ಕೆಆರ್ ಪೇಟೆಯಂತೆ ಶಿರಾದಲ್ಲೂ ಕಮಲ ಅರಳಲ್ಲ : ಎಚ್‍ಡಿಕೆ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.21- ಆರ್‍ಆರ್ ನಗರ ಮತ್ತು ಶಿರಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಹಣಬಲದ ಮೂಲಕ ಗೆಲುವು ಸಾಧಿಸಲು ಬಿಜೆಪಿ ಹೊರಟಿದ್ದಾರೆ. ಆದರೆ, ಶಿರಾದಲ್ಲಿ ಹಣಬಲದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣಬಲದಿಂದ ಶಿರಾದಲ್ಲಿ ಗೆಲ್ಲಲು ಆಗಲ್ಲ. ಹಣಬಲದಿಂದ ಗೆಲ್ಲುತ್ತೇವೆ ಅನ್ನೋದು ಭ್ರಮೆ. ಕೆಆರ್ ಪೇಟೆಯಲ್ಲಿ ಕಮಲ ಅರಳಿಸಿದಂತೆ ಶಿರಾದಲ್ಲಿ ಕಮಲ ಅರಳಿಸಲು ಆಗಲ್ಲ. ಅಂದಿನ ಚುನಾವಣೆಗೂ ಇಂದಿನ ಚುನಾವಣೆಗೂ ವ್ಯತ್ಯಾಸವಿದೆ. ಎಲ್ಲ ದಿನವೂ ಭಾನುವಾರ ಆಗಿರುವುದಿಲ್ಲ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‍ಗೆ ಘನತೆಯೇ ಇಲ್ಲ. ಮುಖ್ಯಮಂತ್ರಿ ಆಗಿದ್ದಾಗ ನಾನು ಹೇಗಿದ್ದಾ ಎಂಬುದು ಜನತೆಗೆ ಗೊತ್ತು. ರಾಯಚೂರು, ಬೀದರ್, ಕಲಬುರಗಿಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದೆ. ಕಟೀಲ್ ಅವರಿಂದ ರಾಜಕೀಯ ಕಲಿಯಬೇಕಿಲ್ಲ. ನನ್ನಷ್ಟು ಜನಸಾಮಾನ್ಯರಿಗೆ ಸಿಗುವವವರು ಯಾರೂ ಇಲ್ಲ.

ನಾನು ರಾಜಕಾರಣಿಗಳಿಗೆ ಸವಾಲು ಹಾಕಿ ಕೇಳುತ್ತೇನೆ. ಅಧಿಕಾರ ಇಲ್ಲದಿದ್ದರೂ ಜನ ದಿನನಿತ್ಯ ನಮ್ಮ ಮನೆಗೆ ಬರುತ್ತಾರೆ. ಆದರೆ, ಕಟೀಲ್ ಅವರು ಎಷ್ಟು ಜನ ಬಡವರನ್ನು ನೋಡಿದ್ದಾರೆ, ಎಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.

ಒಂದು ವರ್ಷದ ಬಿಜೆಪಿಯ ದುರಾಡಳಿತವನ್ನು ಜನತೆ ಗಮನಿಸಿದ್ದು, ಅವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದ ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕಳುಹಿಸಿದವರೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂಬ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರ ಹೇಳಿಕೆಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಉಪಮುಖ್ಯಮಂತ್ರಿಗೂ ನಿಖರ ಮಾಹಿತಿ ಇರಬೇಕಲ್ಲವೆ? ಯಾರು ಸರ್ಕಾರ ಉಳಿಸುತ್ತಿದ್ದೇವೆ ಎಂದು ಹೇಳಿಕೊಂಡು ಹೊರಟಿದ್ದರು. ಒಳಗೆ ಏನು ನಡೆದಿತ್ತು ಎಂಬ ಸತ್ಯ ಈಗ ಹೊರಗೆ ಬರುತ್ತಿದೆ. ಅದರ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ ಎಂದರು.

ಕುಣಿಯಲಾರದವನಿಗೆ ನೆಲ ಡೊಂಕು ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, 14 ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ 5 ವರ್ಷದ ಆಡಳಿತಾವಧಿಗಿಂತ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಅಧಿಕಾರ ನಡೆಸಲು ಕೊಟ್ಟ ತೊಂದರೆ ನಡುವೆಯೇ ಅವರು ನೀಡಿದ ಎಲ್ಲ ಭಾಗ್ಯ ಮುಂದುವರಿಸಿದ್ದೆ.

ಚುನಾವಣೆ ಸಂದರ್ಭದಲ್ಲಿ 7ಕೆಜಿ ಅಕ್ಕಿ ಘೋಷಣೆ ಮಾಡಿ 500 ಕೋಟಿ ಹಣವನ್ನೂ ಇಟ್ಟಿರಲಿಲ್ಲ. ಅದರ ಹೊಣೆಯನ್ನು ಮುಖ್ಯಮಂತ್ರಿಯಾಗಿ ನಾನು ಹೊರಬೇಕಾಯಿತು. ಕುಣಿಯಲಾರದೆ ಅದನ್ನೆಲ್ಲ ಮಾಡಿದ್ದೆನೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ ಕಮಿಟ್‍ಮೆಂಟ್ ಕ್ಲಿಯರ್ ಮಾಡಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಕೈಗಾರಿಕಾಭಿವೃದ್ಧಿಗೆ 9 ಕ್ಲಸ್ಟರ್ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಹೇಳುವ ಆತ್ಮ ನಿರ್ಭರ ವಿಚಾರಕ್ಕೂ ಮುನ್ನವೇ ಕಾಂಪಿಟ್ ವಿತ್ ಚೀನಾ ಎಂಬ ಯೋಜನೆ ಜಾರಿಗೆ ತರಲಾಗಿತ್ತು.

ಅದನ್ನು ನಕಲು ಮಾಡಿ ಆತ್ಮ ನಿರ್ಭರ ಎಂಬ ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್‍ನವರು ಮೈತ್ರಿ ಸರ್ಕಾರದ ಅವಧಿಯಲ್ಲಿ ನೀಡಿದ ತೊಂದರೆ ನಡುವೆಯೇ ಸಿದ್ದರಾಮಯ್ಯ ಅವರಿಗಿಂತ ಉತ್ತಮ ಕೆಲಸ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡರು.

Facebook Comments