ಜಾತಿ ರಾಜಕೀಯ ಮಾಡಲ್ಲ, ರಾಜಕಾರಣ ಬಿಡಲ್ಲ : ಬಿಜೆಪಿ ವಿರುದ್ಧ ಗೌಡರ ಗುಡುಗು

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಏ.4- ನನ್ನ ಕೊನೆಯ ಉಸಿರು ಇರುವವರೆಗೂ ಸಕ್ರಿಯ ರಾಜಕೀಯದಿಂದ ದೂರವಾಗುವುದಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿ ನಡೆಯುತ್ತಿರುವ ನಡವಳಿಕೆಯಿಂದ ಸ್ಪರ್ಧಿಸಬಾರದು ಎಂದು ತೀರ್ಮಾನಿಸಿದ್ದೆ. ಹಾಸನ ಜಿಲ್ಲೆಯ ಜನರು 28 ವರ್ಷಗಳ ಕಾಲ ನಮ್ಮನ್ನು ಲೋಕಸಭೆಗೆ ಚುನಾಯಿಸಿದ್ದಾರೆ. ಕಾರ್ಯಕರ್ತರ, ಮುಖಂಡರ ಒತ್ತಡದಿಂದಾಗಿ ತುಮಕೂರಿನಲ್ಲಿ ಸ್ಪರ್ಧಿಸಬೇಕಾಯಿತು.

ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಡೆಸಿದ ಎರಡು ದಿನಗಳ ಪ್ರಚಾರದಲ್ಲಿ ಯಾರ ವಿರುದ್ಧವೂ ಮಾತನಾಡಿಲ್ಲ. ಆದರೆ, ರಾಜಕೀಯವಾಗಿ ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ರೈತಪರವಾದ ಕಾಳಜಿ ತೋರಲಿಲ್ಲ . ಬಿಜೆಪಿ ವಿರೋಧಿಸುವ ಪ್ರಾದೇಶಿಕ ಪಕ್ಷಗಳನ್ನು ಗುರಿ ಮಾಡಿಕೊಂಡು ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಂಡ್ಯದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆತ್ಮಾನಂದ ನಮಗೆ ಬೆಂಬಲ ಸೂಚಿಸಿದ್ದಾರೆ. ಹಾಗಾಗಿ ಈಗ ಅವರನ್ನೂ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದರು. ಹಾಸನಲ್ಲಿ ಐಐಟಿ ಸ್ಥಾಪನೆಗಾಗಿ ಹಲವು ಬಾರಿ ಪ್ರಧಾನಿಯವರನ್ನು ಭೇಟಿ ಮಾಡಲಾಗಿತ್ತು. ಅಲ್ಲದೆ, ಅನೇಕ ಪತ್ರ ವ್ಯವಹಾರಗಳನ್ನು ನಡೆಸಿದರೂ ಪ್ರಯೋಜನವಾಗಲಿಲ್ಲ ಎಂದರು.

ತಮ್ಮ ಹೆಸರಿನಲ್ಲಿ ಗೌಡ ಎಂದಿದ್ದರೂ ತಾವೆಂದೂ ಜಾತಿ ರಾಜಕೀಯ ಮಾಡಿಲ್ಲ. ಎಲ್ಲ ಸಮಾಜಕ್ಕೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತ ಬಂದಿರುವುದಾಗಿ ತಿಳಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚರ್ಚೆಯಾಗುತ್ತಿರುವ ವಿಚಾರಗಳ ಬಗ್ಗೆ ಗಮನ ಸೆಳೆದಾಗ ಯಾರ ಬಗ್ಗೆಯೂ ತಾವು ಲಘುವಾಗಿ ಮಾತನಾಡುವುದಿಲ್ಲ. ಜನರ ಬಳಿಗೆ ಹೋಗಿ ಮತಯಾಚಿಸಲಾಗುವುದು. ಈಗಾಗಲೇ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಅಲ್ಲಿನ ಜನರ ವಿಶ್ವಾಸ ಗಳಿಸಿರುವುದಾಗಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಹೇಳಿಕೆಗೆ ಮಂಡ್ಯದಲ್ಲೇ ಉತ್ತರ ನೀಡುವುದಾಗಿ ಹೇಳಿದರು. ತಮಗೆ ಜನ್ಮ ಕೊಟ್ಟ ಭೂಮಿ ಹಾಸನ. ಪ್ರಸಕ್ತ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಪ್ರತಿ ಹಳ್ಳಿಗೂ ಕುಡಿಯುವ ನೀರು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿರುವುದಕ್ಕೆ ನೋವಾಗಿದೆ. ಅವರ ವಿರುದ್ಧ ತಾವು ಚುನಾವಣಾ ಪ್ರಚಾರಕ್ಕೆ ಹೋಗಿರಲಿಲ್ಲ. ಸಚಿವ ಜಿ.ಟಿ.ದೇವೇಗೌಡ ಕೂಡ ಉತ್ತಮ ಕೆಲಸ ಮಾಡಿದ್ದರಿಂದ ಜನರು ಅವರ ಕೈ ಹಿಡಿದಿದ್ದಾರೆ.

ನಾವಣೆಯಲ್ಲಿ ತಾವು ಕೂಡ ಸೋಲು ಕಂಡಿರುವುದಾಗಿ ಹೇಳಿದರು.

ಆಂಧ್ರದಲ್ಲಿ ಪ್ರಚಾರ: ಏ.8ರಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಜತೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ಗೌಡರು ತಿಳಿಸಿದರು. ಆನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಜಂಟಿ ಪ್ರಚಾರ ನಡೆಸುವುದಾಗಿ ಹೇಳಿದರು.

Facebook Comments