ಕೊರೋನಾ ಭಯದಲ್ಲಿರುವ ಜನರಿಗೆ ಧೈರ್ಯ ಹೇಳುವಂತೆ ಕಾರ್ಯಕರ್ತರಿಗೆ ಹೆಚ್ಡಿಕೆ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.22-ಕೊರೋನಾ ವೈರಸ್ ಭಯದಿಂದ ಬದುಕುತ್ತಿರುವ ಜನತೆಗೆ ಪಕ್ಷದ ಕಾರ್ಯಕರ್ತರು ನಾಯಕರು ಸ್ಥಳೀಯವಾಗಿ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಜೆಡಿಎಸ್ -ಕಾಂಗ್ರೆಸ್ ಸರ್ಕಾರ ಪತನಗೊಂಡ ಒಂದು ವರ್ಷದ ತುಂಬಿದ ಸಂದರ್ಭದಲ್ಲಿ ತಮ್ಮ ಮನದಾಳ ಮಾತುಗಳನ್ನು ಸುದೀರ್ಘವಾಗಿ ಬಿಚ್ಚಿಟ್ಟಿರುವ ಅವರು, ಕಾಂಗ್ರೆಸ್ ಜೊತೆ ಮೈತ್ರಿಗೆ ಜೆಡಿಎಸ್ ಎಂದೂ ಮುಂದಾಗಿರಲಿಲ್ಲ. ಮುಂದೆಯೂ ಕೂಡ ಮೈತ್ರಿಗೆ ನಾವು ಹಪಾಹಪಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಸೋಂಕಿನಿಂದ ವಿಚಲಿತರಾಗದೆ ಧೈರ್ಯದಿಂದ ಎದುರಿಸುವಂತೆ ಅರಿವು ಮೂಡಿಸಬೇಕು. ಇಡೀ ಮನುಕುಲಕ್ಕೆ ಕಾಡುತ್ತಿರುವ ಈ ಸೋಂಕು ವ್ಯಾಪಕವಾಗಿ ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾಗರಿಕರಲ್ಲಿ ಪ್ರಜ್ಞೆ ಮೂಡಿಸಬೇಕು ಎಂದು ಹೇಳಿದ್ದಾರೆ.

ಕೊರೋನಾ ಸೋಂಕು ಉಂಟುಮಾಡಿರುವ ತಲ್ಲಣಗಳಿಗೆ ನಾಳೆ ಔಷಧ ದಕ್ಕಬಹುದು. ಆದರೆ ಮುಂದಿನ ಮೂರ್ನಾಲ್ಕು ವರ್ಷಗಳು ಮತ್ತು ಭವಿಷ್ಯದಲ್ಲಿ ಆರ್ಥಿಕ-ಸಾಮಾಜಿಕ ಸೇರಿದಂತೆ ಸರ್ವಕ್ಷೇತ್ರಗಳಲ್ಲೂ ಎದುರಾಗಬಹುದಾದ ಸಂಭವನೀಯ ಅನಾಹುತಗಳಿಗೆ ಈಗ ಮತ್ತು ಭವಿಷ್ಯದಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುವ ಮತ್ತು ಅದಕ್ಕೆ ಪರಿಹಾರ ದಕ್ಕಿಸಿಕೊಳ್ಳುವ ನಾಯಕತ್ವದ ಬಗ್ಗೆ ಮುಕ್ತ ವಿಮರ್ಶೆಗೆ ಈಗಿನಿಂದಲೇ ಒಂದು ಸಮಷ್ಟಿ ಪ್ರಜ್ಞೆಯ ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುವುದು ಈಗಿನ ಅನಿವಾರ್ಯತೆ ಎಂದಿದ್ದಾರೆ.

ಈ ಒಂದು ಕಾರಣಕ್ಕೆ ನನ್ನ ಮನದಾಳದ ಮಾತುಗಳನ್ನು ನಿಮ್ಮ ಮಡಿಲಿಗೆ ಒಪ್ಪಿಸುತ್ತಿರುವುದಾಗಿ ಹೇಳಿದ್ದಾರೆ‌. ನಾನು ಎಂದಾದರೂ ಈ ನಾಡಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸನ್ನೂ ಕಂಡವನಲ್ಲ. ಈ ಮಾತನ್ನು ನಾನು ಮತ್ತೆ ಮತ್ತೆ ಹೇಳುತ್ತಲೆ ಬಂದಿದ್ದೇನೆ.

ಮೊದಲ ಸಲ ಶಾಸಕನಾದ ಸಂದರ್ಭದಲ್ಲೆ ರಾಜಕೀಯ ಸನ್ನಿವೇಶವೊಂದು ನಾನು ಮುಖ್ಯಮಂತ್ರಿಯನ್ನಾಗುವ ಅವಕಾಶವನ್ನು ತಂದುಕೊಟ್ಟಿತು.  2018 ರಲ್ಲಿ ಜಾತ್ಯತೀತ ಜನತಾದಳ ಪಕ್ಷ ಗಳಿಸಿದ್ದು ಕೇವಲ 37 ಸ್ಥಾನಗಳಷ್ಟೇ.

ಯಾವ ಪಕ್ಷಗಳಿಗೂ ಮತದಾರ ಬಹುಮತದ ಸ್ಪಷ್ಟ ಆದೇಶ ಕೊಟ್ಟಿರಲಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿಯುವ ಅತೀವ ನಿರೀಕ್ಷೆ ಹೊಂದಿದ್ದ ಭಾರತೀಯ ಜನತಾ ಪಕ್ಷ ಗದ್ದುಗೆಯ ಸನಿಹದಲ್ಲಿ ಮುಗ್ಗರಿಸಿ ಬಿತ್ತು.

ಆನಂತರದ ಸ್ಥಾನ ಪಡೆದಿದ್ದ ಕಾಂಗ್ರೆಸ್ ಬಿಜೆಪಿಗೆ ಅಧಿಕಾರ ತಪ್ಪಿಸಲು ಜೆಡಿಎಸ್ ನೊಂದಿಗೆ ದೋಸ್ತಿಗೆ ಮುಂದಾಗಿ ಬೇಷರತ್ ಬೆಂಬಲವನ್ನು ವ್ಯಕ್ತಪಡಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಮುಖ್ಯಮಂತ್ರಿ ಗಾದಿಯನ್ನೇ ಬಿಟ್ಟುಕೊಟ್ಟಿತು.

ನಾನು ಪ್ರಮಾಣವಚನ ಸ್ವೀಕರಿಸಿದ ಮರುಕ್ಷಣದಿಂದಲೇ ನಮ್ಮ ದೋಸ್ತಿ ಸರ್ಕಾರವನ್ನು ಕೆಡವಲು ಬಿಜೆಪಿ ಹತ್ತಾರು ಬಾರಿ ಕುಟಿಲ ರಾಜಕೀಯ ತಂತ್ರಗಳನ್ನು ಬಳಸಿ, ಮುಖಭಂಗವನ್ನೂ ಅನುಭವಿಸಿತು.

14 ತಿಂಗಳು ನನ್ನ ಅಧಿಕಾರಾವಧಿ ಮುಗಿಯುವ ಬೆನ್ನಲೇ ವಾಮಮಾರ್ಗವನ್ನು ಅನುಸರಿಸಿ ಜನಪರ ಸರ್ಕಾರವನ್ನು ಕೆಡವಲು ಆಪರೇಷನ್ ಕಮಲದ ಮೂಲಕ ಮತ್ತೊಮ್ಮೆ ಪ್ರಜಾಪ್ರಭುತ್ವದ ಬುಡಕ್ಕೆ ಕೊಡಲಿ ಪೆಟ್ಟು ಹಾಕುವಲ್ಲಿ ಬಿಜೆಪಿ ಕೈ ಮೇಲಾಯಿತು.

14 ತಿಂಗಳ ಅವಧಿಯಲ್ಲಿ ಯಾವುದೇ ಲೋಪವನ್ನು ಮಾಡಲಿಲ್ಲ. ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಳ್ಳುವಂತೆ ಲೋಕಸಭಾ ಚುನಾವಣೆ ಮುಗಿಯಲಿ, ಅಲ್ಲಿಯವರಿಗೆ ತಡೆಯಿರಿ ಎಂಬ ‘ಸಿದ್ಧೌಷಧ’ ಮಂತ್ರ ಜಪಿಸುತ್ತಲೇ ಕಾಂಗ್ರೆಸ್ಸಿಗರು ಬಂದರು. ಅದು ಜಗಜ್ಜಾಹೀರಾಯಿತು.

ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ನನ್ನ ಸರ್ಕಾರ ತೆಗೆಯುವ ವಿಷಯದಲ್ಲಿ ಎಷ್ಟೊಂದು ಒಳ ಮತ್ತು ಕುಟಿಲ ತಂತ್ರಗಳ ಮೊರೆಹೋದರು ಎಂಬುದನ್ನು ಆ ದೊಡ್ಡ ನಾಯಕರೇ ಆತ್ಮಾವಲೋಕನ ಮಾಡಿಕೊಳ್ಳಲಿ.
ಪ್ರಮಾಣವಚನ ಸ್ವೀಕಾರಕ್ಕೆ ದೇಶದ 24 ರಾಜ್ಯಗಳ ಪ್ರಮುಖ ನಾಯಕರು ಹಾಗೂ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದು ಕೂಡ ಕೆಲ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಕಾರಣವಾಗಿತ್ತು.

ಬೇಷರತ್ ಬೆಂಬಲ ಎಂದ ಕಾಂಗ್ರೆಸ್ಸಿಗರು ನಂತರ ಸಂಪುಟದಲ್ಲಿ ಇಂತಿಷ್ಟು ಸ್ಥಾನಗಳು ಬೇಕು. ಇಂತಹದೇ ಖಾತೆಗಳು ಬೇಕು ಎಂದು ಕ್ಯಾತೆ ತೆಗೆದಿದ್ದು ಮಾತ್ರವಲ್ಲದೆ ನಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಂಡರು. ನನ್ನನ್ನು ಗುಮಾಸ್ತನ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಹಲವು ಬಾರಿ ಹೇಳಿದ್ದು ಉಂಟು. ಕಾಂಗ್ರೆಸ್ ನಾಯಕರು ಇದನ್ನು ಪರಮಾರ್ಶೆ ಮಾಡಿಕೊಳ್ಳಲಿ.

2019ರ ಜುಲೈ 22ರಂದು ರಾಜೀನಾಮೆ ಕೊಟ್ಟು ಹೊರ ಬರುವಾಗ ನಾನು ‘ಸಂತೋಷದಿಂದಲೇ ಅಧಿಕಾರದಿಂದ ನಿರ್ಗಮಿಸುತ್ತಿದ್ದೇನೆ’. ಎಂದು ರಾಜ್ಯ ವಿಧಾನಸಭೆಯಲ್ಲಿ ನಗುಮೊಗದಿಂದಲೇ ಹೇಳಿ ಹೊರ ನಡೆದೆ. ಆನಂತರ ಅಧಿಕಾರಕ್ಕೆ ಬಂದ ಬಿಜೆಪಿಯ ‘ಪವಿತ್ರ’ ಸರ್ಕಾರಕ್ಕೆ ನೆರೆ ಹಾವಳಿಯಿಂದ ನೆಂದು, ನಲುಗಿದ ಎಲ್ಲವನ್ನೂ ಕಳೆದುಕೊಂಡ ಸಂತ್ರಸ್ತರಿಗೆ ಪ್ರಾಮಾಣಿಕವಾಗಿ ಸ್ಪಂದಿಸುವಂತೆ ರಚನಾತ್ಮಕ ಸಲಹೆಗಳ ಮೂಲಕ ಕಿವಿ ಹಿಂಡಿದ್ದೆ.

ಕೊರೋನಾ ವೈರಸ್ ಭಾರತಕ್ಕೂ ಅಪ್ಪಳಿಸಿ ಐದಾರು ತಿಂಗಳಾಯಿತು. ಕೊರೊನಾ ವೈರಸ್ ತಡೆಯುವಲ್ಲಿ, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ, ವೆಂಟಿಲೇಟರ್‌ಗಳ ಸಮರ್ಪಕ ಪೂರೈಕೆ ಮಾಡುವಲ್ಲಿ ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಈಗ ರಾಜ್ಯ ಎದುರಿಸುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ರಾಜ್ಯದ ಪುನರ್ ನಿರ್‍ಮಾಣ ಅಂತಿಮವಾಗಿ ಜನರ ಕೈಯಲ್ಲೇ ಇದೆ. ಈ ದಿಕ್ಕೆಟ್ಟ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಮಾತೃಹೃದಯದ ನಾಯಕತ್ವದ ಅಗತ್ಯ ಇದೆ ಎಂಬುದು ಜನತೆಗೂ ಮನವರಿಕೆ ಆಗುತ್ತಿದೆ ಎಂದು ಭಾವಿಸಿದ್ದೇನೆ.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನೆರೆ ಸಂತ್ರಸ್ತರಿಗೆ ಸ್ಪಂದಿಸಿದ ರೀತಿ ಆ ಭಗವಂತನಿಗೇ ಪ್ರೀತಿ. ಈಗ ರಾಜ್ಯದಲ್ಲಿ ನಾಯಕತ್ವದ ತುರ್ತು ಬದಲಾವಣೆಯ ಅಗತ್ಯವೂ ಇಲ್ಲ. ನಾನು ಈಗ ನಾಯಕತ್ವದ ಸಂಘರ್ಷಕ್ಕೆ ಇಳಿಯುತ್ತಿಲ್ಲ. ಜಗತ್ತನ್ನು ಕರೋನಾ ಪೂರ್ವಕಾಲ ಮತ್ತು ಕಾರೋನೋತ್ತರ ಕಾಲ ಎಂದು ವ್ಯಾಖ್ಯಾನ ಮಾಡಬಹುದು. ಚರಿತ್ರೆಯಲ್ಲೂ ಇದು ದಾಖಲಾಗುತ್ತದೆ ಎಂದು ಹೇಳಿದ್ದಾರೆ‌

Facebook Comments

Sri Raghav

Admin