ನೆರೆ ಸಂತ್ರಸ್ತರಿಗೆ ಸ್ಪಂದಿಸದ ಸರ್ಕಾರ : ದೇವೇಗೌಡರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.10- ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಬಿಜೆಪಿ ಸರ್ಕಾರ ರದ್ದು ಮಾಡಿರುವುದು ಹಾಗೂ ನೆರೆ ಸಂತ್ರಸ್ತರ ಪರಿಹಾರ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿರುವುದನ್ನು ಖಂಡಿಸಿ ನಮ್ಮ ಪಕ್ಷದಿಂದ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.

ಜೆಪಿಭವನದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಕಡಿತ ಮಾಡಿರುವುದು ಹೇಯವಾದ ಕೃತ್ಯ.

ಹೀಗಾಗಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 35 ಸಾವಿರ ಕೋಟಿ ರೂ. ಪರಿಹಾರ ಕೇಳಿದ್ದರು. ಆದರೆ 1200 ಕೋಟಿ ಮಾತ್ರ ಕೇಂದ್ರ ಬಿಡುಗಡೆ ಮಾಡಿದೆ. ಇದು ನೆರೆ ಪರಿಹಾರ ಕಾರ್ಯಕ್ಕೆ ಸಾಲುವುದಿಲ್ಲ. ಹಿಂದೆಂದೂ ಕಾಣದಂತಹ ಪ್ರವಾಹ ಉಂಟಾಗಿದೆ ಎಂದರು.

ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಹೇಯಕೃತ್ಯ. ಇದನ್ನು ನೋಡಿದರೆ ರಾಜ್ಯಕ್ಕೆ ಏನು ಕಾದಿದೆಯೋ ಎಂಬ ಆತಂಕ ಕಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಈ ರೀತಿಯ ನಡವಳಿಕೆ ಸರಿಯಲ್ಲ ಎಂದರು.

ಮೈತ್ರಿ ಸರ್ಕಾರ ರಚನೆ ಮಾಡಿದ್ದೇ ದೊಡ್ಡ ಹೊಡೆತ ಎಂದು ಕಾಂಗ್ರೆಸ್ ಹೇಳಿದೆ. ಹಾಗಾಗಿ ನಾವು ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.  ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಒಡೆತನದ ಸಂಸ್ಥೆಗಳ ಮೇಲಿನ ಐಟಿ ದಾಳಿಯನ್ನು ಗೌಡರು ಖಂಡಿಸಿದರು.

Facebook Comments