ಮೈತ್ರಿ ಮಾತಿಗೆ ಬ್ರೇಕ್ ಹಾಕಿದ ದೊಡ್ಡಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಡಿ.2-ರಾಜ್ಯ ವಿಧಾನಸಭೆ ಉಪಚುನಾವಣೆ ಫಲಿತಾಂಶ ಪ್ರಕಟವಾಗುವ ಡಿ.9ರ ನಂತರವೂ ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿಮಾಡಿಕೊಂಡು ಸರ್ಕಾರ ನಡೆಸಿ ನೋವು ಅನುಭವಿಸಿದ್ದೇವೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹೇಗೆ ಪತನವಾಯಿತು ಎಂಬುದು ನನಗೆ ಗೊತ್ತಿದೆ. ಈಗ ನಾವು ಯಾರ ಜೊತೆಗೂ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.ನಾವು ಪಕ್ಷ ಕಟ್ಟಿಕೊಳ್ಳುತ್ತೇವೆ ಎಂದರೆ ಸರ್ಕಾರ ಹೋಗುತ್ತಾ ಎಂದು ಪ್ರಶ್ನಿಸಿದ ಗೌಡರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನೊಂದಿಗೆ ನಾವು ಒಟ್ಟಾಗದಿದ್ದರೆ ಆಡಳಿತಾರೂಢ ಬಿಜೆಪಿ ಸರ್ಕಾರ ಹೇಗೆ ಬೀಳುತ್ತದೆ ಎಂದು ಸುದ್ದಿಗಾರರನ್ನೇ ಪ್ರಶ್ನಿಸಿದರು.

ಬಿಜೆಪಿಯಲ್ಲಿ 105 ಶಾಸಕರಿದ್ದಾರೆ. ನಾವು(ಜೆಡಿಎಸ್) ಯಾರ ಜೊತೆಯೂ ಸೇರದಿದ್ದರೆ ಸರ್ಕಾರ ಹೇಗೆ ಪತನವಾಗಲಿದೆ ಎಂದು ಪ್ರಶ್ನಿಸಿದರು.  ಬಿಜೆಪಿ ಮತ್ತು ಕಾಂಗ್ರೆಸ್‍ನ ಯಾವುದೇ ವಿಚಾರಕ್ಕೂ ಜೆಡಿಎಸ್ ಬೆಂಬಲ ನೀಡುವುದಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ನಾವು ಕುಳಿತುಕೊಳ್ಳುತ್ತೇವೆ. ಈಗಾಗಲೇ ಬೆಂಬಲ ನೀಡಿದ್ದಕ್ಕೆ ನಮಗೆ ಸಾಕಾಗಿ ಹೋಗಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಯಾಗಿ ಸರ್ಕಾರ ರಚಿಸುವ ಮೂಲಕ ಹೊಸ ಪ್ರಯೋಗ ಮಾಡಿದ್ದಾರೆ.ಐದು ವರ್ಷಗಳ ಕಾಲ ಈ ಮೈತ್ರಿ ಸರ್ಕಾರ ಸುಭದ್ರವಾಗಿ ನಡೆಯಲಿದೆಯೇ ಎಂಬುದನ್ನು ಕಾದುನೋಡಬೇಕಿದೆ ಎಂದರು.

Facebook Comments