”ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ತರುವುದನ್ನು ರಾಜ್ಯ ಸರ್ಕಾರ ಕೈಬಿಡಬೇಕು” : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 12- ರೈತರಿಗೆ ಮಾರಕವಾಗುವ ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕರಿಗೂ ಮಾರಕವಾಗಿರುವ ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ತರುವುದನ್ನು ರಾಜ್ಯ ಸರ್ಕಾರ ಕೈ ಬಿಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಖರೀದಿಸಲು ಅವಕಾಶ ನೀಡುವಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಎಪಿಎಂಸಿಗಳು ಮುಚ್ಚುವಂತಾಗುತ್ತದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ತರಾತುರಿಯಲ್ಲಿ ಸುಗ್ರೀವಾಜ್ಞೆ ತರುತ್ತಿರುವುದೇಕೆ? ಅಷ್ಟೊಂದು ಅಗತ್ಯವಿದ್ದರೆ ವಿಧಾನಸಭೆ ಅಧಿವೇಶನ ಕರೆಯಲಿ ಎಂದು ಆಗ್ರಹಿಸಿದರು. ಉಳ್ಳವರನ್ನು ಸಂತೃಪ್ತಿಗೊಳಿಸಲು ಕೆಲವೊಂದು ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಈತಿದ್ದುಪಡಿ ತರಲಾಗುತ್ತಿದೆ. ಕೃಷಿ ಉತ್ಪನ್ನಗಳ ಬೆಲೆ ನಿಗದಿ ಮಾಡುವವರು ಯಾರು? ರೈತರನ್ನು ರಕ್ಷಣೆ ಮಾಡುವವರು ಯಾರು ಎಂದು ಪ್ರಶ್ನಿಸಿದರು.

ಕಾರ್ಮಿಕರ ಕೆಲಸದ ಅವಧಿಯನ್ನು 8ರಿಂದ 12 ಗಂಟೆಗಳ ಕಾಲ ಹೆಚ್ಚಿಸುವ ಉದ್ದೇಶದಿಂದ ಕಾರ್ಮಿಕ ಕಾಯ್ದೆಗೆ ಸುಗ್ರೀವಾಜ್ಞೆ ತರಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ನಮ್ಮ ರಾಜ್ಯದ ಕಾರ್ಮಿಕರಿಗೆ 12 ಗಂಟೆ ಕೆಲಸ ಮಾಡುವ ಸಾಮಥ್ರ್ಯವಿದೆಯೇ?
ಲಾಕ್‍ಡೌನ್ ಸಂದರ್ಭದಲ್ಲಿ ಜನವಿರೋಧಿ ಕಾಯ್ದೆಗಳನ್ನು ತಂದರೆ ಪ್ರತಿಭಟನೆಗೆ ಅವಕಾಶವಿರುವುದಿಲ್ಲ ಎಂಬ ಕಾರಣಕ್ಕೆ ಜಾರಿಗೆ ತರಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ಸಣ್ಣ ಕೈಗಾರಿಕೆಗಳು ಕೊರೊನಾದಿಂದ ಸಂಕಷ್ಟಕ್ಕೀಡಾಗಿಲ್ಲ. ಜಿಎಸ್‍ಟಿ ಜಾರಿಗೆ ತಂದಾಗಲೇ ಅವು ಮುಚ್ಚುವ ಹಂತವನ್ನು ತಲುಪಿದ್ದೆವು. ಕಾಯ್ದೆಯ ತಿದ್ದುಪಡಿ ಅಗತ್ಯವಿದ್ದರೆ ತಕ್ಷಣವೇ ಅಧಿವೇಶನ ಕರೆಯಬೇಕು,ಅದಕ್ಕೂ ಮುನ್ನ ಉದ್ದಿಮೆದಾರರು, ಕಾರ್ಮಿಕ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದರು.

ಈ ಎರಡೂ ಸುಗ್ರೀವಾಜ್ಞೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಪತ್ರ ಬರೆದು ತಮ್ಮ ವಿವೇಚನೆ ಅನುಸಾರ ತೀರ್ಮಾನ ಮಾಡಿ ಎಂದು ಕೋರಲಾಗುವುದು ಎಂದರು. ಮಂಡ್ಯ ಮೈ ಶುಗರ್ ಕಾರ್ಖಾನೆಯನ್ನು ಖಾಸಗಿಕರಣಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಜೂನ್ ಜುಲೈನಲ್ಲಿ ಕಬ್ಬು ಅರೆಯಬೇಕು. ಇನ್ನು ಟೆಂಡರ್ ಕರೆಯುವ ಪ್ರಕ್ರಿಯೆಯಲ್ಲಿದೆ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಖಾಸಗೀಕರಣಗೊಳಿಸಿದರೆ ಉತ್ತರ ಕರ್ನಾಟಕದಲ್ಲಿ ಪ್ರತಿವರ್ಷ ಕಾರ್ಖಾನೆಗಳು ಕಬ್ಬಿನ ಹಣ ಕೊಡಲಿಲ್ಲ ಎಂದು ಪ್ರತಿಭಟನೆ ಮಾಡುವ ಪರಿಸ್ಥಿತಿ ಉಂಟಾಗುತ್ತದೆ. ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಬಿಜೆಪಿ ನಾಯಕರು ಪಡೆಯುವ ಪ್ರಯತ್ನ ಮಾಡುತ್ತಿದ್ದು, ಸೂಕ್ತ ಸಮಯದಲ್ಲಿ ಬಹಿರಂಗಪಡಿಸುವುದಾಗಿ ಹೇಳಿದರು.

ಯಾವುದೇ ಪೂರ್ವ ಸಿದ್ದತೆ ಇಲ್ಲದೆ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದೆ.ಪ್ರತಿದಿನ ಒಂದೊಂದು ನಿಯಮ ಕೈಗೊಂಡು ಜನರಲ್ಲಿ ಗೊಂದಲ ಉಂಟು ಮಾಡಿದರು. ವಿವಿಧ ಪರಿಹಾರ ನೀಡಲು ರಾಜ್ಯ ಸರ್ಕಾರ 1600 ಕೋಟಿ ರೂ. ಪ್ಯಾಕೇಜ್ ಘೋಷಿಸಿದೆ. ಇದು ಘೋಷಣೆಯಾಗೇ ಉಳಿಯಬಾರದು.

ಹೂ ಮಾರುವವರು, ವಿಶ್ವಕರ್ಮರು, ಆಟೋ ಚಾಲಕರು ಸೇರಿದಂತೆ 50 ಲಕ್ಷ ಮಂದಿ ಆಗಬಹುದು. ಯಾವುದೇ ಪೂರ್ವ ಸಿದ್ದತೆ ಇಲ್ಲದೆ ಘೋಷಣೆ ಮಾಡಲಾಗಿದೆ. 50 ಲಕ್ಷ ಮಂದಿಗೂ ಪರಿಹಾರ ನೀಡಲು ಎರಡೂವರೆ ಸಾವಿರ ಕೋಟಿ ಬೇಕಾಗುತ್ತದೆ. ನೊಂದಾಯಿತ ಕಟ್ಟಡ ಕಾರ್ಮಿಕರಿಗೆ 21 ಲಕ್ಷ ಇದ್ದಾರೆ.

ಅವರಿಗೆ 1 ಸಾವಿರ ಕೋಟಿ ರೂ. ಬೇಕು.ಅ ದಕ್ಕೆ ಸರ್ಕಾರದ ಹಣ ಕೊಡಬೇಕಿಲ್ಲ. ಅವರ ಕಲ್ಯಾಣ ನಿಧಿಯಲ್ಲೇ ಹಣವಿದೆ ಎಂದರು.  ಬಳ್ಳಾರಿಯಲ್ಲಿ ಮೃತಪಟ್ಟ ಆಶಾಕಾರ್ಯಕರ್ತೆ ಕುಟುಂಬದವರಿಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದಂತೆ 50 ಲಕ್ಷ ರೂ. ವಿಮಾ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.

Facebook Comments

Sri Raghav

Admin