“ಪೂಜೆ ಮಾಡಿಸ್ಕೊಂಡ ಬಂದಿದೀನಿ, ಡಿಕೆಶಿಗೆ ಜಾಮೀನು ಸಿಗೋದು ಪಕ್ಕಾ” : ಎಚ್‌ಡಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.25-ಬಿಜೆಪಿ ವಿರೋಧಿಸುವವರ ವಿರುದ್ಧ ನಿರಂತರವಾಗಿ ಸೇಡಿನ ರಾಜಕಾರಣ ಮಾಡಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣ ಹೊಸತೇನಲ್ಲ. ಕಳೆದ ಐದು ವರ್ಷಗಳಿಂದ ಬಿಜೆಪಿ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ಎಂಬುದನ್ನು ನಾನು ಹೇಳುವ ಅಗತ್ಯವಿಲ್ಲ. ಅದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರು.

ಅಧಿಕಾರ ಎಂಬುದು ಯಾರಿಗೂ ಶಾಶ್ವತವಲ್ಲ. ಇದನ್ನು ಅಧಿಕಾರದಲ್ಲಿರುವವರು ಮರೆಯಬಾರದು ಎಂದು ಬಿಜೆಪಿ ನಾಯಕರನ್ನುದ್ದೇಶಿಸಿ ಮಾತನಾಡಿದರು.ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ಕಾಲಾವಕಾಶ ಸಿಗಲಿಲ್ಲ.

ಅವರನ್ನು ಭೇಟಿಯಾಗುವ ಉದ್ದೇಶದಿಂದ ದೆಹಲಿಗೆ ಬಂದಿದ್ದೆ. ಆದರೆ ಎರಡು ದಿನ ಮೊದಲೇ ಅನುಮತಿ ಪಡೆಯಬೇಕೆಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದರು. ಹೀಗಾಗಿ ಶಿವಕುಮಾರ್ ಭೇಟಿ ಸಾಧ್ಯವಾಗಲಿಲ್ಲ ಎಂದರು. ಒಳ್ಳೆಯ ತೀರ್ಥಕ್ಷೇತ್ರದಲ್ಲಿ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ. ದೇವರ ದಯೆಯಿಂದ ಡಿ.ಕೆ.ಶಿವಕುಮಾರ್ ಇಂದು ಜಾಮೀನಿನ ಮೇಲೆ ಬಿಡುಗಡೆಯಾಗುವ ವಿಶ್ವಾಸ ಹೊಂದಿರುವುದಾಗಿ ಹೇಳಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ದೇವೇಗೌಡರು ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ತಮ್ಮ ಸಹೋದರ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ಬಂದಿದ್ದರು. ಆದರೆ ಕಾಲಾವಕಾಶ ಸಿಗಲಿಲ್ಲ ಎಂದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಫೋನ್ ಮೂಲಕ ಮಾತನಾಡಿದ್ದಾರೆ. ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ತೀರ್ಪು ಪ್ರಕಟವಾಗುವ ಸಾಧ್ಯತೆ ಇದ್ದು,

ಡಿ.ಕೆ.ಶಿವಕುಮಾರ್ ಅವರ ಬಿಡುಗಡೆಯಾಗುವ ವಿಶ್ವಾಸದಲ್ಲಿದ್ದೇವೆ ಎಂದು ಸುರೇಶ್ ಹೇಳಿದರು. ಇದಕ್ಕೂ ಮುನ್ನ ದೇವೇಗೌಡರನ್ನು ಭೇಟಿಯಾಗಿದ್ದ ಸುರೇಶ್ ಕಾನೂನು ಹೋರಾಟಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದರು.

Facebook Comments