ಅಭ್ಯರ್ಥಿಗಳ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡೋಣ : ಎಚ್.ಡಿ.ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.16-ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವಂತೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ.

ನಿನ್ನೆ ರಾತ್ರಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಸಲಹೆ ಮಾಡಿರುವ ಕುಮಾರಸ್ವಾಮಿ, ಡಿಸೆಂಬರ್ 10ರ ವಿಧಾನಸಭೆ ಉಪಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಬದಲಾವಣೆ ಯಾಗಬಹುದು. ರಾಜ್ಯದ ರಾಜಕೀಯ ಆಶ್ಚರ್ಯಕರ ರೀತಿಯಲ್ಲಿ ತಿರುವು ಪಡೆಯಬಹುದು. ಹೀಗಾಗಿ ಎಲ್ಲರೂ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ ಎಂದು ಹೇಳಿರುವುದಾಗಿ ಜೆಡಿಎಸ್ ಪಕ್ಷದ ಮೂಲಗಳು ತಿಳಿಸಿವೆ.

ಸದ್ಯಕ್ಕೆ ಮಧ್ಯಂತರ ಚುನಾವಣೆ ಬೇಡ. ಈ ವಿಧಾನಸಭೆ ಅವಧಿ ಪೂರ್ಣಗೊಳ್ಳುವವರೆಗೂ ಕಾಯೋಣ. ಈಗಿನಿಂದಲೇ ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಿದ್ಧತೆಯನ್ನು ಮಾಡೋಣ. ಅಲ್ಲಿಯವರೆಗೂ ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡೋಣ.

ಹಾಗೆಯೇ ಈ ಉಪಚುನಾವಣೆ ಅಗ್ನಿಪರೀಕ್ಷೆಯಾಗಿದ್ದು, ಒಗ್ಗಟ್ಟಿನಿಂದ ಎದುರಿಸಬೇಕು. ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಜೆಡಿಎಸ್ ಪ್ರಾಬಲ್ಯವನ್ನು ಮತ್ತೆ ಸಾಬೀತು ಪಡಿಸಬೇಕಿದೆ ಎಂಬ ಸಂದೇಶ ನೀಡಿದ್ದಾರೆ. ಪ್ರಸಕ್ತ ಉಪಚುನಾವಣೆಯಲ್ಲಿ ಕಾಂಗ್ರೆಸ್‍ನಲ್ಲಿ ಆಂತರಿಕ ಭಿನ್ನಮತವಿದ್ದು, ಹೆಚ್ಚು ಗೊಂದಲವಿದೆ. ಇದರಿಂದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಾನ ಅಂತರ ಕಾಯ್ದುಕೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ.

ಹಳೆಯ ಬೇಸರವನ್ನು ಮರೆತು ಎಲ್ಲರೂ ಪಕ್ಷ ಸಂಘಟನೆಯತ್ತ ಗಮನಹರಿಸೋಣ. ಪ್ರತಿಯೊಬ್ಬರಿಗೂ ಉಪಚುನಾವಣೆಯ ಜವಾಬ್ದಾರಿ ಹಂಚಿಕೆ ಮಾಡಲಿದ್ದು, ವಹಿಸಿದ ಕ್ಷೇತ್ರದ ಜವಾಬ್ದಾರಿಯನ್ನು ಶಿಸ್ತುಬದ್ಧವಾಗಿ ನಿರ್ವಹಿಸಿ ಎಂಬ ಮಾರ್ಗದರ್ಶನವನ್ನು ವಿಧಾನಪರಿಷತ್ ಸದಸ್ಯರು, ವಿಧಾನಸಭಾ ಸದಸ್ಯರಿಗೆ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರೈತರ ಸಾಲ ಮನ್ನಾ, ಬಡವರ ಬಂಧು, ಋಣಮುಕ್ತ ಕಾಯ್ದೆ ಮೊದಲಾದ ಜನಪರ ಕಾರ್ಯಕ್ರಮ ಗಳನ್ನು ಜನರ ಮುಂದಿಟ್ಟು ಮತ ಯಾಚಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ತಮ್ಮ ಆಡಳಿತಾವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನತೆಯ ಮುಂದಿಟ್ಟು ಚುನಾವಣೆ ಸಂದರ್ಭದಲ್ಲಿ ಮತ ಯಾಚಿಸಬೇಕೆಂದು ಹೇಳಿದ್ದಾರೆ.

Facebook Comments