ಮಂಡ್ಯದಲ್ಲಿ ಜನರನ್ನು ಒಕ್ಕಲೆಬ್ಬಿಸುವ ಸಂಚು ನಡೀತಿದೆ : ಹೆಚ್‍ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನಾಗಮಂಗಲ, ಸೆ.20- ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆಯಲ್ಲಿ ಏಳು ಸ್ಥಾನಗಳಿಗೆ ಏಳೂ ಸ್ಥಾನಗಳನ್ನು ಜೆಡಿಎಸ್‍ಗೆ ಗೆಲ್ಲಿಸಿಕೊಟ್ಟಿರುವುದನ್ನು ಸಹಿಸದೆ ಕೆಲವರು, ಜೆಡಿಎಸ್ ವಿರುದ್ಧ ಜನರನ್ನು ಒಕ್ಕಲೆಬ್ಬಿಸುವ ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರನ್ನು ಟೀಕಿಸಿದರು.

ತಾಲೂಕಿನ ಬೆಳ್ಳೂರು ಹೋಬಳಿಯಲ್ಲಿ ಕೆಐಎಡಿಬಿಯಿಂದ 1270 ಎಕರೆ ಪ್ರದೇಶದಲ್ಲಿ 8 ತೆರೆಯಲುದ್ದೇಶಿಸಿರುವ ಕೈಗಾರಿಕಾ ಪ್ರದೇಶದ ವಿರುದ್ಧ ಆ ಭಾಗದ ರೈತರು ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ನಾನೂ ಕೂಡ ರೈತನ ಮಗ. ರೈತರ ನೋವು-ನಲಿವುಗಳು ನನಗೆ ಅರ್ಥವಾಗುತ್ತವೆ. ಈ ಭಾಗದಲ್ಲಿ ಕೈಗಾರಿಕೆಗಳನ್ನು ತೆರೆದರೆ ತಾಲೂಕಿನ ನಿರುದ್ಯೋಗಿಗಳಿಗೆ ಕೆಲಸ ಕೊಡಬಹುದು.

300-400 ಎಕರೆ ಬಂಜರು ಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ನಾನು ಮುಖ್ಯಮಂತ್ರಿಯಾಗಿದ್ದಾಗ ಮುಂಜೂರು ಮಾಡಿದ್ದು ನಿಜ. ಆದರೆ, ರೈತರ ಫಲವತ್ತಾದ ಭೂಮಿಯನ್ನು ಕಬಳಿಸಿ 1270 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ನಮ್ಮ ವಿರೋಧವಿದೆ. ಇಲ್ಲಿ ರೈತರ ತೀರ್ಮಾನವೇ ಅಂತಿಮ. ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿರೋರು ನೀವು ನಿಮ್ಮನ್ನು ಕೈಬಿಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಏನೇ ಆಗಲಿ ರೈತರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ಹಾಗಾಗಿ ಈ ಭಾಗದ ಜನರು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಧೈರ್ಯವಾಗಿರಿ ಎಂದು ತಿಳಿಸಿದರು. ಹಿಂಸೆಯಲ್ಲೂ ರೈತಪರ ಆಡಳಿತ: ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ಪ್ರಾರಂಭದಿಂದಲೂ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಸಂಚು ರೂಪಿಸಿದರು. ಹಿಂದಿನ ಕಾಂಗ್ರೆಸ್ ಸರ್ಕಾರ ರೂಪಿಸಿದ್ದ ಕಾರ್ಯಕ್ರಮಗಳನ್ನು ಕೈಬಿಡುವಂತಿಲ್ಲ ಎಂದು ತಾಕೀತು ಮಾಡಿದ್ದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 16 ಲಕ್ಷ ಮನೆ ಕಟ್ಟಲು ಕೇವಲ 3 ಕೋಟಿ ಹಣ ಮೀಸಲಿಟ್ಟು ಆದೇಶ ನೀಡಿ ಹೋಗಿದ್ದರು. ಅದಕ್ಕೆ ಹಣ ಹೊಂದಿಸಲು 29 ಸಾವಿರ ಕೋಟಿ ಹಣ ಬೇಕಿತ್ತು. ಐದು ಕೆ.ಜಿ.ಅಕ್ಕಿಯನ್ನು ಚುನಾವಣೆಗೆ ಮೊದಲು ಏಳು ಕೆ.ಜಿ.ಗೆ ಏರಿಸಿದರು. ಇದಕ್ಕೂ ಹಣ ಹೊಂದಿಸುವ ಜವಾಬ್ದಾರಿ ನನ್ನ ಹೆಗಲೇರಿತು. ಇವೆಲ್ಲದರ ನಡುವೆಯೂ ಕೇವಲ 14 ತಿಂಗಳಲ್ಲಿ ರೈತರ 23 ಸಾವಿರ ಕೋಟಿ ಮನ್ನಾ ಮಾಡಿ ಹಣವನ್ನು ಇಟ್ಟಿದ್ದೆ ಎಂದರು.

# ಹನುಮಂತನಾಣೆಗೂ ಗೊತ್ತಿಲ್ಲ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸುರೇಶ್‍ಗೌಡ, ಕಳೆದ ಚುನಾವಣೆಗೆ ಮೊದಲೇ ಈ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ಭರವಸೆ ನೀಡಿದ್ದೆವು. 300 ಎಕರೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಆದರೆ, 1270 ಎಕರೆ ಪ್ರದೇಶದಲ್ಲಿ ಭೂನಿ ಸ್ವಾಧೀನವಾಗತ್ತಿರುವ ವಿಚಾರ ಹದ್ದಿನಕಲ್ಲು ಹನುಮಂತನ ಆಣೆಯಾಗಿಯು ನಮಗೆ ಗೊತ್ತಿಲ್ಲ.

ನಾವು ನಿಮ್ಮ ವಿರೋಧಿಗಳಲ್ಲ, ಇಲ್ಲಿ ಸಾಕಷ್ಟು ರೈತರಿಗೆ ದಾಖಲೆಗಳಿಲ್ಲ. ಪಿತ್ರಾರ್ಜಿತ ಆಸ್ತಿನೂ ಇನ್ನು ದುರಸ್ತಿಯಾಗಿಲ್ಲ, ನನಗೆ ಐವತ್ತು ಕೋಟಿ ಕಮೀಷನ್ ಕೊಟ್ಟಿದ್ದಾರೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ನಾನು ಯಾರಿಂದಲೂ ಒಂದು ನಯಾಪೈಸೆ ಲಂಚ ತೆಗೆದುಕೊಂಡಿಲ್ಲ. ಯಾರಿಗೂ ಅನುಮಾನ ಬೇಡ. ನಿಮ್ಮ ಪರವಾಗಿ ನಾವಿದ್ದೇವೆ ಎಂದು ಹೇಳಿದರು.

ಕೈಗಾರಿಕೆ ಸ್ಥಾಪನೆಗೆ ಬಿಡುವುದಿಲ್ಲ: ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮಾತನಾಡಿ, ರೈತರ ಭೂಮಿ ಕಬಳಿಸಿ ಇಲ್ಲಿ ಯಾವುದೇ ಕೈಗಾರಿಕೆಗಳನ್ನು ಮಾಡಲು ಬಿಡುವುದಿಲ್ಲ. ರೈತರು ಯಾವುದಕ್ಕೂ ಹೆದರಬೇಕಾಗಿಲ್ಲ ಎಂದರು. ಮುನ್‍ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು, ಬಿಳಗುಂದ ದಾಸೆಟ್ಟಿ, ವಕೀಲ ಮುಕುಂದ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Facebook Comments