ರೈತರಿಗೆ ಮಾರಕವಾದ ನಿರ್ಧಾರ ಬಂದ ಕೂಡಲೇ ಜೆಡಿಎಸ್ ಬಾಗಿಲು ಮುಚ್ಚುತ್ತೇವೆ :ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.12- ರೈತರಿಗೆ ಮಾರಕವಾದ ತೀರ್ಮಾನವನ್ನು ನಮ್ಮ ಪಕ್ಷದಲ್ಲಿ ಕೈಗೊಂಡ ದಿನವೇ ಜೆಡಿಎಸ್ ಬಾಗಿಲನ್ನು ಮುಚ್ಚುತ್ತೇವೆ. ಅಲ್ಲದೆ ರಾಜಕೀಯದಿಂದಲೂ ನಿವೃತ್ತಿ ಹೊಂದುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಒಪ್ಪಿಗೆ ಪಡೆದಂತಹ ಭೂ ಸುಧಾರಣೆ ತಿದ್ದುಪಡಿ ವಿಧೇಯಕ ರೈತರಿಗೆ ಮಾರಕವಾಗಿಲ್ಲ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ರೈತರಿಗೆ ಅನುಕೂಲವಾಗುವಂತಹ ತೀರ್ಮಾನವನ್ನು ಕೈಗೊಳ್ಳುತ್ತೇವೆ. ಈ ವಿಚಾರದಲ್ಲಿ ರಾಜೀ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗೋಹತ್ಯೆ ನಿಷೇಧ ವಿಧೇಯಕವನ್ನು 2010ರಲ್ಲೇ ವಿರೋಧ ಮಾಡಿದ್ದೆವು. ಆಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ವಿಧೇಯಕಕ್ಕೆ ಅಂಕಿತ ಹಾಕಬಾರದೆಂದು ಮನವಿ ಮಾಡಿದ್ದೆವು. ಈಗಲೂ ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ನಮ್ಮ ವಿರೋಧವಿದೆ. ವಿಧಾನಪರಿಷತ್‍ನಲ್ಲಿ ಪಶುಸಂಗೋಪನೆ ಸಚಿವರು ವಿಧೇಯಕ ಮಂಡಿಸಲು ಸಿದ್ದರಾಗಿ ಬಂದಿದ್ದರು. ಜೆಡಿಎಸ್ ವಿರೋಧ ಮಾಡಲಿದೆ ಎಂಬ ಕಾರಣಕ್ಕೆ ಮಂಡನೆ ಮಾಡಲಿಲ್ಲ ಎಂದರು.

ಗೋಮಾತೆಗೆ ಗೌರವ ಕೊಡುವುದು ನಮ್ಮ ಸಂಸ್ಕøತಿ. ಗೋವಿನ ಬಗ್ಗೆ ನಮಗೂ ಗೌರವವಿದೆ. ಬಿಜೆಪಿಯವರಿಗೆ ಗೋ ಪೂಜೆ ಮಾಡಿ ಮತ ಪಡೆಯಬೇಕೆಂಬ ಉದ್ದೇಶವಿದೆ ಎಂದು ಟೀಕಿಸಿದರು. ಆದರೆ, ಗೋವುಗಳನ್ನು ಸಾಕುವ ರೈತರ ಬದುಕು ಹಸನಾಗಬೇಕು. ವಯಸ್ಸಾದ ಗೋವುಗಳನ್ನು ಕಂದಾಯ ಸಚಿವರು ತಮ್ಮ ಮನೆಗೆ ತಂದು ಬಿಡಲಿ ಎಂದಿದ್ದಾರೆ. ಇದು ನಾಟಕವಲ್ಲವೇ ಎಂದು ಪ್ರಶ್ನಿಸಿದರು.

ಗೋಮಾಳ ಎಷ್ಟಿದೆ, ಜಾನುವಾರುಗಳಿಗೆ ಮೇವು ಎಷ್ಟಿದೆ. ಬೆಂಗಳೂರು ಸುತ್ತಮುತ್ತ ಗೋಮಾಳ ಕಬಳಿಸಿದವರಲ್ಲಿ ಬಿಜೆಪಿ, ಕಾಂಗ್ರೆಸಿಗರೇ ಹೆಚ್ಚು ಎಂದು ದೂರಿದರು. ಬಿಜೆಪಿಯ ಜತೆಗಿನ ಯಾವುದೇ ರೀತಿಯ ಸಂಬಂಧಕ್ಕಾಗಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿಧೇಯಕಕ್ಕೆ ನಾವು ಬೆಂಬಲ ನೀಡಿಲ್ಲ. ಹಳೆಯ ಕಾಯ್ದೆ ಯಲ್ಲಿದ್ದ ಕೆಲವೊಂದು ಅಂಶಗಳನ್ನೇ ತಿದ್ದುಪಡಿ ವಿಧೇಯಕದಲ್ಲೂ ಮುಂದುವರೆಸಿದ್ದರಿಂದ ಬೆಂಬಲ ನೀಡಿದ್ದೇವೆ.

ಜೆಡಿಎಸ್ ನೀಡಿದ ಸಲಹೆ ಆಧರಿಸಿ ಸರ್ಕಾರ ಹಳೆಯ ಕಾಯ್ದೆಯಲ್ಲಿದ್ದ ನಿಯಮಗಳನ್ನೇ ಮುಂದುವರೆಸಿದೆ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿಯನ್ನು ಇಂದೂ ಮುಂದುವರೆಸಿದ ಕುಮಾರಸ್ವಾಮಿ ಅವರು, ಕಾಯ್ದೆಯಲ್ಲಿ ಯಾವ ಅಂಶಗಳು ರೈತರಿಗೆ ಮಾರಕವಾಗಿದೆ ಎಂಬುದನ್ನು ಜನರ ಮುಂದಿಡಿ ಎಂದು ಹೇಳಿದರು.
ಏಕವಚನದಲ್ಲಿ ನಿಮ್ಮಂತೆ ದುಪ್ಪಟ್ಟು ಮಾತನಾಡಬಲ್ಲೆ. ಆ ರೀತಿ ಮಾತನಾಡುವುದೇ ಸಾಹಸವಲ್ಲ ಎಂದರು.

ನಾನೇಕೆ ನಾಚಿಕೆ ಪಡಬೇಕು. ನಿಮ್ಮಂತೆ ಡಬಲ್‍ಗೇಮ್ ರಾಜಕೀಯ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಆಗಿನ ಕಂದಾಯ ಸಚಿವ ಶ್ರೀನಿವಾಸ್‍ಪ್ರಸಾದ್ ನೇತೃತ್ವದ ಸಂಪುಟ ಉಪ ಸಮಿತಿಯು ಜಮೀನು ಖರೀದಿ ಮಾಡಲು ಇದ್ದ ಆದಾಯದ ಮಿತಿಯನ್ನು 25 ಲಕ್ಷಕ್ಕೆ ಹೆಚ್ಚಳ ಮಾಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಇದು ರೈತ ಪರ ತೀರ್ಮಾನವೋ ಇಲ್ಲ ಶ್ರೀಮಂತರ ಪರ ತೀರ್ಮಾನವೋ ಎಂದು ಪ್ರಶ್ನಿಸಿದರು.

ದೇವೇಗೌಡರು ಎರಡು ಬಾರಿ ಶಾಸಕರಾದಾಗಲೂ ಬಸ್‍ನಲ್ಲಿಯೇ ಊರಿಗೆ ಬರುತ್ತಿದ್ದರು. ರಾತ್ರಿ ವೇಳೆ ಹೇಮಾವತಿ ನದಿ ದಾಟಿ ಬೆಳಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ನೀವು ಒಬ್ಬರೇ ಅಲ್ಲ ಸೆಗಣಿ ಬಾಚಿದವರು. ನಾವೂ ಕೂಡ ಬಾಚಿದ್ದೇವೆ. ಮಾಜಿ ಮುಖ್ಯಮಂತ್ರಿಯಾಗಿ ಪದ ಬಳಕೆ ಮಾಡುವಾಗ ಗೌರವಯುತವಾಗಿ ನಡೆದುಕೊಳ್ಳಬೇಕೆಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಬೇನಾಮಿ ಆಸ್ತಿ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ನಾನು ರಾಜಕಾರಣಕ್ಕೆ ಬರುವ ಮೊದಲು ಅಥವಾ ನಂತರ ಇಲ್ಲವೇ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಾಗಲಿ ಯಾವುದಾದರೂ ಬೇನಾಮಿ ವ್ಯವಹಾರ ನಡೆಸಿರುವುದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಕುಮಾರಸ್ವಾಮಿ ತಿಳಿಸಿದರು. ಖಾಸಗಿ ಹೋಟೆಲ್‍ನಲ್ಲಿ ಬೆಳಗಿನ ಜಾವ 4 ಗಂಟೆಯವರೆಗೂ ಕ್ಲಬ್‍ವೊಂದನ್ನು ನಡೆಸುತ್ತಿದ್ದವರು ಯಾರು ಹೇಳಿ ? ನಿಮ್ಮ ರೀತಿ ಕೆಲಸ ನಾನು ಮಾಡಿಲ್ಲ. ಮುಖ್ಯಮಂತ್ರಿಯಾಗಿ ಸಮಾಜಘಾತುಕ ಕೆಲಸ ಮಾಡಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಅಧಿಕಾರ ಹೋಯ್ತು ಎಂದು ಅನುಗ್ರಹದಲ್ಲಿ ಕಣ್ಣೀರು ಹಾಕಿದವರು ನೀವು. ನಮ್ಮ ಕುಟುಂಬ ಯಾವೊತ್ತೂ ಅಧಿಕಾರ ಹೋಯ್ತು ಎಂದು ಕಣ್ಣೀರು ಹಾಕಿಲ್ಲ. ಜನರ ಸಂಕಷ್ಟಕ್ಕಾಗಿ ನಾವು ಕಣ್ಣೀರು ಹಾಕುತ್ತೇವೆ ಎಂದರು. ಅರ್ಕಾವತಿ ಬಡಾವಣೆಯಲ್ಲಿ 400 ಎಕರೆ ರೀ ಡು ಮಾಡಿಕೊಟ್ಟಿದ್ದು ರೈತರಿಗೋ ರಿಯಲ್ ಎಸ್ಟೇಟ್‍ನವರಿಗೂ ಎಂಬುದನ್ನು ಜನರಿಗೆ ತಿಳಿಸಿ ಎಂದು ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು. ರೈತರ ಪರವಾಗಿ ಹೋರಾಟ ಮಾಡುವುದನ್ನು ನಮಗೆ ನೀವು ಹೇಳಿಕೊಡಬೇಕಿಲ್ಲ ಎಂದರು.

ಎಪಿಎಂಸಿ ಕಾಯ್ದೆ ಬಗ್ಗೆ ಪರ, ವಿರೋಧ ಎರಡೂ ಇದೆ. ಪಂಜಾಬ್‍ನ ಪರಿಸ್ಥಿತಿಯೇ ಬೇರೆ, ಕರ್ನಾಟಕದ ಪರಿಸ್ಥಿತಿಯೇ ಬೇರೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪ್ರಧಾನಿಯವರು ಹೇಳುತ್ತಿದ್ದಾರೆ. ಒಂದು ಅವಕಾಶ ಮಾಡಿಕೊಡಿ. ಕಾದು ನೋಡೋಣ ಎಂದರು.

ಬಿಜೆಪಿ ಬಗ್ಗೆ ಯಾವುದೇ ಮೃದು ಧೋರಣೆ ಇಲ್ಲ. ಗುಲಾಮತನಕ್ಕೂ ಜೆಡಿಎಸ್ ಪಕ್ಷವನ್ನು ಒಳಪಡಿಸಿಲ್ಲ. ವಿರೋಧ ಪಕ್ಷದಲ್ಲಿದ್ದರೂ ನಾಡಿನ ಬೆಳವಣಿಗೆಗೆ ಸಹಕಾರ ನೀಡಬೇಕಾಗುತ್ತದೆ ಎಂದರು. ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಮಾಜಿ ಸದಸ್ಯ ಎಂ.ಟಿ.ಕೃಷ್ಣಪ್ಪ, ಬೆಂಗಳೂರು ನಗರ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

 

Facebook Comments