ಪೌರತ್ವ ತಿದ್ದುಪಡಿ ಕಾಯ್ದೆ ಪುನರ್ ಪರಿಶೀಲಿಸಬೇಕು : ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.26-ದೇಶದಲ್ಲಿ ಜಾರಿಗೆ ತರುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕೆಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.

ಜೆಡಿಎಸ್ ಕಚೇರಿ ಜೆ.ಪಿ.ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ 71ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ವಿರುದ್ಧದ ನಮ್ಮ ಹೋರಾಟ ನಿಲ್ಲುವುದಿಲ್ಲ. ತಾವು ಮಹಾತ್ಮಗಾಂಧೀಜಿಯವರ ಮಾರ್ಗದಲ್ಲಿ ಶಾಂತಿಯುತ ಹೋರಾಟ ಮಾಡುತ್ತೇವೆ. ಈಗಾಗಲೇ ಕೆಲವು ರಾಜ್ಯಗಳು ಸಿಎಎ ಜಾರಿ ಮಾಡದಿರಲು ನಿರ್ಧರಿಸಿವೆ.

ಜಾರಿಗೆ ತರುವುದು ಬೇಡ ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಸಿಎಎ ವಿರುದ್ಧ ದೇಶಾದ್ಯಂತ ಜನರು ಹೋರಾಟ ನಡೆಸುತ್ತಿದ್ದಾರೆ. ಕ್ರಿಯೆಗೆ ಪ್ರತಿಕ್ರಿಯೆಯೂ ಇರುತ್ತದೆ. ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರಗಳು ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆಯುಂಟು ಮಾಡಿವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹಿಂದೂ ರಾಷ್ಟ್ರ ಮಾಡುವ ಬಿಜೆಪಿ ಉದ್ದೇಶ ಈಡೇರುವುದಿಲ್ಲ.

ಈ ಹಿಂದೆ ಬಿಜೆಪಿಯ ಹಲವರು ಹಿಂದೂ ರಾಷ್ಟ್ರ ಮಾಡಲು ಪ್ರಯತ್ನಿಸಿದರು. ಅದು ಫಲ ನೀಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಅಜೆಂಡಾ ಹಿಂದೂ ರಾಷ್ಟ್ರ ಮಾಡುವುದಾಗಿದೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ವಿರುದ್ಧ ಕೊಲೆ ಸಂಚು ನಡೆದಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ, ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

Facebook Comments