ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬಂದಿದೆ : ದೇವೇಗೌಡರು ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು , ಆ.19- ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಬಂದಿದ್ದು , ಏಕ ಚಕ್ರಾಧಿಪತ್ಯ ವ್ಯವಸ್ಥೆ ಬರುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.

ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಏಕ ಚಕ್ರಾಧಿಪತ್ಯ ಅಂತ್ಯವಾಗಬೇಕು. ತಾವು ಪ್ರಧಾನಿ ಹಾಗೂ ಮುಖ್ಯಮಂತ್ರಿಯಾಗಿ ಮಾಡಿರುವ ಕಾರ್ಯದ ಬಗ್ಗೆ ಹೇಳುವ ಸ್ವಾಭಿಮಾನವಿದೆ.

ಮಹಿಳಾ ಮೀಸಲಾತಿ ತಂದದ್ದು ಕೇವಲ ಒಂದು ಸಮುದಾಯಕ್ಕಲ್ಲ. ಎಲ್ಲಾ ಸಮುದಾಯಕ್ಕೂ ಅನುಕೂಲವಾಗಬೇಕು. ದೇಶದ ರಾಜಕೀಯ ವ್ಯವಸ್ಥೆ ಹಾಳಾಗಿದೆ. ಸವಾಲಾಗಿ ಸ್ವೀಕರಿಸುವುದಾಗಿ ಹೇಳಿದರು.

ಬಿಜೆಪಿಯವರನ್ನು ಕಟ್ಟಿಕೊಂಡು ಮೇಯರ್ ಆಗಲು ಹೊರಟಿದ್ದಾರೆ. ಅಲ್ಲದೆ ಆಮಿಷಕ್ಕೆ ಒಳಗಾಗಿದ್ದಾರೆ. ಅವರಿಗೆ ಕ್ಷೇತ್ರದ ಜನತೆ ಶಿಕ್ಷೆ ನೀಡಬೇಕೆಂದು ಪರೋಕ್ಷವಾಗಿ ಮಾಜಿ ಶಾಸಕ ಗೋಪಾಲಯ್ಯ ಅವರನ್ನು ಕುರಿತು ಮಾತನಾಡಿದರು.

ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಶಾಸಕರು ಪಕ್ಷವನ್ನು ತೊರೆದಿದ್ದಲ್ಲದೆ ನಮಗೇನೂ ಮಾಡಲಿಲ್ಲ ಎಂದು ಆರೋಪ ಮಾಡಿದ್ದಾರೆ. ಶಾಸಕರು ಪಕ್ಷ ಬಿಟ್ಟರೂ ನಾವು ಪಕ್ಷ ಬಿಡುವುದಿಲ್ಲ ಎಂದು ಹಲವು ಮುಖಂಡರು ಹೇಳಿದ್ದಾರೆ.

ನಾನು ವ್ಯಕ್ತಿ ನಿಂದನೆ ಮಾಡುವುದಿಲ್ಲ. ಬಿಬಿಎಂಪಿಯ ಉಪ ಮೇಯರ್ ಆಗಿ ಗೋಪಾಲಯ್ಯ ಅವರ ಶ್ರೀಮತಿಯನ್ನು ಮಾಡಲಾಗಿತ್ತು. ಆನಂತರ ಪ್ರತಿಯೊಂದು ಕಮಿಟಿಯಲ್ಲೂ ಅವರಿದ್ದರು. ಬಿಬಿಎಂಪಿ ಬಜೆಟ್ ಕೂಡ ಮಂಡಿಸಿದ್ದರು ಎಂದರು.

ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಜನತೆ ತಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಗೋಪಾಲಯ್ಯ ಅವರ ಹಿಂದೆ ಬೇರೊಂದು ಶಕ್ತಿ ಇದೆ. ಅದನ್ನು ಹೇಳುವುದಿಲ್ಲ. ಪಕ್ಷವನ್ನು ಉಳಿಸಿಕೊಳ್ಳುವ ಶಕ್ತಿ ಇದೆ ಎಂದರು.

ಪ್ರತಿ ವಾರ ಕ್ಷೇತ್ರದ ವಾರ್ಡ್‍ಗೆ ಬಂದು ಪಕ್ಷ ಕಟ್ಟುತ್ತೇನೆ. ಉಪ ಚುನಾವಣೆ ಬರಬಹುದು, ನೇರ ಚುನಾವಣೆ ಬರಬಹುದು ಸಿದ್ಧರಾಗಬೇಕು ಎಂದು ಕರೆ ನೀಡಿದರು. ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ಮಾತನಾಡಿ, ಗೋಪಾಲಯ್ಯ ಅವರು ಪಕ್ಷಕ್ಕೆ ಹಾಗೂ ವಿದ್ಯೆ ಕಲಿಸಿದ ಗುರುವಿಗೂ ದ್ರೋಹ ಮಾಡಿದ್ದಾರೆ.

ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಮಾತನಾಡಿ, ಗೋಪಾಲಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೋಸ ಮಾಡಿಲ್ಲ. ಗೋಪಾಲಯ್ಯ ಅವರೇ ಕುಮಾರಸ್ವಾಮಿ ಅವರಿಗೆ ಮೋಸ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

Facebook Comments

Sri Raghav

Admin