ಕೌಶಿಕದ ಬಳಿ 54 ಎಕರೆ ಜಮೀನಿನಲ್ಲಿ ಮೆಗಾಡೈರಿ ಆರಂಭ : ಸಚಿವ ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜೂ.2-ಕೌಶಿಕದ ಬಳಿ 54 ಎಕರೆ ಜಮೀನಿನಲ್ಲಿ ಮೆಗಾಡೈರಿ ಪ್ರಾರಂಭಿಸಲು ಈಗಾಗಲೇ ತೀರ್ಮಾನಿಸಲಾಗಿದೆ ಎಂದ ಸಚಿವರು ಜಿಲ್ಲೆಯಿಂದ ಒಂದು ದಿನಕ್ಕೆ 5 ಲಕ್ಷ ಹಾಲಿನ ಪೆಟ್ ಬಾಟಲಿಗಳನ್ನು ತಯಾರಿಸುವಂತಹ ಯೋಜನೆ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಹಾಸನದ ಡೈರಿ ಆವರಣದಲ್ಲಿ ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿ, ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮಗಳ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಹಾಲು ದಿನಾಚರಣೆ ಮತ್ತು ಸರ್ಕಾರಿ ಕಾಲೇಜುಗಳಿಗೆ ಉಚಿತ ಕಂಪ್ಯೂಟರ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಡೀ ರಾಜ್ಯದಲ್ಲಿ ಹಾಸನ ಹಾಲು ಒಕ್ಕೂಟ ಪ್ರತಿದಿನಕ್ಕೆ 10ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿದೆ ಎಂದರು.

ಹಾಲು ಉತ್ಪಾದಕರ ಸಂಘದ ಸದಸ್ಯರುಗಳಿಗೆ ಪ್ರಾರಂಭದಲ್ಲಿ 250 ರೂಗಳನ್ನು ಪಾವತಿಸಿ ವಿಮೆ ಪ್ರಾರಂಭಿಸಿದರೆ ಆಕಸ್ಮಿಕವಾಗಿ ಮರಣ ಹೊಂದಿದರೆ ಸುಮಾರು 1 ಲಕ್ಷ ರೂ ವಿಮೆಯ ಹಣ ದೊರೆಯಲಿದೆ, ವಿಮೆ ಸೌಲಭ್ಯಕ್ಕೆ ಒಳಪಟ್ಟ ಜಾನುವಾರುಗಳು ಸಾವನ್ನಪ್ಪಿದ್ದಲ್ಲಿ ಪರಿಹಾರವಾಗಿ 50,000 ರೂಗಳನ್ನು ನೀಡುವ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ಉಚಿತ ಕಂಪ್ಯೂಟರ್ ವಿತರಣೆ: ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಸರ್ಕಾರಿ ಕಾಲೇಜಿಗೆ 10, ಹೊಳೆನರಸೀಪುರದ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ 20, ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿಗೆ 10, ಹೆತ್ತೂರಿನ ಪ್ರಥಮ ದರ್ಜೆ ಕಾಲೇಜಿಗೆ 5, ಸಕಲೇಶಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಣವಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,

ಕಡೂರಿನ ಸರ್ಕಾರಿ ಪ್ರಥಮ ದರ್ಜೇ ಕಾಲೇಜು, ಆಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಾಸನದ ಎಂ.ಜಿ.ರೋಡ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಧದ ಕೋಠಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಉದಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ತಲಾ 10 ಕಂಪ್ಯೂಟರ್‍ಗಳನ್ನು ಉಚಿತವಾಗಿ ವಿತರಿಸಲಾಯಿತು. ಒಟ್ಟಾರೆಯಾಗಿ 125 ಕಂಪ್ಯೂಟರ್‍ಗಳನ್ನು ವಿತರಿಸಲಾಯಿತು.

ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಯ್ಯ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ಕೊಡಗಿನ ನಿರ್ದೇಶಕರಾದ ಹೇಮಂತ್ ಕುಮಾರ್ ಮತ್ತಿತರರು ಹಾಜರಿದ್ದರು.

Facebook Comments