“ರೈತರ ಸಾಲಮನ್ನಾ ಮಾಡಲು ಮೈತ್ರಿ ಸರ್ಕಾರದಲ್ಲಿ ಎಲ್ಲ ಅವಮಾನ ಸಹಿಸಿಕೊಂಡ್ಡಿದೆ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.10- ರಾಜ್ಯದ ರೈತರ ಸಾಲಮನ್ನಾ ಮಾಡಲು ಮೈತ್ರಿ ಸರ್ಕಾರದ ಅವಧಿಯಲ್ಲಿ ಎಲ್ಲ ಅವಮಾನಗಳನ್ನು ಸಹಿಸಿಕೊಂಡಿದ್ದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.  ಪ್ರವಾಹ ಪೀಡಿತ ಪ್ರದೇಶಗಳಿಗೆ ನೆರವು ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಖ್ಯಮಂತ್ರಿಯಾಗಿ ಸಮ್ಮಿಶ್ರ ಸರ್ಕಾರದಲ್ಲಿ ಒಂದು ದಿನವೂ ನೆಮ್ಮದಿಯಿಂದ ಇರಲಿಲ್ಲ. ರೈತರ ಸಾಲಮನ್ನಾ ಆಗಿರುವ ಪ್ರತಿ ವಿಧಾನಸಭಾ ಕ್ಷೇತ್ರದ ಮಾಹಿತಿಯನ್ನು ಕಲೆ ಹಾಕಿ ಕೈಪಿಡಿಗಳನ್ನು ಸಿದ್ದಪಡಿಸಲಾಗಿದೆ ಎಂದರು. ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ತುಟಿಭತ್ಯೆಯನ್ನು ಒಂದು ವರ್ಷ ಮುಂದೂಡಿ 700ರಿಂದ 800 ಕೋಟಿ ರೂ.ಗಳನ್ನು ನೆರೆ ಸಂತ್ರಸ್ತರ ನೆರವಿಗೆ ಬಳಸಿ ಎಂಬ ಸಲಹೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀಡಿದರು.

ಕೇಂದ್ರ ಸರ್ಕಾರಿ ನೌಕರರಿಗೆ ಶೇ.5ರಷ್ಟು ತುಟಿಭತ್ಯೆ ಮಾಡಲಾಗಿದೆ. ಅದರಿಂದ ವಾರ್ಷಿಕ 15 ಸಾವಿರ ಕೋಟಿ ರೂ. ಹೊರೆ ಬರುತ್ತದೆ. ಅದೇ ಹಣವನ್ನು ರೈತರಿಗೆ ನೀಡಿದ್ದರೆ ಬದುಕುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ನೆರೆಪೀಡಿತ ಪ್ರದೇಶಗಳ ಜನರಿಗೆ ರಾಜ್ಯ ಸರ್ಕಾರ ಯಾವ ರೀತಿ ನೆರವು ನೀಡುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಆರಂಭಿಕವಾಗಿ 10 ಸಾವಿರ ರೂ. ನೀಡಿದ್ದರೂ ಸಮರ್ಪಕವಾಗಿಲ್ಲ. ಅದರಲ್ಲೂ ಮಧ್ಯವರ್ತಿಗಳು ಕಮೀಷನ್ ಪಡೆಯುತ್ತಿರುವ ಆರೋಪವಿದೆ. ಮನೆ ಕಳೆದುಕೊಂಡವರಿಗೆ ಒಂದು ಲಕ್ಷ ರೂ. ನೀಡಿರುವ ನಿದರ್ಶನವಿಲ್ಲ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ನನ್ನ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ರಾಜ್ಯದ ಜನರನ್ನು ಹುಚ್ಚರನ್ನಾಗಿ ಮಾಡಬೇಡಿ. ನಾವು ಎಂದೂ ಕೂಡ ಅಧಿಕಾರಕ್ಕಾಗಿ ಅಂಟಿಕೊಂಡವರಲ್ಲ ಎಂದರು.  ನ.1ರಂದು ರಾಜ್ಯೋತ್ಸವದ ದಿನದಿಂದ ರಾಜ್ಯದ 224 ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಜನರಿಗೆ ನೋವಿಗೆ ಸ್ಪಂದಿಸುವ ಕೆಲಸ ಮಾಡಬೇಕು ಅವರಲ್ಲಿ ವಿಶ್ವಾಸ ಮೂಡಿಸಿದರೆ ಮತ್ತೆ ನಾಡಿನ ಜನರು ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

Facebook Comments