ಮಾಜಿ ಸಿಎಂ ಕುಮಾರಸ್ವಾಮಿ ಮನೆಯಲ್ಲಿ ಷಷ್ಠಿಪೂರ್ತಿ ಪೂಜೆ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.13-ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜೆಪಿನಗರದ ಮನೆಯಲ್ಲಿಂದು ಷಷ್ಠಿಪೂರ್ತಿ ಪೂಜೆ ಸಂಭ್ರಮ. ಕುಮಾರಸ್ವಾಮಿ ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸಾಂಪ್ರದಾಯಿಕ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಡಿ.16ಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಇಂದು ಷಷ್ಠಿಪೂರ್ತಿ ಪೂಜೆಯನ್ನು ನೆರವೇರಿಸಲಾಯಿತು.

ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಕುಟುಂಬದ ಸದಸ್ಯರು ಪೂಜಾ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್‍ನ ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರಿಗೂ ಆಹ್ವಾನಿಸಲಾಗಿತ್ತು. ವಿಶ್ರಾಂತಿ ಪಡೆಯುತ್ತಿದ್ದ ಕುಮಾರಸ್ವಾಮಿ ಅವರು ತಮ್ಮ ಹುಟ್ಟುಹಬ್ಬಕ್ಕೂ ಮುನ್ನ ಷಷ್ಠಿಪೂಜೆಯನ್ನು ನೆರವೇರಿಸಿದ್ದಾರೆ.

ಸೋಲಿನ ಪರಾಮರ್ಶೆ: ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಬಗ್ಗೆ ಶಾಸಕರೊಂದಿಗೆ ಸಮಾಲೋಚನೆ ನಡೆಸಿದರು.
ಅನೌಪಚಾರಿಕವಾಗಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ವಿಧಾನಸಭೆ ಉಪಚುನಾವಣೆ ಸೋಲಿನ ಕಾರಣಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.

ಜೆಡಿಎಸ್ ಶಾಸಕರು ಪಕ್ಷಾಂತರ ಮಾಡಲಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಎಲ್ಲ ಶಾಸಕರು ಒಗ್ಗಟ್ಟಿನಿಂದ, ನಿಷ್ಠೆಯಿಂದ ಇರುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಉಪಚುನಾವಣೆ ಸೋಲಿನಿಂದ ಧೃತಿಗೆಡದೆ ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟಿಸಲು ಮುಂದಾಗಬೇಕು. ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಅವರು ಹೇಳಿದರು.

ಸೋಲಿನಿಂದ ಕಂಗೆಟ್ಟಿರುವ ಮುಖಂಡರು, ಕಾರ್ಯಕರ್ತರನ್ನು ಸಮಾಧಾನಪಡಿಸಿ ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಬೇಕಾದ ಕಾರ್ಯತಂತ್ರ ಹಾಗೂ ರೂಪುರೇಷೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದು ಸಲಹೆ ಮಾಡಿದ್ದಾರೆ.  ಸೋಲಿನಿಂದ ವಿಚಲಿತರಾಗುವುದು ಬೇಡ. ಜನಪರ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷವನ್ನು ಮುನ್ನೆಡೆಸುವತ್ತ ಗಮನಹರಿಸೋಣ ಎಂದು ಹೇಳಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Facebook Comments