ಪಕ್ಷದ ಕಾರ್ಯಕರ್ತರು ಎದೆಗುಂದ ಬೇಡಿ, ಜನಾಂದೋಲನಕ್ಕೆ ಸಜ್ಜಾಗಿ: ಎಚ್‍ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಜ.23- ಲೋಕ ಸಭೆ ಹಾಗೂ ರಾಜ್ಯ ವಿಧಾನಸಭೆ ಉಪ ಚುನಾವಣೆ ಸೋಲು ಶಾಶ್ವತವಲ. ಸೋಲಿನಿಂದ ಕಾರ್ಯಕರ್ತರು ಎದೆಗುಂದಬಾರದು. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜನವಿರೋಧಿ ಆಡಳಿತದ ವಿರುದ್ಧ ಜನಾಂದೋಲನಕ್ಕೆ ಸಜ್ಜಾಗಿ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕರೆ ನೀಡಿದರು.

ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ನಾತನಾಡಿದ ಅವರು, ಎಲ್ಲ 224 ಕ್ಷೇತ್ರಗಳಲ್ಲೂ ಮನೆ ಮನೆಗೆ ಕರಪತ್ರ ನೀಡುವ ಜನಾಂದೋಲನ ಕೈಗೊಳ್ಳಬೇಕಾಗಿದೆ. ಪ್ರತಿ ಬೂತ್‌ಗೆ 20 ಮಂದಿ ಸಕ್ರಿಯ ಕಾರ್ಯಕರ್ತರನ್ನು ಗುರುತಿಸಲು ಸಲಹೆ ಮಾಡಿದರು. ರಾಜ್ಯದ ಜನರ ಸಮಸ್ಯೆಗೆ ಸ್ಪಂಧಿಸಬೇಕಾಗಿದೆ.

ಮುಂದಿನ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಜ್ಜಾಗಿ ಕನಿಷ್ಠ 120 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿಯೊಂದಿಗೆ ಸಂಘಟನೆ ಮಾಡಬೇಕಾಗಿದೆ ಎಂದರು.
ಕಳೆದ 2006ರಲ್ಲಿ ಒಂದು ಮಂತ್ರಿ ಸ್ಥಾನಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ನಮ್ಮ ಕುಟುಂಬ ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ತಿರುಗೇಟು ನೀಡಿದರು.

ಬಿಜೆಪಿಯವರಿಗೆ ಕಾಂಗ್ರೆಸ್ ಬಗ್ಗೆ ಭಯ ಇಲ್ಲ, ಇರುವುದು ಜೆಡಿಎಸ್ ಬಗ್ಗೆ ಮಾತ್ರ ಎಂದರು. ನಾನು ಮತ್ತೆ ಮುಖ್ಯಮಂತ್ರಿ ಆಗಲು ನಿಮ್ಮ ಮುಂದೆ ಬರುವುದಿಲ್ಲ, ಅಧಿಕಾರ ದಿಂದ ದೂರ ಇರಲೂ ಸಿದ್ಧ. ನಿಮಗಾಗಿ ಮತ್ತೆ ಸವಾಲು ಸ್ವೀಕರಿಸಲು ಸಿದ್ಧ ಎಂದರು. ನಡೆಯುತ್ತಿರುವುದು ಬಿಜೆಪಿ ಸರ್ಕಾರವಲ್ಲ, ವಿಎಚ್ ಪಿ, ಆರೆಸ್ಸೆಸ್ ಕಾರ್ಯಸೂಚಿಯನ್ನು ಜಾರಿಗೆ ತರುತ್ತಿದ್ದಾರೆ.

ನನಗೆ ಜಾತಿ ಗೊತ್ತಿಲ್ಲ, ಮುಸ್ಲಿಮರ ಮತ ಗಳಿಸಲಿಕ್ಕಾಗಿ ನಾನು ಮಂಗಳೂರಿಗೆ ಹೋಗಿಲ್ಲ, ಮುಸ್ಲಿಮರನ್ನು ಕೊಂದಿರಿ ಎಂದು ನಾನು ಹೇಳಿಲ್ಲ, ಅಮಾಯಕರನ್ನು ಕೊಂದಿದ್ದೀರಿ ಎಂದು ಹೇಳಿದ್ದೆ ಎಂದರು. ಮಂಗಳೂರಿಗೂ ಕುಮಾರಸ್ವಾಮಿಗೂ ಏನು ಸಂಬಂಧ ಎಂದು ಕೇಳುತ್ತೀರಿ, ಹಾಗಿದ್ದರೆ ಕನಕಪುರಕ್ಕೂ ಪ್ರಭಾಕರ ಭಟ್ಟರಿಗೂ ಏನು ಸಂಬಂಧ ಎಂದು ಕುಮಾರಸ್ವಾಮಿ ಕುಟುಕಿದರು.

ಪ್ರಧಾನಿ ಅವರನ್ನು ಸಿಎಎ ಕಾರಣಕ್ಕೆ ಯಾವ ದೇಶವೂ ಕರೆಸಿಕೊಳ್ಳುತ್ತಿಲ್ಲ ಎಂದು ಕುಮಾರಸ್ವಾಮಿ ವ್ಯಾಖ್ಯಾನಿಸಿದರು. ಮಹಾದೇವಪುರದಲ್ಲಿ ಅಮಾಯಕರ ಗುಡಿಸಲುಗಳನ್ನು ತೆರವು ಮಾಡಲಾಗಿದೆ. ಅವರ ಬೆಂಬಲಕ್ಕೆ ನಿಲ್ಲಿ ಎಂದು ಪಕ್ಷದ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕರೆ ನೀಡಿದರು.

Facebook Comments