‘ಸರ್ಕಾರ ರಚಿಸುತ್ತಿರೋ ಅಥವಾ ರಾಷ್ಟ್ರಪತಿ ಆಳ್ವಿಕೆ ಬರುತ್ತದೋ ಕಾದು ನೋಡೋಣ’ : ಎಚ್‍ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.19- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು 7ನೇ ಬಾರಿ ಪ್ರಯತ್ನ ಮಾಡುತ್ತಿದ್ದು, ಸರ್ಕಾರ ರಚನೆ ಮಾಡುತ್ತೀರೋ ಅಥವಾ ರಾಷ್ಟ್ರಪತಿ ಆಳ್ವಿಕೆ ಬರುತ್ತದೋ ಕಾದು ನೋಡೋಣ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದರು.

ವಿಶ್ವಾಸಮತಯಾಚನೆ ನಿರ್ಣಯದ ಮೇಲಿನ ಪೂರ್ವಭಾವಿ ಚರ್ಚೆ ನಡೆಸಿದ ಮುಖ್ಯಮಂತ್ರಿಯವರು ಮೈತ್ರಿ ಸರ್ಕಾರ ಬಂದಾಗಿನಿಂದ 6 ಬಾರಿ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿ ಬಿಜೆಪಿ ವಿಫಲವಾಗಿತ್ತು. ಈಗ 7ನೇ ಬಾರಿ ನಡೆಸಲಾಗುತ್ತಿದೆ. ಈ ಸರ್ಕಾರವನ್ನು ಅಸ್ಥಿರಗೊಳಿಸಲು ವಿರೋಧ ಪಕ್ಷದವರು ಅಷ್ಟೇ ಅಲ್ಲ ಕೆಲವು ಮಾಧ್ಯಮದವರು ಪ್ರೊತ್ಸಾಹ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಉತ್ತರದಾಯಿಗಳಾಗಬೇಕಾಗುತ್ತದೆ ಎಂದರು.

ಶಾಸಕರ ರಾಜೀನಾಮೆ ಹಾಗೂ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ತಮಗೆ ಆತಂಕವಿದ್ದರೆ ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ಅವರ ರಾಜೀನಾಮೆ ಕೊಟ್ಟ ದಿನವೇ ಅಮೆರಿಕದಿಂದ ಓಡಿ ಬರುತ್ತಿದೆ. ಯಾವುದೇ ರೀತಿಯ ಆತಂಕಕ್ಕೆ ಒಳಗಾಗಿಲ್ಲ. ರಾಜ್ಯಪಾಲರು ವಿಶ್ವಾಸ ಮತವನ್ನು ಸಾಬೀತುಪಡಿಸುವಂತೆ ಇಂದು ಮತ್ತೆ 2ನೇ ಪತ್ರವನ್ನು ನಮಗೆ ನೀಡಿದ್ದಾರೆ ಎಂದು ಸದನದ ಗಮನಕ್ಕೆ ತಂದರು.

ಕೇಂದ್ರ ಸಚಿವರು ನಾವು ವಾಮಮಾರ್ಗ ಅನುಸರಿಸುತ್ತಿಲ್ಲ. ನೇರ ಮಾರ್ಗ ಎಂದು ಹೇಳಿದ್ದರು. ಅವರು ಮಾಡುತ್ತಿರುವ ನೇರ ಮಾರ್ಗ ಇದೆಯೇ ಎಂದು ಪ್ರಶ್ನಿಸಿದರು.  8 ಮಂದಿ ಶಾಸಕರು ರಾಜೀನಾಮೆ ಪತ್ರ ನೀಡಿದ ದಿನವೇ ರಾಜ್ಯಪಾಲರು ಸಾಂವಿಧಾನಿಕ ಚೌಕಟ್ಟಿನಲ್ಲಿ ಎಚ್ಚರಿಕೆ ನೀಡಬೇಕಾಗಿತ್ತು. ರಾಜ್ಯಪಾಲರ ಬಗ್ಗೆ ನಮಗೆ ಅಪಾರ ಗೌರವವಿದೆ ಎಂದರು.

ವಿರೋಧ ಪಕ್ಷದ ನಾಯಕರು ಸದನದ ಹೊರಗೆ ಸರ್ಕಾರದ ವೈಫಲ್ಯ, ಬರ ಪರಿಸ್ಥಿತಿ, ವರ್ಗಾವಣೆ, ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದೇ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ ಬೆಳಕು ಚೆಲ್ಲಲಿ ಸರ್ಕಾರ ಮಾಡಿರುವ ಪಾಪದ ಕೆಲಸವಾದರೂ ಏನು? ಆಗಿರುವ ಅನಾಹುತವಾದರೂ ಏನು ಎಂಬುದರ ಬಗ್ಗೆ ಬೆಳಕು ಚೆಲ್ಲಲಿ.

ರಾಜಕೀಯ ಆಟ ನಮಗಿಂತ ಹೆಚ್ಚು ವಿಪಕ್ಷದ ನಾಯಕರು ಆಡಿದ್ದಾರೆ. ರಾಜೀನಾಮೆ ನೀಡಿದ ಶಾಸಕರು ವಿಮಾನ ನಿಲ್ದಾಣದಲ್ಲಿದ್ದಾಗ ಅವರ ಶಿಷ್ಯನನ್ನು ಮಾಧ್ಯಮದವರು ನೋಡುತ್ತಾರೆ ಎಂದು ಓಡಿಹೋದ ದೃಶ್ಯವನ್ನು ಮಾಧ್ಯಮದಲ್ಲಿ ಗಮನಿಸಿದ್ದೇನೆ ಎಂದರು.
ವಿಶ್ವಾಸ ಮತಯಾಚನೆ ನಿರ್ಣಯಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಪ್ರಸ್ತಾಪ ಮಾಡಿದ್ದು, ಸದನ ವಿಶ್ವಾಸ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದರು.

Facebook Comments