2ನೇ ಬಾರಿ ರಾಜ್ಯಸಭೆಗೆ ದೇವೆಗೌಡರ ಪ್ರವೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.9- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಎರಡನೆ ಬಾರಿಗೆ ರಾಜ್ಯಸಭೆಯನ್ನು ಗೌಡರು ಪ್ರವೇಶಿಸಲಿದ್ದಾರೆ.

ಕಳೆದ 1996ರಲ್ಲಿ ಪ್ರಧಾನಿಯಾಗಿದ್ದಾಗ ಗೌಡರು ಮೊದಲ ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಜೂ.19ರಂದು ನಡೆಯುವ ರಾಜ್ಯಸಭೆ ಚುನಾವಣೆಗೆ ಇಂದು ತಮ್ಮ ಉಮೇದುವಾರಿಕೆಯನ್ನು ಗೌಡರು ಸಲ್ಲಿಸಿದ್ದಾರೆ.

ಬಹುತೇಕ ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳೇ ಹೆಚ್ಚಾಗಿವೆ. ಹೀಗಾಗಿ ಗೌಡರು ಎರಡನೆ ಬಾರಿಗೆ ರಾಜ್ಯಸಭೆ ಪ್ರವೇಶ ಮಾಡಿದಂತಾಗಲಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೌಡರು ಪರಾಭವಗೊಂಡಿದ್ದರು. ಆ ಸಂದರ್ಭದಲ್ಲಿ ಗೌಡರು ಸೋತಿದ್ದು ರಾಜ್ಯಕ್ಕಾದ ನಷ್ಟವೆಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನ ಮಾಡಲಾಗಿತ್ತು.

ನಾಡಿನ ಹಿತ ಕಾಪಾಡಲು ಪಕ್ಷಭೇದ ಮರೆತು ಹೋರಾಡುವ ಮನೋಭಾವ ದೇವೇಗೌಡರದ್ದು. ಹೀಗಾಗಿ ಸಂಸತ್‍ನಲ್ಲಿ ದೇವೇಗೌಡರು ಇರಬೇಕಾಗಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ರಾಜ್ಯಸಭೆಗೆ ದೇವೇಗೌಡರನ್ನು ಆಯ್ಕೆ ಮಾಡಿ ಕಳುಹಿಸುತ್ತಿರುವುದು ಸರಿಯಾದ ನಿರ್ಧಾರವಾಗಿದ್ದು, ನಾಡಿನ ಹಿತದೃಷ್ಟಿಯಿಂದ ಹೆಚ್ಚು ಅನುಕೂಲವಾಗಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚಿಸಲಾಗುತ್ತಿದೆ.

ಸುದೀರ್ಘ ರಾಜಕೀಯ ಜೀವನದಲ್ಲಿ ದೇವೇಗೌಡರು ಜನರಿಂದ ನೇರವಾಗಿ ಆಯ್ಕೆ ಬಯಸುತ್ತಿದ್ದರೇ ಹೊರತು ಹಿಂಬಾಗಿಲ ರಾಜಕಾರಣ ಮಾಡಿದವರಲ್ಲ. ಚುನಾವಣೆಯಲ್ಲಿ ಸೋಲಲಿ ಅಥವಾ ಗೆಲ್ಲಲಿ ಜನಪರ ಹೋರಾಟಕ್ಕೆ ಒತ್ತು ನೀಡುತ್ತ ಬಂದವರು. ಹೋರಾಟವನ್ನೇ ಮೈಗೂಡಿಸಿಕೊಂಡು ಜನರ, ರೈತರ ಪರವಾಗಿ ಹೋರಾಡುತ್ತಲೇ ಬಂದವರು.

ಪ್ರಧಾನಿಯಾಗಿದ್ದಾಗ ಅನಿವಾರ್ಯವಾಗಿ ರಾಜ್ಯಸಭೆಗೆ ಆಯ್ಕೆಯಾಗಬೇಕಾಗಿತ್ತು. ಈಗ ಮತ್ತೆ ರಾಷ್ಟ್ರ ನಾಯಕರ ಹಾಗೂ ಜೆಡಿಎಸ್ ಶಾಸಕರ ಒತ್ತಾಯಕ್ಕೆ ಮಣಿದು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

Facebook Comments