂರ್ತಿಯು ಅರ್ಜುನನಿಗೆ ಈಶ್ವರನ್ನು ಪಾಶುಪತಾಸ್ತ್ರ ಕೊಡುವ ಆಕಾರದಲ್ಲಿದೆ. ಗರ್ಭಗುಡಿಯಲ್ಲಿ 4 ಅಡಿ ಎತ್ತರ 4 ಅಡಿ ಉದ್ದವಾದ ಒಂದು ಕಲ್ಲು ಇದ್ದು ಅದರ ಮೇಲೆ ಉಬ್ಬುಚಿತ್ರವಿದೆ. ಅದನ್ನು ಸಿದ್ದೇಶ್ವರ ಎಂದು ಕರೆಯುತ್ತಾರೆ.
ದೇವಾಲಯದ ಪ್ರಾಂಗಣದಲ್ಲಿ ಕಳ್ಳಪ್ಪನ ಗುಡಿಯಿದೆ. ದೇವಿಯ ಒಡವೆ ಕದಿಯಲು ಬಂದ ಕಳ್ಳರು ದೇವಿಯ ಕೋಪ, ಶಾಪಕ್ಕೆ ಈಡಾಗಿ ಕಲ್ಲಾಗಿರುವರೆಂದು ಪ್ರತೀತಿ ಇದೆ. ಕಳ್ಳಪ್ಪನ ಗುಡಿಯ ಪಕ್ಕದಲ್ಲೇ 5 ಅಡಿ ಉದ್ದದ ಒಂದು ಕಂಬವಿದೆ ಇದನ್ನು ಹಾಲಪ್ಪನವರ ಗದ್ದಿಗೆ ಎಂದು ಕರೆಯುವರು. ಹಾಲಪ್ಪನವರ ಗದ್ದಿಗೆಯ ಪಕ್ಕದಲ್ಲೇ ಸಪ್ತಮಾತೃಕೆಯರು ಇರುವಲ್ಲಿ ಶ್ರೀ ವೀರಭದ್ರಸ್ವಾಮಿ ಇರುವುದು ವಾಡಿಕೆ. ಸಪ್ತಮಾತೃಕೆಯರು ಇರುವ ಬಲಭಾಗದಲ್ಲಿ ಶ್ರೀ ವೀರಭದ್ರಸ್ವಾಮಿ ಮತ್ತು ಎಡಭಾಗದಲ್ಲಿ ಗಣಪತಿಯನ್ನು ಇರಿಸಿ ಮಾತೃ ಗಣಗಳನ್ನಾಗಿರಸಬೇಕೆಂಬ ವಿಧಿಯಿದೆ. ಇದರಂತೆ ಇಲ್ಲಿ ದರ್ಬಾರ್ ಗಣಪತಿಯಿದೆ. ದೇವಾಲಯದ ಆವರಣದಲ್ಲಿ 101 ಲಿಂಗವನ್ನು ಒಂದೇ ಕಡೆ ನೋಡುವ ಅವಕಾಶವಿದೆ. ಈ ಗುಡಿಯ ಮೇಲ್ಬಾಗದಲ್ಲಿ 4 ಅಡಿ ಎತ್ತರದ ಇನ್ನೊಂದು ಮಹಾಲಿಂಗವಿದೆ.

ಹಾಸನ ನಗರದ ಹಳೇ ಬಸ್ ನಿಲ್ದಾಣದ ಬಳಿ ಕಸ್ತೂರಿ ಬಾ ರಸ್ತೆಯಲ್ಲಿ ಸಿಗುವ ಕಟ್ಟಿನಕೆರೆ ಮಾರುಕಟ್ಟೆಯ ಪಕ್ಕದಲ್ಲಿ ಇರುವ ದೇವಿಗೆರೆಗೆ ಈ ಹೆಸರು ಬರಲು ತನ್ನದೇ ಐತಿಹ್ಯ ಸ್ಥಳಪುರಾಣಗಳಿವೆ. ಸಪ್ತಮಾತೃಕೆಯರಾದ ಬ್ರಾಹ್ಮೀದೇವಿ, ಮಹೇಶ್ವರಿ, ಕೌಮಾರಿ, ವೃಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿಯರು ವಾರಣಾಸಿಯಿಂದ ವಾಯುವಿಹಾರಕ್ಕೆ ಹೊರಟು ದಕ್ಷಿಣ ಭಾರತದಲ್ಲಿ ಹೋಗುತ್ತಿರುವಾಗ ಈ ಕ್ಷೇತ್ರದ ಸೌಂದರ್ಯಕ್ಕೆ ಆಕರ್ಷಿತರಾಗಿ ಇಲ್ಲೇ ನೆಲೆಸಿದರೆಂದು ಪ್ರತೀತಿ. ಬ್ರಾಹ್ಮೀದೇವಿಯು ಕೆಂಚಮ್ಮನಹೊಸಕೋಟೆ ಯಲ್ಲಿ ಶ್ರೀ ಕೆಂಚಾಂಬದೇವಿಯಾಗಿ ನೆಲೆಸಿದಳೆಂದೂ, ಚಾಮುಂಡಿ, ವಾರಾಹಿ ಮತ್ತು ಇಂದ್ರಾಣಿಯರು ನಗರದ ಮಧ್ಯದಲ್ಲಿರುವ ದೇವಿಗೆರೆಯಲ್ಲಿ ನೆಲೆಸಿದರೆಂದು, ಉಳಿದ ವೈಷ್ಣವಿ, ಕೌಮಾರಿ, ಮಹೇಶ್ವರಿಯರು ಹಾಸನಾಂಬೆ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರೆಂದು ಪ್ರತೀತಿ ಇದೆ. ಹಾಸನಾಂಬೆ ಗ್ರಾಮ ದೇವತೆ ಕುರಿತಂತೆ ಜಾನಪದರು.

ಈಗಲೂ ಈ ಕೆರೆಯೊಳಗೆ ಮೂರು ದೇವಾಲಯಗಳಿವೆ ಎಂಬುದು ಪ್ರತೀತಿ. ದೇವತೆಗಳ ನೆಲವೀಡಾದ್ದರಿಂದ ಹಾಗೂ ಸಪ್ತ ಮಾತೃಕೆಯರು ಇಲ್ಲಿ ಜಲ ಕ್ರೀಡೆಯಾಡಲು ಬರುತ್ತಿದ್ದುದ್ದರಿಂದ ಈ ಕೆರೆಯನ್ನು ದೇವಿಯರ ಕೆರೆ ಎಂಬುದಾಗಿ ಕರೆದು ಆಡು ಮಾತಿನಲ್ಲಿ ದೇವಿಗೆರೆಯಾಗಿದೆಯೆಂದು ಪ್ರತೀತಿ. ವಾಸ್ತವವಾಗಿ ಇದೊಂದು ದೊಡ್ಡ ಕಲ್ಯಾಣಿಯಾಗಿದೆ. ಇದಕ್ಕೆ ಸಪ್ತಮಾತೃಕೆಯರ ಕಲ್ಯಾಣಿ ಎಂದು ಸಹ ಹೆಸರಿದೆ. ಸುತ್ತಲೂ ಕಡಿದಾದ ಭಾಗವಾಗಿದ್ದೂ ಒಂದು ಕಡೆಯಿಂದ ಮಾತ್ರ ಮೆಟ್ಟಿಲುಗಳಿವೆ. ಕೊಳದ ಮಧ್ಯಭಾಗದಲ್ಲಿ ನಾಲ್ಕು ತಲೆಯ ಸಿಂಹವಿರುವ ಒಂದು ಕಂಬವಿದೆ. ಇದು ನೋಡಲು ಅಶೋಕ ಸ್ತಂಭದಂತೆ ಕಾಣುತ್ತದೆ. 12ನೇ ಶತಮಾನದಲ್ಲಿ ಕೃಷ್ಣಪ್ಪನಾಯಕನೇ ಈ ಕೊಳವನ್ನು ಕಟ್ಟಿಸಿದನೆಂದು ದಾಖಲೆ ಹೇಳುತ್ತದೆ. ಹೊಳೆನರಸೀಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ

Facebook Comments