ಉಪಚುನಾವಣೆಯಲ್ಲಿ ಅನರ್ಹರನ್ನು ಸೋಲಿಸಿಯೇ ತೀರುತ್ತೇವೆ : ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಕೆಆರ್ ಪೇಟೆ, ನ.15- ಉತ್ತಮವಾಗಿ ನಡೆಯುತ್ತಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಡವಿದ ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ನಾರಾಯಣಗೌಡ ಸೇರಿದಂತೆ ಉಪ ಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳ ಅನರ್ಹ ಶಾಸಕರನ್ನು ಸೋಲಿಸುವುದೇ ಜೆಡಿಎಸ್ ಪಕ್ಷದ ಮುಖ್ಯ ಗುರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ ಅವರ ಹೊಸ ಮನೆಯ ಗೃಹ ಪ್ರವೇಶದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮೈತ್ರಿ ಸರ್ಕಾರವನ್ನು ಕೆಡವಿದ ಕೆಆರ್ ಪೇಟೆ ಕ್ಷೇತ್ರದ ನಾರಾಯಣಗೌಡರನ್ನು ಈ ಉಪ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಲು ಕ್ಷೇತ್ರಾದ್ಯಂತ ಸೈನಿಕರ ಮಾದರಿಯಲ್ಲಿ ನಮ್ಮ ಜೆಡಿಎಸ್ ಕಾರ್ಯಕರ್ತರು ಶ್ರಮಿಸಬೇಕು. ಈ ಮೂಲಕ ನಿಮ್ಮ ಕುಮಾರಣ್ಣನಿಗೆ ಮೋಸ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಕರೆ ನೀಡಿದರು.

ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶರತ್‍ಬಚ್ಚೇಗೌಡರಿಗೆ ಬೆಂಬಲ ನೀಡಲಾಗುವುದು. ಉಳಿದ ಎಲ್ಲಾ 14 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಸಲಿದೆ. ಕೆಆರ್ ಪೇಟೆ ಕ್ಷೇತ್ರಕ್ಕೆ ಪಕ್ಷದ ಹಿರಿಯ ಮುಖಂಡ ಬಿ.ಎಲ್.ದೇವರಾಜು ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಅವರ ಗೆಲುವಿಗೆ ದುಡಿಯಬೇಕು.

ದೇಶದಲ್ಲಿಯೇ ಎಲ್ಲೂ ಮಾಡದ ರೈತರ ಸಾಲವನ್ನು ಸುಮಾರು 48 ಸಾವಿರ ಕೋಟಿ ಮನ್ನಾ ಮಾಡಿ ದಾಖಲೆ ನಿರ್ಮಿಸಿದ್ದೇನೆ. ಇದರಿಂದ ರಾಜ್ಯದ ಲಕ್ಷಾಂತರ ರೈತರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಕೆ.ಆರ್.ಪೇಟೆ ತಾಲೂಕಿಗೆ ನಾನು ಕೊಟ್ಟ ಸುಮಾರು 700ಕೋಟಿ ಅನುದಾನವನ್ನು ಸರ್ಕಾರದ ದಾಖಲೆಗಳಲ್ಲಿದೆ.

ನಾನು ಕೊಟ್ಟ ಅನುದಾನವನ್ನು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟಿದ್ದಾರೆ ಎಂದು ಹೇಳಿಕೊಂಡು ತಿರುಗುತ್ತಿರುವ ನಾರಾಯಣಗೌಡ ಅವರನ್ನು ಈ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸದೇ ವಿರಮಿಸುವುದಿಲ್ಲ ಎಂದರು. ಚುನಾವಣಾ ಪ್ರಚಾರ ಸಭೆಗಳಲ್ಲಿ ನಾರಾಯಣಗೌಡ ನನ್ನ ವಿರುದ್ಧ ಮಾಡುತ್ತಿರುವ ಎಲ್ಲ ಆರೋಪಗಳಿಗೆ ಸೂಕ್ತ ದಾಖಲೆಗಳೊಂದಿಗೆ ಮತದಾರರಿಗೆ ಉತ್ತರ ನೀಡುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಸುರೇಶ್ ಗೌಡ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಸದಸ್ಯ ರಾಮದಾಸ್, ಪಕ್ಷದ ಯುವ ಮುಖಂಡ ಎ.ಆರ್.ರಘು, ಪುರಸಭಾ ಸದಸ್ಯ ಬಸ್ ಸಂತೋಷ್‍ಕುಮಾರ್, ಜೆಡಿಎಸ್ ಉಪಾಧ್ಯಕ್ಷ ಸಂಗಾಪುರ ಪುಟ್ಟಸ್ವಾಮಿಗೌಡ, ಎಪಿಎಂಸಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಪೂವನಹಳ್ಳಿ ರೇವಣ್ಣ ಮತ್ತಿತರರು ಇದ್ದರು.

Facebook Comments