ಸರ್ಕಾರವನ್ನು ತೆಗೆಯಲು ಅಲ್ಲ, ರಾಜ್ಯದ ಹಿತ ಕಾಪಾಡಲು ಹೋರಾಟ : ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.10-ನಾಡಿನ ಜನತೆಗೆ ಆಗಿರುವ ಅನಿವಾರ್ಯದ ವಿರುದ್ಧ ಹೋರಾಟ ಮಾಡಲಾಗುತ್ತಿದೆಯೇ ಹೊರತು ಸರ್ಕಾರವನ್ನು ತೆಗೆಯುವ ಉದ್ದೇಶದಿಂದ ಅಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಪರಿಹಾರ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ತಳೆದಿವೆ ಎಂದು ಆರೋಪಿಸಿ ಫ್ರೀಡಂಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಜೆಡಿಎಸ್ ಪಕ್ಷ ಇರುವುದು ಕುಟುಂಬಕ್ಕಾಗಿ ಅಲ್ಲ. ರಾಜ್ಯದ ಹಿತ ಕಾಪಾಡಲು ಈ ದೇವೇಗೌಡರ ಕೊನೆಯುಸಿರು ಇರುವವರೆಗೂ ಹೋರಾಟ ನಿಲ್ಲುವುದಿಲ್ಲ,ಯಾವುದೇ ಕಾರಣಕ್ಕೂ ರಾಜೀ ಮಾಡಿಕೊಳ್ಳವುದಿಲ್ಲ. ದೇವೇಗೌಡರ ನಂತರವೂ ಈ ಪಕ್ಷ ನಾಡಿಗಾಗಿ ಉಳಿಯಬೇಕು ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ಅವಾಚ್ಯ ಶಬ್ದ ಬಳಸುವುದಿಲ್ಲ ಎಂದ ಅವರು, ಅಪ್ಪ ಮಕ್ಕಳನ್ನು ಮುಗಿಸುವುದೇ ತಮ್ಮ ಗುರಿ ಎಂದಿದ್ದಾರೆ. ಮುಗಿಸಲು ಯಾರಿಂದಲೂ ಆಗುವುದಿಲ್ಲ. ಉಳಿಸುವುದು, ಬೆಳೆಸುವುದು ನಾಡಿನ ನಾಡಿನ ಮಹಾಜನತೆ ಕೈಯಲ್ಲಿದೆ. ಕಳೆದ ಆರು ವರ್ಷಗಳಿಂದ ದೇಶದ ಆಡಳಿತ ನಡೆಸುತ್ತಿರುವ ಬಿಜೆಪಿ ರೈತರಿಗೆ ಏನು ಕೊಟ್ಟಿದೆ ಎಂದು ಪ್ರಶ್ನಿಸಿದರು.

ತಾವು ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿದ್ದರೂ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಆದರೂ ಜಾತಿ ಬಣ್ಣ ಹಚ್ಚಲಾಗುತ್ತದೆ. ಜನತೆಗೆ ಆಗುವ ಅನ್ಯಾಯದ ವಿರುದ್ಧ ನಿರಂತರವಾಗಿ ಹೋರಾಟ ಮಾಡುವುದಾಗಿ ಹೇಳಿದರು.  ಹಿಂದಿನ ಸರ್ಕಾರ ಮಾಡಿದ ಮನವಿಗೆ ಕೇಂದ್ರ ಸರ್ಕಾರ 1200 ಕೋಟಿ ರೂ. ಕೊಟ್ಟಿದ್ದೆಯೋ ಅಥವಾ ಈ ಸರ್ಕಾರ ಮಾಡಿದ ಮನವಿಗೆ ಕೊಟ್ಟಿದ್ದೆಯೋ ಗೊತ್ತಿಲ್ಲ.ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷವಿದ್ದರೂ ಸರ್ಕಾರ ನೆರೆಪೀಡಿತ ಜನರ ವಿಚಾರದಲ್ಲಿ ನಡೆದುಕೊಂಡ ರೀತಿ ನೋವು ತಂದಿದೆ. ಹೀಗಾಗಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಯಿತು ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತವಿದ್ದರೆ ಬಂಗಾರವಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡೂ ಕಡೆ ಬಿಜೆಪಿ ಸರ್ಕಾರವಿದ್ದು ರಾಜ್ಯದಲ್ಲಿ ಬಂಗಾರದ ಬದಲು ಕಬ್ಬಿಣ ಆಗಿದೆ ಎಂದು ವ್ಯಂಗ್ಯವಾಡಿದರು. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದಾಗ ನೆರೆ ಪರಿಸ್ಥಿತಿ ಉಂಟಾದಾಗ ಪ್ರಧಾನಿಯವರು  ರವಾಣಿಯಲ್ಲಿ ಮಾತನಾಡುತ್ತಾರೆ. ಆದರೆ ರಾಜ್ಯದ ಮುಖ್ಯಮಂತ್ರಿಗೆ ಪ್ರಧಾನಿ ಸಂದರ್ಶನವನ್ನೇ ಕೊಟ್ಟಿಲ್ಲ ಎಂದು ಸೂಚಿಸಿದರು.

ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಮಾತನಾಡಿ, ರಾಜ್ಯದ ಅರ್ಧ ಭಾಗ ನೆರೆಪೀಡಿತವಾಗಿದ್ದರೆ, ಮತ್ತರ್ಧ ಭಾಗ ಬರಪೀಡಿತವಾಗಿದೆ. ಆದರೂ ರಾಜ್ಯ ಸರ್ಕಾರ ಜನರಿಗೆ ನೋವಿಗೆ ಸ್ಪಂದಿಸುವ ಬದಲು ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ ಎಂದರು. ಜೆಡಿಎಸ್‍ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ಮಾತನಾಡಿ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪುಲ್ವಾಮ, ಬಾಲ್‍ಕೋಟ್ ಹೆಸರು ಹೇಳಿ ಮತಯಾಚನೆ ಮಾಡಲಾಯಿತು. ಈಗ ನೆರೆಯಿಂದ ರಾಜ್ಯದ ಜನರು ಸಂಕಷ್ಟಕ್ಕೀಡಾಗಿದ್ದಾರೆ? ಪರಿಹಾರ ಕೊಡದೆ ಎಲ್ಲಿದ್ದೀರಿ ಎಂದು ಪ್ರಶ್ನಿಸಿದರು.

Facebook Comments