ನಿಷ್ಠಾವಂತ ಕಾರ್ಯಕರ್ತರೇ ಜೆಡಿಎಸ್ಗೆ ಆಧಾರ ಸ್ಥಂಭ : ದೇವೇಗೌಡರು
ಕೆಆರ್ ಪೇಟೆ, ನ.30- ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಆಧಾರಸ್ತಂಭವಾಗಿದ್ದಾರೆ. ಬೇರೆ ಪಕ್ಷಗಳ ಯಾವುದೇ ಆಮಿಷಕ್ಕೆ ಒಳಗಗಾಗದೇ ಇರುವ ನಿಷ್ಠಾವಂತ ಕಾರ್ಯಕರ್ತರ ಪರಿಶ್ರಮದಿಂದ ಪಕ್ಷ ರಾಜ್ಯದಲ್ಲಿ ಇನ್ನೂ ಗಟ್ಟಿಯಾಗಿ ಉಳಿದಿದೆ. ಪಕ್ಷಕ್ಕೆ ದ್ರೋಹ ಮಾಡಿದ್ದಲ್ಲದೆ, ನನ್ನ ಕುಟುಂಬವನ್ನು ಟೀಕಿಸಿದ ನಾರಾಯಣಗೌಡರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೈಮುಗಿದು ಮನವಿ ಮಾಡಿದರು.
ಬಿ.ಎಲ್.ದೇವರಾಜು ಹಾಗೂ ಕೃಷ್ಣ ಅವರು ಜೊತೆಯಾಗಿ ರಾಜಕಾರಣ ಮಾಡಿದವರು. ನನ್ನ ಕೊನೆಯ ಉಸಿರಿರುವವರೆಗೂ ರೈತರಿಗಾಗಿ, ಕಾರ್ಯಕರ್ತರ ರಕ್ಷಣೆಗಾಗಿ ಸಮಯವನ್ನು ಮೀಸಲಿಡುತ್ತೇನೆ ಹಾಗಾಗಿ ಸರಳ ಮೃದು ಸ್ವಭಾವದ ಪರಿಶುದ್ದ ರಾಜಕಾರಣಿ ಬಿ.ಎಲ್.ದೇವರಾಜು ಅವರನ್ನು ಈ ಉಪಚುನಾವಣೆಯಲ್ಲಿ ಗೆಲ್ಲಿಸಿ ನನಗೆ ಶಕ್ತಿ ತುಂಬಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಕೆ.ಆರ್.ಪೇಟೆ ತಾಲೂಕು ಜೆಡಿಎಸ್ ಪಕ್ಷದ ಭದ್ರಕೋಟೆ ಎಂದರೆ ಅದನ್ನು ನಾನು ಕಟ್ಟಿದ್ದಲ್ಲ, ನೀವು ಜಾತ್ಯಾತೀತವಾಗಿ ಕಟ್ಟಿ ಬೆಳೆಸಿದ್ದೀರಿ. ಕಳೆದ 30-40 ವರ್ಷಗಳಿಂದಲೂ ನಾನು ಕಾರ್ಯಕರ್ತರನ್ನು ಚೆನ್ನಾಗಿ ಬಲ್ಲೆ. ಈ ಇಳಿ ವಯಸ್ಸಿನಲ್ಲಿ ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಮನಸ್ಸಿನಲ್ಲಿ ಏನಾದರೂ ಇರಲಿ. ಅದರ ಬಗೆಗೆ ಆ ಮೇಲೆ ಚರ್ಚೆ ಮಾಡೋಣ. ದಯವಿಟ್ಟು ದೇವರಾಜು ಹಾಗೂ ಈ ನಿಮ್ಮ ದೇವೇಗೌಡನನ್ನು ಕೈ ಬಿಡಬೇಡಿ ಎಂದು ದೇವೇಗೌಡರು ಕೋರಿದರು.
ಇದುವರೆಗೆ ನನ್ನ ಸುದೀರ್ಘ ರಾಜಕಾರಣದಲ್ಲಿ ನಾನು ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬಂತೆ ಬದುಕುತ್ತಿದ್ದೇನೆ. ಸ್ಥಳೀಯ ಸಂಸ್ಥೆಗಳಲ್ಲಿ ಅಹಿಂದ ವರ್ಗಗಳಿಗೆ ಮೀಸಲಾತಿ ಜÁರಿಗೆ ತಂದವನು ಈ ದೇವೇಗೌಡ ಎಂಬುದನ್ನು ಮರೆಯಬಾರದು. ನಾನು ಪ್ರಧಾನಿಯಾಗಿದ್ದಾಗ ಇಡೀ ದೇಶಕ್ಕೆ ಪಡಿತರ ಅಕ್ಕಿ ಕೊಡುವ ಯೋಜನೆ ಜಾರಿಗೆ ತಂದಿದ್ದೇನೆ. ಕುಮಾರಸ್ವಾಮಿ-ದೇವೇಗೌಡರನ್ನು ಸೋಲಿಸಿದರೆ ಸಾಕು ಎಂಬ ವಿರೋಧಿಗಳಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಲು ಬಿ.ಎಲ್.ದೇವರಾಜು ಅವರನ್ನು ಗೆಲ್ಲಿಸಬೇಕು ಎಂದು ದೇವೇಗೌಡ ಕಾರ್ರ್ಯಕರ್ತರಿಗೆ ಕರೆ ನೀಡಿದರು.
ಇನ್ನೂ ಈ ದೇವೇಗೌಡನಿಗೆ ರಾಜ್ಯದ ರೈತರ ಪರ ಹೋರಾಟ ಮಾಡುವ ಕೆಚ್ಚಿದೆ. ಇನ್ನೂ ಶಕ್ತಿ ಇದೆ. ಹೋರಾಟ ಮಾಡ್ತೀನಿ. ದೇವರಾಜ್ಗೆ ಕೊಡುವ ಒಂದೊಂದು ಓಟೂ ತುಮಕೂರಿನಲ್ಲಿ ಸೋತ ದೇವೆಗೌಡನಿಗೆ ಕೊಡುವ ಓಟು. ಕೇವಲ ಬಾಯಿಮಾತಿನಲ್ಲಿ ಪ್ರೀತಿ ತೋರಿಸಬೇಡಿ. ಚುನಾವಣೆ ಮುಗಿಯುವವರೆಗೂ ನನ್ನ ಕಾರ್ಯಕರ್ತರು ನಿದ್ರೆ ಮಾಡಬೇಡಿ.
ಬಿಜೆಪಿ ಕ್ಷೇತ್ರದಲ್ಲಿ ಏನೇನು ಮಾಡ್ತಾಯಿದೆ ಎಂಬುದೆಲ್ಲ ಗೊತ್ತು. ಆದರೆ ನಾನೊಬ್ಬ ಮಾಜಿ ಪ್ರಧಾನಿಯಾಗಿ ಇಂಯಹ ವಿಚಾರಗಳನ್ನು ಮಾತನಾಡಲು ಹೋಗುವುದಿಲ್ಲ. ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ಎಲ್ಲಿಗೆ ತಂದು ನಿಲ್ಲಿಸಿದ್ದಾರೆ ಎಂದು ಜನ ನೋಡಿದ್ದಾರೆ. ನೋಡ್ತಾನೂ ಇದ್ದಾರೆ. ಪ್ರಾದೇಶಿಕವಾದ ನಿಮ್ಮ ಜೆಡಿಎಸ್ ಅನ್ನು ಸಾಯಿಸಬೇಡಿ ಎಂದು ದೇವೇಗೌಡ ಜನರಿಗೆ ಕೈ ಮುಗಿದು ವಿನಂತಿ ಮಾಡಿದರು.
ಚುನಾವಣಾ ಪ್ರಚಾರ ಯಾತ್ರೆಯಲ್ಲಿ ಅಭ್ಯರ್ಥಿ ಬಿ.ಎಲ್.ದೇವರಾಜು, ಜೆಡಿಎಸ್ ರಾಜ್ಯ ಅಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಶಾಸಕರಾದ ಕೆ.ಸುರೇಶಗೌಡ, ಕೆ.ಟಿ. ಶ್ರೀಕಂಠೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಜಿಪಂ ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ, ಜಿಪಂ ಸದಸ್ಯರಾದ ಹೆಚ್.ಟಿ.ಮಂಜು, ಪ್ರೇಮಕುಮಾರಿ, ಹಿರಿಯ ಜೆಡಿಎಸ್ ಮುಖಂಡರಾದ ಬಸ್ ಕೃಷ್ಣೇಗೌಡ, ಎ.ಆರ್.ರಘು, ಎ.ಪಿ.ಎಂ.ಸಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್,
ತಾಪಂ ಸದಸ್ಯ ಮಲ್ಲೇನಹಳ್ಳಿ ಮೋಹನ್, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಬಿ.ನಾಗೇಶ್, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಬಲದೇವ್, ವಿಠಲಾಪುರ ಸುಬ್ಬೇಗೌಡ, ಬೂಕನಕೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ನಂದೀಶ್, ಕಸಬಾ ಅಧ್ಯಕ್ಷ ವಸಂತಕುಮಾರ್, ಪೂವನಹಳ್ಳಿ ರೇವಣ್ಣ, ರಂಗರಾಜು, ಹೇಳವೇಗೌಡ, ಇತರರು ಇದ್ದರು.