ಮಾಜಿ ಸಿಎಂ ಕುಮಾರಸ್ವಾಮಿಗೆ ಅಭಿನಂದಿಸಿದ ವಿಕಲಚೇತನರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.14- ನಾನು 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜನತಾ ದರ್ಶನದಲ್ಲಿ ಸಹಾಯ ಕೋರಿ ಬಂದಿದ್ದ ವಿಕಲಚೇತನರ ಸಂಕಷ್ಟವನ್ನು ನೋಡಿ 600ಕ್ಕೂ ಹೆಚ್ಚು ವಿಶೇಷ ಚೇತನರನ್ನು ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಂದಾಯ ಸಹಾಯಕರನ್ನಾಗಿ ನೇಮಕಾತಿ ಮಾಡಿದ್ದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಂತರ ಬಂದ ಯಾವ ಸರ್ಕಾರಗಳೂ ಈ ವಿಶೇಷಚೇತನರ ನೇಮಕಾತಿಯನ್ನು ಖಾಯಂಗೊಳಿಸಲು ಸಾಧ್ಯವಾಗಿರಲಿಲ್ಲ. ಮತ್ತೆ ಜನವರಿ 14, 2019 ರಂದು ಇವರೆಲ್ಲರ ನೇಮಕಾತಿಯನ್ನು ಖಾಯಂಗೊಳಿಸಿ ನೇಮಕಾತಿ ಪತ್ರ ನೀಡುವ ಅವಕಾಶ ನನಗೆ ಮುಖ್ಯಮಂತ್ರಿಯಾಗಿ ಒದಗಿ ಬಂದಿತು ಎಂದು ಹೇಳಿದರು.

ಮುಖ್ಯಮಂತ್ರಿಯಾಗಿ ಮಾನವೀಯ ನೆಲೆಗಟ್ಟಿನಲ್ಲಿ ನಾನು ಮಾಡಿದ ಸಹಾಯಕ್ಕೆ ಒಂದು ವರ್ಷವಾಗಿದೆ ಎಂದು ವಿಶೇಷಚೇತನ ನೌಕರರೆಲ್ಲರೂ ಇಂದು ನನ್ನನ್ನು ಭೇಟಿ ಮಾಡಿ ತಮ್ಮ ಧನ್ಯವಾದಗಳನ್ನು ಸಲ್ಲಿಸಲು ನನ್ನ ನಿವಾಸಕ್ಕೆ ಬಂದಿದ್ದರು. ಅವರ ಮುಖದಲ್ಲಿದ್ದ ಸಂತೃಪ್ತಿಯ ನಗುವನ್ನು ನೋಡಿ ನನ್ನ ಹೃದಯ ತುಂಬಿ ಬಂದಿತು ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

Facebook Comments