ಕೋವಿಡ್ ನೆಪದಲ್ಲಿ ಬೆಲೆ ಏರಿಕೆ ಮಾಡಿರುವುದು ಖಂಡನೀಯ : ಎಚ್‌ಡಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.17- ಕೋವಿಡ್ ನೆಪ ಹೇಳಿಕೊಂಡು ಬೆಲೆ ಏರಿಕೆ ಮಾಡಿರುವುದು ಖಂಡನೀಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಜೆಪಿಭವನದಲ್ಲಿಂದು ಕಾಂಗ್ರೆಸ್ ತೊರೆದ ಸುಮಾರು 24 ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಕಳೆದ ಎರಡು ವರ್ಷದಿಂದ ಪೆಟ್ರೋಲ್ ಡೀಸೆಲ್ ಬೆಲೆ ಪ್ರತಿ ದಿನ ಏರಿಕೆ, ಸರಕು ಸಾಗಾಣಿಕೆ ಖರ್ಚು ವೆಚ್ಚ ಕೂಡ ಜನ ಸಾಮಾನ್ಯರಿಗೆ ಹೊರೆಯಾಗುತ್ತಿದೆ.

ಇದೆಲ್ಲದರ ಹೊರೆಯೂ ಗ್ರಾಹಕರ ಮೇಲೆಯೇ ಬೀಳುತ್ತಿದೆ. ಕೋವಿಡ್ ವೆಚ್ಚ ಭರಿಸಲು ಈ ರೀತಿ ಮಾಡಬೇಕಾಯಿತು ಎಂದು ಕೇಂದ್ರ ಸಮರ್ಥಿಸಿಕೊಳ್ಳುತ್ತಿದೆ. ಕೊರೊನಾ ನೆಪ ಹೇಳಿಕೊಂಡು ಈ ರೀತಿ ಮಾಡೋದು ಖಂಡನೀಯ ಎಂದರು.

ಇಂದು 24 ಜನ ಮುಖಂಡರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆಯಾಗಿದ್ದಾರೆ ಎಂದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಹಿಂದು ರಾಷ್ಟ್ರ ಮಾಡುವ ಬಗ್ಗೆ ಚರ್ಚೆ ನಡೀತೀದೆ. ಒಂದು ಕಡೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ. ನಮ್ಮ ದೇಶದಲ್ಲಿ ಮುಸ್ಲಿಂರು ನೆಮ್ಮದಿಯಿಂದ ಬಾಳಲು ರಾಷ್ಟ್ರೀಯ ಪಕ್ಷಗಳು ಅವಕಾಶ ಕಲ್ಪಿಸಬೇಕು. ಈ ವಿಚಾರದ ಬಗ್ಗೆ ಅಧಿವೇಶನದಲ್ಲೂ ಮಾತನಾಡಿದ್ದೆ. ಯಾವುದೇ ಕಾರಣಕ್ಕೂ ಅಲ್ಪಸಂಖ್ಯಾತರಿರಿಗೆ ಅನ್ಯಾಯ ಆಗಬಾರದು ಎಂದಿದ್ದೆ.

ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಂ ಸಮಾಜಕ್ಕೆ ಹಲವಾರು ರಿಸರ್ವೇಷನ್ ಕೊಟ್ಟಿದ್ದೆ. ಇಬ್ಬರು ಮಂತ್ರಿಗಳನ್ನು ಮಾಡಿದ್ದೆ. ಸಿ.ಎಂ.ಇಬ್ರಾಹಿಂ ಅವರನ್ನು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿದ್ದೆ ಎಂದು ಹೇಳಿದರು. ಸೆ.30 ರಂದು 11 ಗಂಟೆಗೆ ದೊಡ್ಡದೊಂದು ಸಮಾವೇಶ ಮಾಡೋಣ. ಪಾಲಿಕೆ ವಾರ್ಡ್‍ಗಳ ಮರು ವಿಂಗಡಣೆ ಮಾಡಿ ಹಿಂದುಗಳನ್ನು ಹೆಚ್ಚು ಸೇರಿಸಿ ಮುಸ್ಲಿಂ ಕಡಿಮೆ ಮಾಡಿ ಗೆಲ್ಲಲು ಅನೇಕ ತಂತ್ರಗಳನ್ನು ಬಿಜೆಪಿ ಮಾಡಿದೆ ಎಂದು ಆರೋಪಿಸಿದರು.

ಕರ್ನಾಟಕದ ಆಡಳಿತ ಬಗ್ಗೆ ಚರ್ಚೆ ಮಾಡಲ್ಲ. ಭ್ರಷ್ಟಾಚಾರ ಎಲ್ಲೆಲ್ಲಿ ನಡೆದಿದೆ ಗೊತ್ತಿದೆ. ಬೆಲೆ ಏರಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕು ಗಂಟೆ ಚರ್ಚೆ ಮಾಡಿದರು.ನಮ್ಮ ಹೋರಾಟ ತೋರ್ಪಡಿಕೆಗೆ ಅಲ್ಲ. ವಾಜಪೇಯಿ ಪ್ರಧಾನಿಯಾಗಿದ್ದಾಗ ಸೀಮೆಎಣ್ಣೆಗೆ ಒಂದು ರೂಪಾಯಿ ಏರಿಕೆ ಆಗಿತ್ತು. ಆಗ ಸೀಮೆಎಣ್ಣೆ ಡಬ್ಬ ತಲೆ ಮೇಲೆ ಇಟ್ಟುಕೊಂಡು ಹೋರಾಟ ಮಾಡಿದ್ದೆವು.

ತಮಿಳು ನಾಡು ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಮೂರು ರೂಪಾಯಿ ಕಡಿತ ಮಾಡಿದೆ. ಇದು ಇಡೀ ದೇಶಕ್ಕೆ ಅದು ಒಂದು ಇಂಡಿಕೇಷನ್. ಅದರ ಬಗ್ಗೆ ನಾನು ಅಲ್ಲಗಳಿಯಲ್ಲ. ಆ ಮಾದರಿಯನ್ನು ಬೇರೆ ರಾಜ್ಯಗಳು ಕೂಡ ಪಾಲಿಸಬೇಕು. ರಾಜ್ಯ ಸರ್ಕಾರ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಪೆಟ್ರೋಲ್ ಹೊರೆಯನ್ನು ತಗ್ಗಿಸಬೇಕು ಎಂದು ಒತ್ತಾಯಿಸಿದರು.

ಕಲಬುರಗಿ ಮಹಾನಗರ ಪಾಲಿಕೆ ಮೈತ್ರಿ ವಿಚಾರದಲ್ಲಿ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ನಿರ್ಧಾರವನ್ನು ಉಳಿದವರು ಸ್ವಾಗತ ಮಾಡಲಿಲ್ಲ.ಇದು ದೇಶಕ್ಕೆ ಸಂಬಂಧ ಪಟ್ಟಿದ್ದಲ್ಲ. ಇದು ಸ್ಥಳೀಯ ಮಟ್ಟದಲಿ ಹೊಂದಾಣಿಕೆ ಆಗುತ್ತದೆ. ಖರ್ಗೆ ಮಾತಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹಾಗೂ ಸಿದ್ದರಾಮಯ್ಯ ಸ್ಪಂದಿಸಿಲ್ಲ. ಅವರ ಮಾತಿಗೆ ಯಾರು ಬೆಲೆ ಕೊಡಲಿಲ್ಲ.

ಕಂದಾಯ ಸಚಿವ ಅಶೋಕ್ ಒಬ್ಬರೇ ಬಂದು ಮಾತಾಡಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಜನ ಹೊಸ ಸೂಚನೆ ನೀಡಿದ್ದಾರೆ. ಕಲ್ಬುರ್ಗಿ ಪಾಲಿಕೆ ಬಗ್ಗೆ ಯಾವ ತೀರ್ಮಾನವನ್ನೂ ನಾವು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನು ಖರ್ಗೆಯವರು ತೀರ್ಮಾನ ಮಾಡ್ತಾರಾ..? ಕಳೆದ ಬಾರಿ ನಾನು ಅವರ ಮನೆ ಬಾಗಿಲಿಗೆ ಹೋಗಿಲ್ಲ. ಗುಲಾಂ ನಬಿ ಆಜಾದ್ ಸೇರಿ ಹಲವರು ಮನೆ ಬಂದರು. ನಿಮ್ಮ ಮಗನನ್ನು ಸಿಎಂ ಮಾಡಿ ಅಂದ್ರು. ನಾನು ಖರ್ಗೆಯವರನ್ನು ಸಿಎಂ ಮಾಡಿ ಅಂದಿದ್ದೆ. ಈಗ ನಮ್ಮ ಪಕ್ಷ ನಾಶ ಮಾಡುವ ಮಾತನ್ನು ಕಾಂಗ್ರೆಸ್‍ನವರು ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
2023 ಕ್ಕೆ ಇದೇ ಮುಸ್ಲೀಂ ರು ನಮ್ಮ ಪಕ್ಷ ಅಧಿಕಾರಕ್ಕೆ ತರ್ತಾರೆ.

ಅಹಿಂದ ಬಗ್ಗೆ ಜನ ಪುರಸ್ಕಾರ, ತಿರಸ್ಕಾರ ಮಾಡ್ತಾರೆ ಎಂದು ಕಾದು ನೋಡುವೆ. ನಾನು ಇದುವರೆಗೂ ಎಷ್ಟು ಜನ ಮುಸ್ಲಿಂ ಮುಖಂಡರನ್ನು ಬೆಳೆಸಿದ್ದೇನೆ. ನಾನು ಬರುವ ಮುಂಚೆ ಎಷ್ಟು ಜನ ಮುಸ್ಲಿಂ ನಾಯಕರು ಇದ್ದರು..? ನಜೀರ್ ಸಾಬ್ ಮೊದಲೇ ಬೆಳೆದಿರುವ ನಾಯಕರಾಗಿದ್ದರು. ಜಾಫರ್ ಷರೀಫ್, ಸಿಎಂ ಇಬ್ರಾಹಿಂ, ಮೆರಾಜುದ್ದೀನ್ ಪಟೇಲ್, ಸೇರಿ ಅನೇಕ ನಾಯಕರು ನನ್ನ ಜೊತೆ ಬೆಳೆದರು ಎಂದು ಹೇಳಿದರು.

Facebook Comments