ದೆಹಲಿಯಲ್ಲಿ ಸುದ್ದಿಘೋಷ್ಠಿ ನಡೆಸಿದ ದೇವೇಗೌಡರು ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Devegowda-2
ನವದೆಹಲಿ,ಜೂ.28-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಉಭಯ ಪಕ್ಷಗಳ ಮುಖಂಡರು ಚರ್ಚಿಸಿ ಬಗೆಹರಿಸುತ್ತಾರೆ. ಸಮ್ಮಿಶ್ರ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಇಂದಿಲ್ಲಿ ಹೇಳಿದರು.

ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರ ಹೇಳಿಕೆಯ ಬಗ್ಗೆ ಅಷ್ಟು ಮಹತ್ವ ಕೊಡುವುದು ಬೇಡ. ವ್ಯತ್ಯಾಸಗಳು ಕಂಡುಬಂದಲ್ಲಿ ಪಕ್ಷದ ಮುಖಂಡರು ನಿಭಾಯಿಸಿಕೊಂಡು ಹೋಗುತ್ತಾರೆ. ಸರ್ಕಾರದ ಸ್ಥಿರತೆಯ ಬಗ್ಗೆ ಯಾವುದೇ ಊಹಾಪೋಹ ಅಗತ್ಯವಿಲ್ಲ ಎಂದು ಹೇಳಿದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಹಲವು ಗೊಂದಲಗಳಿವೆ ಎಂಬುದು ನನ್ನ ಗಮನಕ್ಕೂ ಬಂದಿದೆ. ಯಾವ್ಯಾವ ನಾಯಕರು ಏನೇನು ಹೇಳಿಕೆಗಳನ್ನು ನೀಡಿದ್ದಾರೆ ಎಂಬುದನ್ನು ಗಮನಿಸಿದ್ದೇನೆ. ನಾನು ಪ್ರತಿಕ್ರಿಯೆ ನೀಡಿದರೆ ಬೇರೆ ಅರ್ಥ ಬರುತ್ತದೆ. ಆ ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಮಾತನಾಡದಂತೆ ಕುಮಾರಸ್ವಾಮಿ ಅವರಿಗೆ ಸಲಹೆ ಕೂಡ ಮಾಡಿದ್ದೇನೆ ಎಂದರು.

ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡಿದ ದೇವೇಗೌಡರು, ಬಿಜೆಪಿ ಪಕ್ಷ ಈಗಾಗಲೇ ಚುನಾವಣೆಗೆ ಸಜ್ಜಾಗುತ್ತಿರುವುದನ್ನು ಗಮನಿಸಿದರೆ ನವೆಂಬರ್ ಅಥವಾ ಡಿಸೆಂಬರ್‍ನಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಕಂಡುಬರುತ್ತಿದೆ. ಬಹುಶಃ ಈ ಸಂಸತ್ ಅಧಿವೇಶನ ಕೊನೆಯ ಅಧಿವೇಶನವಾಗಬಹುದು ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಒಂದೇ ಕಾರಣಕ್ಕಾಗಿ ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಮೈತ್ರಿ ಮಾಡಿಕೊಂಡಿದ್ದೇವೆ. ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುವುದು ನಮ್ಮ ಗುರಿಯಾಗಿದೆ. ಗೊಂದಲಗಳಿದ್ದರೆ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಪರಿಹರಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.

ಮಾಧ್ಯಮಗಳಲ್ಲಿ ಬಿಂಬಿತವಾಗಿರುವಂತೆ ಒಂದೆರಡು ದಿನಗಳಲ್ಲಿ ಸರ್ಕಾರ ಬಿದ್ದು ಹೋಗುವುದಿಲ್ಲ. ಕುಮಾರಸ್ವಾಮಿ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಪಕ್ಷದ ಉಸ್ತುವಾರಿ ವೇಣುಗೋಪಾಲ್ ಅವರೇ ಹೇಳಿದ್ದಾರೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿ ಬಜೆಟ್‍ನಲ್ಲಿ ಅಳವಡಿಸಲಾಗುವುದು. ಯಾವುದೇ ಏಕಪಕ್ಷೀಯ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು. ಘೋಷಣೆಯಂತೆ ರೈತರ ಸಾಲ ಮನ್ನಾ ಆಗಲಿದೆ. ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ದೇವೇಗೌಡರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚುನಾವಣೆಗೂ ಮುನ್ನ ಎರಡೂ ಪಕ್ಷಗಳು ಘೋಷಣೆ ಮಾಡಿರುವ ಕಾರ್ಯಕ್ರಮಗಳ ಸೇರ್ಪಡೆ ಮಾಡುವ ಬಗ್ಗೆ , ಹಿಂದಿನ ಸರ್ಕಾರದ ಕಾರ್ಯಕ್ರಮಗಳ ಮುಂದುವರಿಕೆ ಹಾಗೂ ಹೊಸ ಯೋಜನೆಗಳ ಪ್ರಕಟಣೆ ಕುರಿತಂತೆ ಭಾನುವಾರ ಸಭೆ ಸೇರಿ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

Facebook Comments

Sri Raghav

Admin