ದೇವೇಗೌಡರು ಸಿಎಂ ಸ್ಥಾನಕ್ಕೇರಿದ ಪರ್ವಕ್ಕೆ ಇಂದಿಗೆ 25 ವರ್ಷ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಡಿ.11- ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಸ್ಥಾನಕ್ಕೇರಿ ರಾಜಕಾರಣದಲ್ಲಿ ಹೊಸ ಪರ್ವ ಆರಂಭಿಸಿದ ಆ ದಿನ ಯಾರೂ ಮರೆಯುವಂತಿಲ್ಲ. ಇಂದಿಗೆ 25 ವರ್ಷ ಕಳೆದಿದೆ. ರಾಜಕೀಯಕ್ಕೆ ದೇವೇಗೌಡರು ಪ್ರವೇಶ ಮಾಡಿದಾಗಿನಿಂದ ರಾಜ್ಯದ ಹಿತಕ್ಕಾಗಿ ದುಡಿದಿದ್ದಾರೆ. ರೈತಪರ, ಬಡವರ, ದೀನ- ದಲಿತರ ಧ್ವನಿಯಾಗಿ ಮಾಡಿರುವ ಸೇವೆ ಸ್ಮರಣೀಯವಾಗಿದೆ.

ರಾಜಕೀಯ ಕ್ಷೇತ್ರದಲ್ಲಿ ಹಲವು ಏಳು-ಬೀಳು ಕಂಡಿರುವ ಗೌಡರು ಇಂದಿಗೂ ಎದೆಗುಂದದೆ ತಮ್ಮ ಜೆಡಿಎಸ್ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ದೇವೇಗೌಡರ ಗರಡಿಯಲ್ಲಿ ಪಳಗಿದ ಹಲವು ನಾಯಕರು ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳೆದಿದ್ದಾರೆ. ನಾನಾ ರೀತಿಯ ಅಧಿಕಾರವನ್ನು ಅನುಭವಿಸುತ್ತಿದ್ದಾರೆ.

ದೇವೇಗೌಡರು ನಾಡು ಕಂಡಂತ ಹಿರಿಯ ಪ್ರಬುದ್ಧ ರಾಜಕಾರಣಿ:ನಾಡಿನ ಏಕಮೇವ ಕನ್ನಡದ ಪ್ರಧಾನಿ 1962ರಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ಇವರು ರೈತರ ಹಿತಕ್ಕಾಗಿ ಹಲವು ಹೋರಾಟ ನಡೆಸಿದ್ದಾರೆ. ನೀರಾವರಿ ವಿಚಾರದಲ್ಲೂ ಹೋರಾಟದ ಜತೆಗೆ ತಮ್ಮದೇ ಆದ ಕೊಡುಗೆಯನ್ನು ಗೌಡರು ನೀಡಿದ್ದಾರೆ.  ರಾಜ್ಯದ ಸಮಸ್ಯೆಯನ್ನು ದೆಹಲಿಯ ಪಾರ್ಲಿಮೆಂಟ್‍ನಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟ ಕೀರ್ತಿಯೂ ಗೌಡರಿಗೆ ಸಲ್ಲುತ್ತದೆ. ಪ್ರಧಾನಿಯಾಗಿ ಗೌಡರು ಕೆಲವೇ ತಿಂಗಳು ನಡೆಸಿದ ಆಡಳಿತ, ಸೇವೆ ಸ್ಮರಣೀಯವಾಗಿವೆ ಎಂದು ಬಣ್ಣಿಸಲಾಗಿದೆ.

ತಮ್ಮ 86ನೆ ವರ್ಷದಲ್ಲೂ ಗೌಡರು ರಾಜಕೀಯ ದಲ್ಲಿ ಸಕ್ರಿಯವಾಗಿ ದುಡಿಯುತ್ತಿರುವುದು ಇಂದಿನ ಯುವ ರಾಜಕೀಯ ನಾಯಕರಿಗೆ ಸ್ಪೂರ್ತಿ ಯಾಗಿದೆ. ಇಂತಹ ಗೌಡರು ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿ ನಂತರ ತಮ್ಮದೆ ಸ್ವಂತ ಪ್ರಾದೇಶಿಕ ಜಾತ್ಯಾತೀತ ಜನತಾದಳ ಪಕ್ಷವನ್ನು ಕಟ್ಟಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆಸಿದ ಪರಿ ಇಂದಿಗೂ ಐತಿಹಾಸಿಕ ಸಾಧನೆ ಎನ್ನಬಹುದು.

1953ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದರು. 1962ರ ವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದು ನಂತರ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ವಿಧಾನಸಭೆಗೆ ಚುನಾಯಿತರಾದರು.
ಮುಂದಿನ ಮೂರು ಚುನಾವಣೆಗಳಲ್ಲಿ ಸತತವಾಗಿ ಹೊಳೆನರಸೀಪುರ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದರು.

1972 ರಿಂದ 1976ರ ವರೆಗೆ ಮತ್ತು ನವೆಂಬರ್ 1976 ರಿಂದ 1977ರ ವರೆಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.  1975-76ರ ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾಗಿದ್ದ ದೇವೇಗೌಡರು ನಂತರ ಕರ್ನಾಟಕ ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಖಾತೆಗಳ ಸಚಿವರಾದರು. 1987ರಲ್ಲಿ ನೀರಾವರಿ ಖಾತೆಗೆ ಸಾಕಷ್ಟು ಹಣ ಮಂಜೂರು ಮಾಡದೆ ಇದ್ದುದರ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆನೀಡುವ ಮೂಲಕ ರೈತರ ಪರ ನಿಂತರು.

90ರ ದಶಕದಲ್ಲಿ ಸ್ವಂತ ಬಲದಿಂದ ರಾಜ್ಯದ ಚುಕ್ಕಾಣಿ ಹಿಡಿದು ಪ್ರಾದೇಶಿಕ ಪಕ್ಷದ ಛಾಪನ್ನು ರಾಜ್ಯದಲ್ಲಿ ಮೂಡಿಸಿ ಜನತಾದಳಕ್ಕೆ ರಾಜ್ಯಮಟ್ಟದಲ್ಲಿ ಅಧ್ಯಕ್ಷರಾದ ದೇವೇಗೌಡರು 1994ರಲ್ಲಿ ಕರ್ನಾಟಕ ರಾಜ್ಯದ 14ನೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಹಾಗೂ ರಾಷ್ಟ್ರೀಯ ಪಕ್ಷಗಳಿಗೆ ಚುರುಕು ಮುಟ್ಟಿಸಿದರು.

1996ರಲ್ಲೂ ಎಚ್.ಡಿ.ದೇವೇಗೌಡರು ದೇಶದ 11ನೆ ಪ್ರಧಾನಿಯಾಗಿ ಪಟ್ಟ ಅಲಂಕರಿಸುವ ಮೂಲಕ ಕನ್ನಡನಾಡಿನ ಏಕಮೇವ ಪ್ರಧಾನಿಯಾದರು. ಇದು ನಾಡಿನ ಜನತೆಗೆ ದೇವೇಗೌಡರ ಕೊಡುಗೆ ಎಂದೆ ಹೇಳಬಹುದು.

ಪ್ರಧಾನಿಯಾದಾಗ ರಾಜ್ಯಕ್ಕೆ ಹಲವು ಯೋಜನೆ ತಂದರು. ರೈಲ್ವೆ ವಿಭಾಗದಲ್ಲಿ ರಾಜ್ಯಕ್ಕೆ ದೊರೆಯ ಬೇಕಾದ ನಾನಾ ಕೊಡುಗೆ ನೀಡಿದರು. ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ, ಹಲವು ಹಿಂದುಳಿದ ವರ್ಗಗಳ ಜನರಿಗೆ ಮೀಸಲಾತಿಯಲ್ಲಿ ನ್ಯಾಯ ದೊರಕಿಸಿ ಕೊಟ್ಟರು. ಹೀಗೆ ಹಲವು ಜನಪರ ಕಾಳಜಿಯ ಕಾರ್ಯ ಮಾಡಿದ ಕೀರ್ತಿ ಗೌಡರದು.

Facebook Comments