ರಾಜ್ಯದ ಮಹಾಜನತೆ ಪ್ರಾದೇಶಿಕ ಪಕ್ಷವನ್ನು ನಾಶ ಮಾಡಲು ಬಿಟ್ಟುಕೊಟ್ಟಿಲ್ಲ: ಹೆಚ್‌ಡಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.28-ಪ್ರಾದೇಶಿಕ ಪಕ್ಷವಾದ ನಮ್ಮ ಪಕ್ಷವನ್ನು ಸಂಪೂರ್ಣವಾಗಿ ನಾಶ ಮಾಡಲು ರಾಜ್ಯದ ಮಹಾಜನತೆ ಬಿಟ್ಟುಕೊಟ್ಟಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷವನ್ನು ಮುಗಿಸಲು ಆರೇಳು ವರ್ಷಗಳ ಹಿಂದೆಯೇ ಪ್ರಯತ್ನ ಮಾಡಿದ್ದರು.

ನಮ್ಮ ಪಕ್ಷದಲ್ಲಿದ್ದು, ಅಧಿಕಾರ ಅನುಭವಿಸಿ ಹೋದವರು ಜೆಡಿಎಸ್ ಅಸ್ಥಿತ್ವದಲ್ಲಿ ಇರುವುದಿಲ್ಲ ಎಂಬ ಹೇಳಿಕೆ ಕೊಡುತ್ತಾರೆ. ಇದರಿಂದ ಮನಸಿಗೆ ನೋವಾಗುತ್ತಿದೆ ಎಂದು ಹೇಳಿದರು. ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಒಂದು ಕಾಲದಲ್ಲಿ ದೇಶವನ್ನು ಆಳಿವೆ. ನಮ್ಮ ಪಕ್ಷದಲ್ಲಿದ್ದವರು ಈಗ ಎರಡು ರಾಷ್ಟ್ರೀಯ ಪಕ್ಷಗಳಿಗೆ ಹೋಗಿದ್ದಾರೆ.

ಅವರು ಉಪಚುನಾವಣೆಯಲ್ಲಿ ಎಷ್ಟು ಹಣ ಖರ್ಚು ಮಾಡುತ್ತಾರೆ, ಇವರು ಎಷ್ಟು ಹಣ ಖರ್ಚು ಮಾಡುತ್ತಾರೆ ಎಂಬ ಬಗ್ಗೆ ಮಾತನಾಡುವುದಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಕಾರ್ಯಕರ್ತರು ದೃಢಸಂಕಲ್ಪ ಮಾಡಿದ್ದಾರೆ. ಹೀಗಾಗಿ ಎಲ್ಲರೂ ಪ್ರಚಾರದಲ್ಲಿ ತೊಡಗಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಶಿರಾ ಕ್ಷೇತ್ರದಲ್ಲಿ ಹಣ ಹಂಚಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ದೂರು ನೀಡಿದರೂ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ.ಜನರೇ ತೀರ್ಮಾನ ಮಾಡಬೇಕು ಎಂದರು.  ರಾಜ್ಯದಲ್ಲಿ ನಿಷ್ಪಕ್ಷಪಾತ ಚುನಾವಣೆ ನಡೆಸುವುದು ಎಂದಿಗೂ ಸಾಧ್ಯವಿಲ್ಲ. ಏಕೆಂದರೆ ಆ ರೀತಿಯ ವ್ಯವಸ್ಥೆ ಇದೆ ಎಂದು ಹೇಳಿದರು. ನಾವು ಶಿರಾ ಮತ್ತು ಆರ್‍ಆರ್‍ನಗರ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಹೋರಾಟ ಮಾಡುತ್ತಿದ್ದೇವೆ. ಯಾವ ವಿರುದ್ದವೂ ಅಲ್ಲ, ಚಾಲೆಂಜ್‍ಗಾಗಿಯೂ ಅಲ್ಲ ಎಂದರು.

ವಿಧಾನಪರಿಷತ್‍ನ ಚುನಾವಣೆಯಲ್ಲಿ ಪ್ರಾಮಾಣಿಕ ಹೋರಾಟ ಮಾಡಿದ್ದೇವೆ. ಪಶ್ಚಿಮ ಪದವಿಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡಿದೆ. ಶಿರಾ ಕ್ಷೇತ್ರದಲ್ಲಿ ಮತ್ತೊಂದು ಸುತ್ತಿನ ಪ್ರಚಾರ ಮಾಡುತ್ತೇನೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ನಟ ನಿಖಿಲ್‍ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಪ್ರಚಾರದಲ್ಲಿ ತೊಡಗಿದ್ದಾರೆ. ಆರ್‍ಆರ್‍ನಗರದಲ್ಲೂ ಸಾಕಷ್ಟು ಬೆಂಬಲ ಸಿಗುತ್ತಿದೆ ಎಂದು ಹೇಳಿದರು.

ಜಾತಿ ರಾಜಕಾರಣ ಇಂದಿನದ್ದಲ್ಲ. ಬಹಳ ಹಿಂದೆಯೇ ಬಂದಿತ್ತು. ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಲಿ ಎಂದು ಅವರು ಪ್ರಶ್ನಿಸಿದ ಅವರು,ತ್ವರಿತ ನೀರಾವರಿ ಯೋಜನೆಯನ್ನು ಹಠ ಮಾಡಿ ಜಾರಿಗೊಳಿಸಿದ್ದೆ. ಬೆಂಗಳೂರಿಗರಿಗೆ ನೀರು ಕೊಟ್ಟವರ್ಯಾರು ಎಂದರು.  ಮೈತ್ರಿ ಸರ್ಕಾರ ಪತನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಬಿಟ್ಟು ಹೋದವರನ್ನು ಸಂದರ್ಶನ ಮಾಡಿ ಗೊತ್ತಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ಮಳೆ ಅನಾಹುತದ ಬಗ್ಗೆ ಪ್ರಸ್ತಾಪವಾಗುತ್ತಿದೆ. ತಾವು ಮುಖ್ಯಮಂತ್ರಿಯಾಗಿದ್ದಾಗಲೇ, ಈ ಬಗ್ಗೆ ಲಕ್ಷ್ಮಣ್ ರಾವ್ ನೇತೃತ್ವದ ಸಮಿತಿ ರಚಿಸಲಾಗಿತ್ತು. ಆ ಸಮಿತಿ ವರದಿಯಲ್ಲಿ ಕೆರೆ ಒತ್ತುವರಿಯ ಬಗ್ಗೆ ಪ್ರಸ್ತಾಪವಾಗಿದೆ. ಕಂದಾಯ ಸಚಿವರು ಹೊಸ ಕಾಯ್ದೆ ತರುತ್ತೇನೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಪಕ್ಷಗಳ ಬಗ್ಗೆ ಆರ್‍ಆರ್‍ನಗರದ ಜನತೆ ಯೋಚನೆ ಮಾಡಬೇಕು ಎಂದು ಹೇಳಿದರು.

Facebook Comments