ಸಿಂಧಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಎಚ್‍ಡಿಡಿ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.13- ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಂದು ಸಿಂಧಗಿ ವಿಧಾನ ಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ದಸರಾ ಹಬ್ಬ ಮುಗಿದ ನಂತರ ಉಪ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

ಅ.16ರಿಂದ ಮೂರು ದಿನಗಳ ಕಾಲ ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಪ್ರಚಾರದಲ್ಲಿ ಕುಮಾರಸ್ವಾಮಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಸಿಂಧಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಾಜೀಯಾ ಅಂಗಡಿ ಅವರ ಪರವಾಗಿ ದೇವೇಗೌಡರು ಸ್ಥಳಿಯ ಮುಖಂಡರೊಂದಿಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮತ ಯಾಚನೆ ಮಾಡಿದರು. ಈ ಉಪ ಚುನಾವಣೆಯನ್ನು ಜೆಡಿಎಸ್ ಗಂಭೀರವಾಗಿ ಪರಿಗಣಿಸಿದ್ದು, ತನ್ನ ಅಭ್ಯರ್ಥಿಗಳ ಗೆಲುವಿಗೆ ನಿರಂತರ ಪ್ರಯತ್ನ ಮಾಡುತ್ತಿದೆ.

ಶನಿವಾರದಿಂದ ಎರಡೂ ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಚುನಾವಣೆ ಪ್ರಚಾರದಲ್ಲಿ ಪಕ್ಷದ ಮುಖಂಡರೊಂದಿಗೆ ಪಾಲ್ಗೊಳ್ಳಲಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ಪರವಾಗಿ ಹಾಗೂ ಸಿಂಧಗಿ ಕ್ಷೇತ್ರದಲ್ಲಿ ನಾಜೀಯಾ ಅಂಗಡಿ ಪರವಾಗಿ ಮತಯಾಚಿಸಲಿದ್ದಾರೆ.

ಬಹಿರಂಗ ಸಭೆ ಸೇರಿದಂತೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಮತ ಯಾಚಿಸುವುದಲ್ಲದೆ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Facebook Comments