ಆನ್‍ಲೈನ್ ಮದ್ಯ ಮಾರಾಟ ಕೈಬಿಡಿ, ಅತಿಥಿ ಶಿಕ್ಷಕರಿಗೆ ನೆರವಾಗಿ : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.8- ಆನ್‍ಲೈನ್‍ನಲ್ಲಿ ಮದ್ಯ ಮಾರಾಟದಂತಹ ಮನೆಹಾಳು ಚಿಂತನೆಯನ್ನು ಕೈ ಬಿಡಿ ಎಂದು ಆಗ್ರಹಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ, ವೇತನವಿಲ್ಲದೆ ಸಂಕಷ್ಟದಲ್ಲಿರುವ ಎರಡು ಲಕ್ಷ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರ ನೆರವಿಗೆ ಧಾವಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಸಂಪನ್ಮೂಲ ಸಂಗ್ರಹಣೆಯಲ್ಲಿ ಮುಗ್ಗರಿಸಿ ಬಿದ್ದಿರುವ ಅಬಕಾರಿ ಇಲಾಖೆ ಆನ್ಲೈನ್ ಮೂಲಕ ಮನೆ ಬಾಗಿಲಿಗೆ ಮದ್ಯ ಪೂರೈಸುವ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಎಂಎಸ್‍ಐಎಲï ಮದ್ಯದಂಗಡಿ ತೆರೆಯುವ ಚಿಂತನೆ ಮಾಡಿದೆ. ಕೂಡಲೇ ಪ್ರಸ್ತಾವನೆ ಕೈಬಿಡುವಂತೆ ಒತ್ತಾಯಿಸಿದ್ದಾರೆ.

ಕೊರೋನಾ ವೈರಸ್ ನಂತರ ಎದುರಾದ ಲಾಕ್‍ಡೌನ್ ಪರಿಸ್ಥಿತಿಯಿಂದ ಜನತೆ ಆದಾಯ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೈನಂದಿನ ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮನೆಬಾಗಿಲಿಗೆ ಮದ್ಯ ಪೂರೈಸುವ ಕೆಟ್ಟ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಕಿಡಿಕಾರಿದ್ದಾರೆ.

ಬೆಕ್ಕಿಗೆ ಚೆಲ್ಲಾಟವಾದರೆ ಇಲಿಗೆ ಪ್ರಾಣ ಸಂಕಟ ಎಂಬಂತೆ ಮದ್ಯದಂಗಡಿಗಳನ್ನು ಹೊಸದಾಗಿ ತೆರೆಯುವ ಇಲ್ಲ ಆನ್ಲೈನ್ ಮೂಲಕ ಮದ್ಯ ಪೂರೈಸುವ ಚಿಂತನೆ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡಲಿದೆ. ತನ್ನ ಖಜಾನೆ ತುಂಬಿಸಿಕೊಳ್ಳಲು ಸರ್ಕಾರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವುದು ಸರಿಯಲ್ಲ ಎಂದಿದ್ದಾರೆ.

ಈ ಸಂಬಂಧ ಖಾಸಗಿ ಕಂಪನಿ ಜೊತೆ ಮಾತುಕತೆ ನಡೆಸಿರುವುದು ಹಾಗೂ ಅಬಕಾರಿ ಆಯುಕ್ತರು ಈ ಬಗ್ಗೆ ಒಲವು ಹೊಂದಿರುವುದು ನನ್ನ ಗಮನಕ್ಕೆ ಬಂದಿದೆ. ಸರ್ಕಾರ ಇಂತಹ ಅವಿವೇಕದ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

# ಅತಿಥಿ ಬೋಧಕ ವರ್ಗಕ್ಕೆ ನೆರವಾಗಲು ಒತ್ತಾಯ:
ಕೊರೋನಾ ಸಂಕಷ್ಟ ಕಾಲದಲ್ಲಿ ವೇತನವಿಲ್ಲದೆ ಕಂಗೆಟ್ಟಿರುವ ರಾಜ್ಯದ ಸುಮಾರು ಎರಡೂವರೆ ಲಕ್ಷ ಖಾಸಗಿ ಶಾಲಾ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ನೆರವಿಗೆ ಸರ್ಕಾರ ತಕ್ಷಣವೇ ಮುಂದಾಗಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ರಾಜ್ಯದಾದ್ಯಂತ 20 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳ ಶಿಕ್ಷಕರಿಗೆ ಕಳೆದ ಏಪ್ರಿಲ್ ನಿಂದ ವೇತನ ಸಿಗದೇ ದೈನಂದಿನ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಅತಿಥಿ ಉಪನ್ಯಾಸಕರ ನೋವು ಇದಕ್ಕಿಂತ ಭಿನ್ನವಾಗಿಲ್ಲ. ಸರ್ಕಾರ ಈ ಬಗ್ಗೆ ಖಾಸಗಿ ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಅತಂತ್ರಕ್ಕೆ ಸಿಲುಕಿರುವ ಶಿಕ್ಷಕರ ನೆರವಿಗೆ ತಕ್ಷಣ ಧಾವಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೆಲ ಖಾಸಗಿ ಶಾಲೆಗಳಲ್ಲಿ ಶೇಕಡ ಐವತ್ತಕ್ಕಿಂತಲೂ ಕಡಿಮೆ ವೇತನ ನೀಡುತ್ತಿದ್ದರೂ ಸಕಾಲಕ್ಕೆ ಪಾವತಿಸುತ್ತಿಲ್ಲ. ಬೇರೆ ಉದ್ಯೋಗ ಗೊತ್ತಿಲ್ಲದ ಲಕ್ಷಾಂತರ ಖಾಸಗಿ ಶಿಕ್ಷಕ ಸಮುದಾಯ ಮನೆ ಬಾಡಿಗೆ ಕಟ್ಟಲೂ ಆಗದೆ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಇಂತಹ ಶಿಕ್ಷಕರಿಗೆ ಸರ್ಕಾರ ವಿಶೇಷ ಆರ್ಥಿಕ ನೆರವು ಮತ್ತು ಸಾಲ ಸೌಲಭ್ಯ ಒದಗಿಸಬೇಕು.

ವಿದ್ಯಾರ್ಥಿಗಳು ಶುಲ್ಕ ಕಟ್ಟುತ್ತಿಲ್ಲ ಎಂಬ ಕಾರಣ ಹೇಳಿ ಶಿಕ್ಷಕರನ್ನು ಕೆಲಸದಿಂದ ತೆಗೆಯಲು ಆಡಳಿತ ಮಂಡಳಿಗಳು ಮುಂದಾಗುತ್ತಿರುವುದನ್ನು ತಪ್ಪಿಸಲು ಸರ್ಕಾರ ತಡಮಾಡದೆ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

Facebook Comments

Sri Raghav

Admin