ಪಾಲಿಕೆ ಫಲಿತಾಂಶದಿಂದ ನಿರಾಶಾವಾದಿಗಳಾಗಿಲ್ಲ: ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.7- ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಯಾವ ನಾಯಕರೂ ತಮ್ಮನ್ನು ಸಂಪರ್ಕಿಸಿ ಮಾತನಾಡಿಲ್ಲ.

ಆದರೆ, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮೊಂದಿಗೆ ಮಾತನಾಡಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೂ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದವರನ್ನು ಸಂಪರ್ಕಿಸಿ ನಮ್ಮೊಂದಿಗೆ ಮಾತನಾಡಿರಬಹುದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೂತು ಮಾತನಾಡಿ ಏನು ತೀರ್ಮಾನ ಮಾಡುತ್ತಾರೋ ಕಾದು ನೋಡೋಣ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿರಬಹುದು. ತಮ್ಮೊಂದಿಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮೂರು ಮಹಾನಗರ ಪಾಲಿಕೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದಿಂದ ನಾವು ನಿರಾಶಾವಾದಿಗಳಾಗಿಲ್ಲ. ಒಟ್ಟಾಗಿ ಐಕ್ಯತೆಯಿಂದ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ತಿಳಿಸಿದರು. ಸೋಲು-ಗೆಲುವು, ಸಿಹಿ-ಕಹಿ ನೋಡಿದ್ದೇವೆ. ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪಕ್ಷ ಸಂಘಟನೆ ಕಡೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರು ಪೈಪೋಟಿಯಿಂದ ಪಕ್ಷದ ಸದಸ್ಯತ್ವ ನೋಂದಣಿ ಮಾಡಿಸಲು ಹುಮ್ಮಸ್ಸಿನಲ್ಲಿದ್ದಾರೆ. ಇದು ನಮ್ಮ ಹೋರಾಟಕ್ಕೆ ಒಳ್ಳೆಯ ಬೆಂಬಲ ಸಿಕ್ಕಂತಾಗಿದೆ ಎಂದರು.

ಪ್ರತಿ ಜಿಲ್ಲೆಯಲ್ಲೂ 20 ಸಾವಿರದಿಂದ 50 ಸಾವಿರದವರೆಗೆ ಸದಸ್ಯತ್ವ ನೋಂದಣಿ ಮಾಡಿಸಲಾಗುತ್ತಿದೆ ಎಂದರು. ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾಲ್ಕು ವಾರ್ಡ್‍ಗಳಲ್ಲಿ ಗೆಲ್ಲುತ್ತೇವೆ ಎಂದುಕೊಂಡಿರಲಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಲ್ಲಿಗೆ ಹೋಗಿ ಪ್ರಚಾರ ಮಾಡಿದ್ದರು. ಎಷ್ಟು ಮತಗಳಲ್ಲಿ ಸೋತಿದ್ದೇವೆ, ಎಷ್ಟು ವಾರ್ಡ್‍ಗಳಲ್ಲಿ ಎರಡನೆ ಸ್ಥಾನದಲ್ಲಿದ್ದೇವೆ ಎಂಬುದನ್ನು ಅವಲೋಕನ ಮಾಡುತ್ತೇವೆ. ಬೆಳಗಾವಿಯಲ್ಲಿ ನಮ್ಮ ಸ್ಥಿತಿ ಚೆನ್ನಾಗಿರಲಿಲ್ಲ. ಅಲ್ಲಿ ಬಿಜೆಪಿ ಸ್ವೀಪ್ ಮಾಡಿದೆ. ಕಾಂಗ್ರೆಸ್ ಬಗ್ಗೆ ಮಾತನಾಡುವುದಿಲ್ಲ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮೂರ್ನಾಲ್ಕು ಸ್ಥಾನ ನಿರೀಕ್ಷೆ ಮಾಡಿದ್ದೆವು. ಒಂದು ಸ್ಥಾನದಲ್ಲಿ ಗೆದ್ದಿದ್ದೇವೆ. ರಾಜ್ಯಾದ್ಯಂತ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಪೈಪೋಟಿ ನೀಡಿದೆ. ಕೆಲವು ಕಡೆಗಳಲ್ಲಿ ಎರಡನೆ ಸ್ಥಾನದಲ್ಲಿದ್ದೇವೆ ಎಂದು ಹೇಳಿದರು.

ಜಿಟಿಡಿ ವಿರುದ್ಧ ಕ್ರಮವಿಲ್ಲ: ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಪಕ್ಷದಿಂದ ದೂರವಿದ್ದರೂ ಡ್ಯಾಮೇಜ್ ಆಗುವ ಹೇಳಿಕೆ ಕೊಟ್ಟಿಲ್ಲ. ಸಿದ್ದರಾಮಯ್ಯ ಅವರ ಬಳಿ ತಮಗೆ ಹಾಗೂ ತಮ್ಮ ಮಗನಿಗೆ ಟಿಕೆಟ್ ಕೇಳಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಅವರ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿಲ್ಲ. ಹಾಗಾಗಿ ಕ್ರಮ ಕೈಗೊಂಡಿಲ್ಲ ಎಂದು ಗೌಡರು ಸ್ಪಷ್ಟಪಡಿಸಿದರು.
ಜಿಟಿಡಿ ಅವರೊಂದಿಗೆ ರಾಜಕೀಯವಾಗಿ ಮಾತನಾಡಿಲ್ಲ. ಇತ್ತೀಚೆಗೆ ತಿರುಪತಿಗೆ ಹೋಗಿದ್ದಾಗ ಅವರು ಸಿಕ್ಕಿದ್ದರು. ಆಗ ನಾನೇ ನೋಡಿ ಕರೆದು ತಮಾಷೆ ಮಾಡುತ್ತ ನಿಮ್ಮ ದರ್ಶನ ಇಲ್ಲಿ ಆಯ್ತಲ್ಲಪ್ಪ ಎಂದಿದ್ದೆ. ಆಗ ನಿಮ್ಮ ದರ್ಶನ ಆಗಿದ್ದು ಖುಷಿಯಾಯ್ತು ಸರ್ ಅಂತ ಜಿಟಿಡಿ ಹೇಳಿದರು ಅಷ್ಟೆ ಎಂದರು.

ಶ್ರೀನಿವಾಸಗೌಡ ವಿರುದ್ಧ ಶಿಸ್ತುಕ್ರಮ: ಶಾಸಕ ಶ್ರೀನಿವಾಸಗೌಡ ಅವರು ಕಾಂಗ್ರೆಸ್‍ನೊಂದಿಗೆ ಸೇರಿ ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿ ಮಾತನಾಡಿದ್ದು, ಅವರ ವಿರುದ್ಧ ರಾಜ್ಯಾಧ್ಯಕ್ಷರು ಕ್ರಮ ಕೈಗೊಳ್ಳುತ್ತಾರೆ. ಅವರು ಮಾತನಾಡಿರುವುದನ್ನು ಸಹಿಸಲು ಆಗುವುದಿಲ್ಲ. ಹೀಗಾಗಿ ಶಿಸ್ತುಕ್ರಮ ಅನಿವಾರ್ಯವಾಗಿ ತೆಗೆದುಕೊಳ್ಳುತ್ತಾರೆ ಎಂದು ಗೌಡರು ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಶರಣಗೌಡ, ಬೆಂಗಳೂರು ನಗರ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments