ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಜನರ ಪರವಾಗಿ ನಮ್ಮ ಹೋರಾಟ : ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.10- ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಜನರ ಪರವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಣ್ಣು ತೆರೆಸಲು ಅಧಿವೇಶನ ಒಳ ಹಾಗೂ ಹೊರಗೆ ಜೆಡಿಎಸ್ ಹೋರಾಟ ನಡೆಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಜೆ.ಪಿ.ಭವನದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೂ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂಕೇತಿಕವಾಗಿ ಪ್ರತಿಭಟನೆಯನ್ನು ಮಾಡಲಾಗುತ್ತಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ನೆರೆ ಬಂದು ಎರಡು ತಿಂಗಳು ಕಳೆದರೂ ಯಾವುದೇ ಜಿಲ್ಲೆಯಲ್ಲೂ ಸರಿಯಾದ ಪರಿಹಾರ ಒದಗಿಸಿಲ್ಲ. ಆರಂಭಿಕವಾಗಿ 10 ಸಾವಿರ ನೀಡಿರುವುದನ್ನು ಬಿಟ್ಟರೆ ಎಲ್ಲಿಯೂ ಕೂಡ ಸಮರ್ಪಕವಾಗಿ ಪರಿಹಾರ ಕೊಟ್ಟಿಲ್ಲ. ಮೂರು ಸಾವಿರ ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದು, ಒಂದು ಲಕ್ಷ ಆರಂಭಿಕವಾಗಿ ನೀಡುವುದಾಗಿ ಭರವಸೆ ನೀಡಿತ್ತು. ನೆರೆ ಪೀಡಿತ ಯಾವುದೇ ಜಿಲ್ಲೆಗಳಿಗೆ ಹೋದರೆ ಈ ರೀತಿ ಪರಿಹಾರ ಕೊಟ್ಟಿಲ್ಲ.

ಪರಿಹಾರದಿಂದ ಸಂತ್ರಸ್ತರಾದವರಿಗೆ ನೆಲೆ ಕಟ್ಟಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ರಾಜ್ಯ ವಿಧಾನಸಭೆಯ ಅಧಿವೇಶನದ ನೇರ ಪ್ರಸಾರವನ್ನು ನಿರ್ಬಂಧಿಸಿರುವ ಆದೇಶವನ್ನು ವಾಪಸ್ ಪಡೆಯಬೇಕು. ರಾಜ್ಯದಲ್ಲಿ ಹಿಂದಿನಿಂದಲೂ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು ಎಂದರು. ಕೇಂದ್ರದಿಂದ ಅನ್ಯಾಯ : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ನಿತಿನ್‍ಗಡ್ಕರಿ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಈಗ ಮತ್ತೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಕನ್ನಡಿಗರಿಗೂ ಅನ್ಯಾಯವಾಗುತ್ತಿದೆ ಎಂದರು.

ನೆರೆ ಹಾವಳಿಗೆ ಕೇಂದ್ರ ಸರ್ಕಾರ ಸರಿಯಾದ ರೀತಿ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು. ತೆರಿಗೆ ಸರಿಯಾಗಿ ಪಾವತಿಸಿದವರ ಮೇಲೆ ಐಟಿ ದಾಳಿ ನಡೆಯುತ್ತಿದೆ. ಒಂದು ಪಕ್ಷ ಅಥವಾ ವಿರೋಧ ಪಕ್ಷಗಳನ್ನು ಸದೆಬಡಿಯಲು ಐಟಿ ದಾಳಿ ಮಾಡಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೇಂದ್ರ ಸರ್ಕಾರ ಇಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಖಂಡಿಸಿವುದಾಗಿ ಕುಮಾರಸ್ವಾಮಿ ಹೇಳಿದರು.

Facebook Comments