” ಬಿಜೆಪಿ ಬೆಂಬಲ ಕುರಿತಂತೆ ಉಪಚುನಾವಣೆ ಫಲಿತಾಂಶದ ವರೆಗೂ ಕಾದು ನೋಡುವೆ” : ಎಚ್‌ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ನ.21- ಉಪ ಚುನಾವಣೆ ಫಲಿತಾಂಶದ ವರೆಗೂ ಕಾದು ನೋಡುವೆ. ನಂತರದ ಬೆಳವಣಿಗೆ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಉಪಚುನಾವಣೆ ನಂತರ ಬಿಜೆಪಿ ಬೆಂಬಲ ಕುರಿತಂತೆ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.

ಉಪ ಚುನಾವಣೆಯಲ್ಲಿ 8 ಸ್ಥಾನಗಳನ್ನು ಬಿಜೆಪಿ ಗೆಲ್ಲದಿದ್ದರೆ ಸರ್ಕಾರ ಪತನವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಹಾಗಾಗಿ ನಂತರ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಅವರು ಹೇಳಿದರು. ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಜಿ.ಟಿ.ದೇವೇಗೌಡರ ಜತೆ ಮಾತನಾಡುವ ಪರಿಸ್ಥಿತಿಯಲ್ಲಿ ನಾನಿಲ್ಲ. ಅವರೇ ನಮ್ಮ ಪಕ್ಷದ ಅಭ್ಯರ್ಥಿ ನಿಂತಿದ್ದಾರೆ ಎಂದು ಅಭ್ಯರ್ಥಿಗೆ ಬೆಂಬಲಕೊಟ್ಟರೆ ಸ್ವಾಗತ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿ.ಟಿ.ದೇವೇಗೌಡರ ಬೆಂಬಲ ಪಡೆಯುವ ಕುರಿತಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಚುನಾವಣೆ ಎಂದ ಮೇಲೆ ಎಲ್ಲರೂ ಒಂದೊಂದು ತಂತ್ರ ಮಾಡುತ್ತಾರೆ, ಬೆಂಬಲ ಕೋರುತ್ತಾರೆ. ಅದೇ ರೀತಿ ಸಿದ್ದರಾಮಯ್ಯ ಕೂಡ ಜಿಡಿಟಿ ಬೆಂಬಲ ಕೇಳಿರಬಹುದು ಎಂದು ಹೇಳಿದರು.

ಬಿಜೆಪಿ ಒತ್ತಡದ ತಂತ್ರ ಅನುಸರಿಸಿ ಚುನಾವಣೆ ಗೆಲ್ಲಲು ಹೊರಟಿದೆ. ಹಿರೇಕೆರೂರಿನಲ್ಲಿ ನಮ್ಮ ಅಭ್ಯರ್ಥಿಯಾಗಿದ್ದ ಸ್ವಾಮೀಜಿಯವರನ್ನು ಚುನಾವಣಾ ಕಣದಿಂದ ಹಿಂದೆ ಸರಿಸಲು ಯಡಿಯೂರಪ್ಪ ಅವರ ಪುತ್ರ ಸಭೆ ನಡೆಸಿದ್ದಾರೆ. ಅದೇ ರೀತಿಯಲ್ಲಿ ರಂಭಾಪುರಿ ಸ್ವಾಮೀಜಿ ಮನವೊಲಿಸುತ್ತಿದ್ದಾರಂತೆ. ಇಷ್ಟು ಒತ್ತಡ ಹಾಕಿ ಚುನಾವಣೆ ಗೆಲ್ಲುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು.

ನಾನು ಸ್ವಾಮೀಜಿಗೆ ಕರೆದು ಟಿಕೆಟ್ ಕೊಟ್ಟಿಲ್ಲ. ಅವರೇ ನಿಮ್ಮ ಪಕ್ಷದಿಂದ ಟಿಕಟ್ ಕೊಡಿ ಎಂದು ಕೇಳಿದ್ದರು ಎಂದು ತಿಳಿಸಿದರು. ಉಪ ಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಪುನರುಚ್ಚರಿಸಿದರು.

Facebook Comments