ರಾಜಕೀಯ ದ್ವೇಷ ಸಾಧಿಸಲ್ಲ ಎಂದಿದ್ದ ಯಡಿಯೂರಪ್ಪ ಈಗ ಮಾಡ್ತಿರೋದೇನು..? : ಸಿಎಂ ವಿರುದ್ಧ ಹೆಚ್‍ಡಿಡಿ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಫೆ.16- ಮುಖ್ಯಮಂತ್ರಿ ಯಡಿಯೂರಪ್ಪ ಇನ್ನೂ ಮೂರು ವರ್ಷ ಅಧಿಕಾರ ನಡೆಸಲು ನಮ್ಮದು ಯಾವುದೇ ಅಭ್ಯಂತರವಿಲ್ಲ. ಆದರೆ, ರಾಜಕೀಯ ದ್ವೇಷವನ್ನು ಸಹಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಮಂಜೂರಾದ ಎಲ್ಲ ಕೆಲಸವನ್ನೂ ರದ್ದುಮಾಡಲಾಗಿದೆ. ಯಡಿಯೂರಪ್ಪನವರು ರಾಜಕೀಯ ದ್ವೇಷ ಮಾಡುವುದಿಲ್ಲ ಎಂದಿದ್ದರು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಅಧಿಕಾರಿಗಳನ್ನು ಮಾರ್ಪಾಡು ಮಾಡಿದ್ದಾರೆ ಎಂದು ಹೇಳಿದರು.

ಕುಮಾರಸ್ವಾಮಿ ಮಂಜೂರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ತಡೆ ಹಿಡಿದಿದ್ದಾರೆ. ಇದರ ವಿರುದ್ಧ ಸದನದ ಒಳಗೂ ಹೊರಗೂ ಹೋರಾಟ ಮಾಡುತ್ತೇವೆ. ಹಳೆ ರಾಜಕೀಯ ದ್ವೇಷದಿಂದ ನಮ್ಮ ಮೇಲೆ ಹಗೆತನ ಸಾಧಿಸಿದರೆ ನಾವು ಸುಮ್ಮನೆ ಕೂರಲು ಆಗುವುದಿಲ್ಲ. ಪೊಲೀಸರನ್ನು ಬಳಸಿಕೊಂಡು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ನಮ್ಮ ಪಕ್ಷದ ಜಿಪಂ ಸದಸ್ಯನಿಗೆ ಪಿಸ್ತೂಲಿಟ್ಟು ಬೆದರಿಸಲಾಗುತ್ತಿದೆ. ಇದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ನಮ್ಮ ಮುಂದೆ ಇರುವ ಗುರಿ ಒಂದೇ. ಪಕ್ಷ ಸಂಘಟನೆ ಮಾತ್ರ.
ಮೈತ್ರಿ ಸರ್ಕಾರ ಪತನವಾಗಲು ಕಾರಣ ಯಾರು ಎಂಬುದು ಜಗತ್ತಿಗೇ ಗೊತ್ತಿದೆ. 15 ಶಾಸಕರು ಬಾಂಬೆಗೆ ಹೋದರಲ್ಲ, ಅವರನ್ನು ಕೇಳಿ ಯಾರು ಕಳುಹಿಸಿದರು ಎಂದು ಹೇಳುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದರು.

ಅವರ ಮಗ ಮೃತಪಟ್ಟಾಗ ನನಗೆ ಯಾರೂ ಹೇಳಿರಲಿಲ್ಲ. ನಾನೇ ಹೋಗಿದ್ದೆ. ನಮಗೂ ಮನುಷ್ಯತ್ವ ಇದೆ. ಈ ಹಿಂದೆ ಒಟ್ಟಾಗಿ ಕೆಲಸ ಮಾಡಿದ್ದೆವು ಎಂಬ ಕಾರಣಕ್ಕೆ ಎಲ್ಲ ಮರೆತು ಕೈ ಜೋಡಿಸಿದ್ದೆವು. ಜೆಡಿಎಸ್ ಜತೆ ಹೋಗಿದ್ದಕ್ಕೆ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ ಎಂದು ಸ್ವತಃ ಅವರೇ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮತ್ತು ಗೆಲ್ಹೋಟ್ ನಮ್ಮ ಮನೆಗೆ ಬಂದಿದ್ದರು. ಕುಮಾರಸ್ವಾಮಿ ಸಿಎಂ ಮಾಡಲು ಸೋನಿಯಾಗಾಂಧಿ, ರಾಹುಲ್‍ಗಾಂಧಿ ಹೇಳಿದ್ದಾರೆ ಎಂದರು. ಆದರೆ, ನಾನು ಒಪ್ಪಿರಲಿಲ್ಲ. ನಿರಂತರವಾದ ಚರ್ಚೆ ಬಳಿಕ ನಿರ್ಧಾರ ಮಾಡಿದೆವು. ನನಗೆ ಕಾಂಗ್ರೆಸ್ ಬಗ್ಗೆ ಸಿಂಪತಿ ಇದ್ದದ್ದು ನಿಜ. ಕಾಂಗ್ರೆಸ್ ಮುಕ್ತ ಭಾರತ ಎಂಬ ಮೋದಿ ಹೇಳಿಕೆ ಒಪ್ಪಲು ಸಾಧ್ಯವಿರಲಿಲ್ಲ ಎಂದು ಹೇಳಿದರು.

ನಾನು ಕೂಡ ಎನ್‍ಆರ್‍ಸಿ, ಸಿಎಎಯನ್ನು ವಿರೋಧಿಸುತ್ತೇನೆ ಎಂದರು. ಇಲ್ಲಿಯವರೆಗೆ ಯಾವ ಮುಖ್ಯಮಂತ್ರಿ ಉತ್ತರ ಕರ್ನಾಟಕಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಬಿ.ಎಸ್.ಯಡಿಯೂರಪ್ಪ ಅವರಿಗೆ ಒತ್ತಾಯ ಮಾಡುತ್ತೇನೆ ಎಂದು ದೇವೇಗೌಡರು ತಿಳಿಸಿದರು.

ಬಹಳ ದಿನಗಳ ನಂತರ ಉತ್ತರ ಕರ್ನಾಟಕಕ್ಕೆ ಬಂದಿದ್ದೇನೆ. ನಮ್ಮ ಪಕ್ಷ ಸೋತಿರುವ ಸನ್ನಿವೇಶದಲ್ಲಿ ಬಂದಿದ್ದೇನೆ. ಮುಂದೆ ಪಕ್ಷವನ್ನು ಹೇಗೆ ಕಟ್ಟಬೇಕೆಂಬುದು ನಮ್ಮ ಮುಂದಿರುವ ಬಹುದೊಡ್ಡ ಪ್ರಶ್ನೆ. ನಾವೆಲ್ಲರೂ ಒಟ್ಟಾಗಿ ಪಕ್ಷಸಂಘಟನೆ ಮಾಡಬೇಕಿದೆ ಎಂದು ಹೇಳಿದರು.

Facebook Comments

Sri Raghav

Admin